ಲಕ್ನೋ[ಫೆ.06]: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಬುಧವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿಂಧಿಯಾಗೆ ಪಶ್ಚಿಮ ಯುಪಿಯ ಜವಾಬ್ದಾರಿ ವಹಿಸಲಾಗಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಅವರು ವಿಧಿ- ವಿಧಾನದಂತೆ ಪೂಜೆ ನಡೆಸಿ ತಮ್ಮ ಕೆಲಸ ಆರಂಭಿಸಿದ್ದಾರೆ. ವಿಶೇಷವೆಂದರೆ ಸಿಂಧಿಯಾ ಹಾಗೂ ಪ್ರಿಯಾಂಕಾ ಗಾಂಧಿಯವರ ಕಚೇರಿ ಒಂದೇ ಕೋಣೆಯಲ್ಲಿರಲಿದೆ. ಪ್ರಿಯಾಂಕಾರನ್ನು ಪೂರ್ವ ಯುಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಕಚೇರಿಯಲ್ಲಿ ಈ ಮೊದಲು ಕೇವಲ ಪ್ರಿಯಾಂಕಾ ಗಾಂಧಿ ವಾದ್ರಾರ ಹೆಸರಿನ ಬೋರ್ಡ್ ಲಗತ್ತಿಸಲಾಗಿತ್ತು. ಆದರೀಗ ರಾತ್ರೋ ರಾತ್ರಿ ಸಿಂಧಿಯಾರ ನೇಮ್ ಪ್ಲೇಟ್ ಕೂಡಾ ಹಾಕಲಾಗಿದೆ.

ಮಂಗಳವಾರದಂದು ನೇಮ್ ಪ್ಲೇಟ್ ಹಾಕಿದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಪ್ರಧಾನ ಕಚೇರಿಯಲ್ಲಿ ತನ್ನ ತಮ್ಮ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೋಣೆಯ ಪಕ್ಕದ ಕೋಣೆಯಲ್ಲಿ ಕುಳಿತುಕೊಳ್ಳುವುದು ಸ್ಪಷ್ಟವಾಗಿತ್ತು. ಹೀಗಿದ್ದರೂ ಸಿಂಧಿಯಾ ಕಾರ್ಯ ಕಚೇರಿ ಎಲ್ಲಿರಲಿದೆ ಎಂಬುವುದು ಮಾತ್ರ ಅಸ್ಪಷ್ಟವಾಗಿತ್ತು. ಆದರೆ ಬುಧವಾರದಂದು ಈ ಗೊಂದಲವೂ ನಿವಾರಣೆಯಾಗಿದ್ದು, ಪ್ರಿಯಾಂಕಾ ಹಾಗೂ ಸಿಂಧಿಯಾರ ಕಾರ್ಯ ಕಚೇರಿ ಒಂದೇ ಕೋಣೆಯಲ್ಲಿರಲಿದೆ ಎಂಬುವುದು ಬಹಿರಂಗವಾಗಿದೆ.

ಈ ಮೂಲಕ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಹಾಗೂ ಸಿಂಧಿಯಾ ಇಬ್ಬರ ಜವಾಬ್ದಾರಿ ಸಮನಾಗಿದೆ. ರಾಹುಲ್ ಗಾಂಧಿ ತಂಗಿಯಾಗಿದ್ದರೂ ಪ್ರಿಯಾಂಕಾರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಉತ್ತರ ಪ್ರದೇಶ ಹಾಗೂ ಪಕ್ಷಕ್ಕೆ ಇಬ್ಬರೂ ಸಮಾನರು ಎಂಬ ಸಂದೇಶ ರವಾನಿಸಿದೆ.

ಇತ್ತೇಚೆಗಷ್ಟೇ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಈವರೆಗೂ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಲ್ಲ. ಹೀಗಿದ್ದರೂ ವಿದೇಶದಿಂದ ಮರಳಿದ ಬಳಿಕ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಆಗು ಹೋಗುಗಳು ಮತ್ತು ರಾಜಕೀಯ ರಣತಂತ್ರಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ.