ಲಕ್ನೋ[ಫೆ.11]: ಬಿಎಸ್‌ಪಿ ನಾಯಕಿ ಮಾಯಾವತಿ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ಎಂಟ್ರಿ ನೀಡಿದ್ದಾರೆ. ಇವರು ಟ್ವಿಟರ್‌ಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ 47 ಸಾವಿರಕ್ಕೂ ಅಧಿಕ ಮಂದಿ ಇವರನ್ನು ಫಾಲೋ ಮಾಡಲಾರಂಭಿಸಿದ್ದಾರೆ. ಇನ್ನು ಪ್ರಿಯಾಂಕಾ ಈವರೆಗೂ 7 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.

ಪ್ರಿಯಾಂಕಾ ಗಾಂಧಿ ಫಾಲೋ ಮಾಡುತ್ತಿರುವವರಲ್ಲಿ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಈ ಫಾಲೋ ಮಾಡುತ್ತಿರುವವರ ಪಟ್ಟಿಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಉಪಮುಖ್ಯಮಂತ್ರಿ ಸಚಿನ್ ಪಾಯ್ಲೆಟ್, ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ರಣ್ದೀಪ್ ಸುರ್ಜೇವಾಲಾ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಇದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿಯ ಈ ಅಧಿಕೃತ ಖಾತೆಯಿಂದ ಈವರೆಗೂ ಒಂದು ಟ್ವೀಟ್ ಕೂಡಾ ಮಾಡಿಲ್ಲ ಎಂಬುವುದು ಗಮನಾರ್ಹ.

ಇನ್ನು ಪ್ರಿಯಾಂಕಾ ಗಾಂಧಿ ಕಳೆದ ಎರಡು ವಾರದ ಹಿಂದಷ್ಟೇ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಈಗಾಗಲೇ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವುದರೊಂದಿಗೆ, ಉತ್ತರ ಪ್ರದೇಶದ ಜವಾಬ್ದಾರಿಯನ್ನೂ ವಹಿಸಲಾಗಿದೆ. ಇಂದು ಫೆ. 11ರಂದು ಪ್ರಿಯಾಂಕಾ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಲಕ್ನೋನಲ್ಲಿ ರೋಡ್ ಶೋ ನಡೆಸಲಿರುವ ಪ್ರಿಯಾಂಕಾ ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಕೂಡಾ ಜೊತೆಯಾಗಲಿದ್ದಾರೆ.