ಕಾಂಗ್ರೆಸ್ ಜನರಲ್ ಸೆಕ್ರೆಟರಿಯಾಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ಕುಡಿದ ಮತ್ತಿನಲ್ಲಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಮ್‌ಲೋಗ್ ಎಂಬ ಫೇಸ್‌ಬುಕ್ ಪೇಜ್ ಈ ವಿಡಿಯೋವನ್ನು ಪೋಸ್ಟ್ ಮಾಡಿ, ‘ಕುಡಿದ ನಾಯಕರ ಮೇಲೆ ಕಾಂಗ್ರೆಸ್ ನಂಬಿಕೆ, ನಿರೀಕ್ಷೆ ಇಡಬಹುದು. ಆದರೆ ದೇಶದ ಜನರು ನಂಬಿಕೆ ಇಡಲು ಸಾಧ್ಯವಿಲ್ಲ’ ಎಂದು ಬರೆದಿದೆ.

ಈ ವಿಡಿಯೋ 4,800 ಬಾರಿ ಶೇರ್ ಆಗಿದೆ. ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಮಾಧ್ಯಮಗಳೆದುರು ಒರಟಾಗಿ ಮಾತನಾಡಿರುವ ದೃಶ್ಯವಿದೆ. ಆದರೆ ನಿಜಕ್ಕೂ ಪ್ರಿಯಾಂಕಾ ಗಾಂಧಿ ಮದ್ಯ ಸೇವಿಸಿದ್ದರೇ ಎಂದು ಪರಿಶೀಲಿಸಿದಾಗ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.

ವಾಸ್ತವವಾಗಿ 2015ರ ಏಪ್ರಿಲ್‌ನಲ್ಲಿ ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಚಳವಳಿಯ ವಿಡಿಯೋ ಎಂದು ತಿಳಿದುಬಂದಿದೆ. ಮೂಲ ವಿಡಿಯೋವನ್ನು ಪರಿಶೀಲಿಸಿದಾಗ ಆ ಹೋರಾಟದಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಭಾಗಿಯಾಗಿದ್ದರು. ಆಗ ವಿಪರೀತ ಜನಸಂದಣಿಯಿಂದ ತಪ್ಪಿಸಿಕೊಳ್ಳುವ ವೇಳೆ ಮಾಧ್ಯಮಗಳೆದುರು ಒರಟಾಗಿ ವರ್ತಿಸಿದ್ದರು. ನೂಕುನುಗ್ಗಲು ಮಾಡದಂತೆ, ತಳ್ಳದಂತೆ ಜನರನ್ನು ಪ್ರಿಯಾಂಕಾ ಕೇಳಿಕೊಂಡಿದ್ದರು. ಆಗಿನ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಆ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು ಎಂದು ತಿಳಿದುಬಂದಿದೆ.

ಸದ್ಯ ಇದೇ ವಿಡಿಯೋವನ್ನು ಬಳಸಿಕೊಂಡು ಪ್ರಿಯಾಂಕಾ ಗಾಂಧಿ ಕುಡಿದ ಮತ್ತಿನಲ್ಲಿದ್ದಾರೆ ಅಥವಾ ಅವರಿಕೆ ಕುಡಿಯುವ ಚಟ ಇದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.