ಆಗ ಮೋದಿ Vs ಸಿದ್ದರಾಮಯ್ಯ: ಈಗ ಸಡನ್ನಾಗಿ ಸೈಡ್​ಲೈನ್​ಗೆ ಸರಿದರಾ ಸಿದ್ದರಾಮಯ್ಯ?

Why Siddaramaiah is sidelined after Kannada Assembly Election 2018 results declared
Highlights

ಕರ್ನಾಟಕ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕಾಂಗ್ರೆಸ್​ ಸರ್ಕಾರದ ಮೇಲೆ ಮುಗಿಬಿದ್ದಾಗ, ಅವರನ್ನು ಸಮರ್ಥವಾಗಿ ಎದುರಿಸಿದ್ದು ಸಿದ್ದರಾಮಯ್ಯ. ಮೋದಿಯ ಪ್ರತೀ ಆರೋಪಕ್ಕೂ ಸಿದ್ದರಾಮಯ್ಯ ತೊಡೆ ತಟ್ಟಿ ಕದನಕ್ಕೆ ಆಹ್ವಾನಿಸಿದ್ದನ್ನು ನೋಡಿ ಇಡೀ ಚುನಾವಣೆ ಮೋದಿ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿತ್ತು. ಮೋದಿಯನ್ನೆದುರಿಸಲು ಸಿದ್ದರಾಮಯ್ಯನವರೇ ಸರಿಯಾದ ನಾಯಕ ಎಂಬ ಚರ್ಚೆಗಳು ರಾಷ್ಟ್ರೀಯ ಮಟ್ಟದಲ್ಲೂ ನಡೆದಿದ್ದವು.

ಬೆಂಗಳೂರು: ಕರ್ನಾಟಕ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕಾಂಗ್ರೆಸ್​ ಸರ್ಕಾರದ ಮೇಲೆ ಮುಗಿಬಿದ್ದಾಗ, ಅವರನ್ನು ಸಮರ್ಥವಾಗಿ ಎದುರಿಸಿದ್ದು ಸಿದ್ದರಾಮಯ್ಯ. ಮೋದಿಯ ಪ್ರತೀ ಆರೋಪಕ್ಕೂ ಸಿದ್ದರಾಮಯ್ಯ ತೊಡೆ ತಟ್ಟಿ ಕದನಕ್ಕೆ ಆಹ್ವಾನಿಸಿದ್ದನ್ನು ನೋಡಿ ಇಡೀ ಚುನಾವಣೆ ಮೋದಿ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿತ್ತು. ಮೋದಿಯನ್ನೆದುರಿಸಲು ಸಿದ್ದರಾಮಯ್ಯನವರೇ ಸರಿಯಾದ ನಾಯಕ ಎಂಬ ಚರ್ಚೆಗಳು ರಾಷ್ಟ್ರೀಯ ಮಟ್ಟದಲ್ಲೂ ನಡೆದಿದ್ದವು.

ಒಂದು ಹಂತದಲ್ಲಿ ಮೋದಿಯನ್ನು ಎದುರಿಸುವ ಸಮರ್ಥ ನಾಯಕನೆಂದರೆ ಸಿದ್ದರಾಮಯ್ಯ ಎನ್ನುವಷ್ಟು ಮಟ್ಟಿಗೆ ಅವರ ಜನಪ್ರಿಯತೆ ಹೆಚ್ಚಿತ್ತು. ಸಿದ್ದರಾಮಯ್ಯ ಅವರನ್ನು ಪ್ರಧಾನಿಯನ್ನಾಗಿಯೂ ಪ್ರತಿಬಿಂಬಿಸುವ ಪ್ರಯತ್ನಗಳು ನಡೆದಿದ್ದವು. 

ಆದರೆ, ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದೆಂಬುದಕ್ಕೆ ಸಿದ್ದರಾಮಯ್ಯ ಅವರೇ ಸಾಕ್ಷಿ. ಇದೀಗ ಎಲ್ಲವೂ ಉಲ್ಟಾ ಆಗಿದೆ. ಶ್ರೀ ಸಾಮಾನ್ಯ ಮಾತ್ರ ಸಿದ್ದರಾಮಯ್ಯ ಅವರ ಕೈ ಹಿಡಿಯಲೇ ಇಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರೆ, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ವೈಯಕ್ತಿಕ ಸೋಲು ಮಾತ್ರವಲ್ಲ, ಇವರ ನೇತೃದಲ್ಲಿಯೇ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌ಗೆ ಸಿಕ್ಕ ಪ್ರತಿಕ್ರಿಯೆಯೂ ಕಳಪೆಯಾಗಿದ್ದರಿಂದ ಸಿದ್ದರಾಮಯ್ಯ ಅವರಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ.

ಅಬ್ಬರಿಸಿ ಬೊಬ್ಬರಿದ ಸಿದ್ದರಾಮಯ್ಯ ಬೆಡವಾದರೇಕೆ?

ಚುನಾವಣೆಗೆ ಮೊದಲು ಮೋದಿ ಅಶ್ವಮೇಧದ ಕುದುರೆ ಕಟ್ಟಿ ಹಾಕುವ ಚಾಲೆಂಜ್​ ಮಾಡಿದ್ದ ಸಿದ್ದರಾಮಯ್ಯ ಫಲಿತಾಂಶ ಬಂದ ಕ್ಷಣದಿಂದಲೇ ಅಕ್ಷರಶಃ ಬದಿಗೆ ಸರಿದಿದ್ದಾರೆ. ಸಿದ್ದರಾಮಯ್ಯನವರಿಗಿದ್ದ ಆತ್ಮ ವಿಶ್ವಾಸ ನುಚ್ಚು ನೂರಾಗಿದ್ದು, ಆ ಕ್ಷಣದಲ್ಲಿ ಅವರ ಮುಖದಲ್ಲೇ ಕಾಣುತ್ತಿತ್ತು. ಬಹುಶಃ ಸಿದ್ದರಾಮಯ್ಯನವರನ್ನು ಆ ಸ್ಥಿತಿಯಲ್ಲಿ ಅವರ ವಿರೋಧಿಗಳೂ ನೋಡಲು ಸಿದ್ಧರಿರಲಿಲ್ಲ.

ಮೋದಿಗೆ ಸವಾಲು ಹಾಕಿದ ಸಿದ್ದು ಭವಿಷ್ಯ ಮಂಕಾಯ್ತಾ?

ಕರ್ನಾಟಕ ಕುರುಕ್ಷೇತ್ರದಲ್ಲಿ ಮೋದಿ ಎಂಬ ಬಿರುಗಾಳಿಯನ್ನು ಎದುರು ಹಾಕಿಕೊಂಡು ಸವಾಲು ಹಾಕುವ ಧೈರ್ಯ ತೋರಿದ್ದು ಸಿದ್ದರಾಮಯ್ಯ ಮಾತ್ರ. ಮೋದಿಯ ಆರೋಪಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರಿಸಲು ಏದುಸಿರು ಬಿಡುತ್ತಿದ್ದರೆ, ಪ್ರಧಾನಿಗೆ ತೊಡೆ ತಟ್ಟಿ ಸವಾಲು ಹಾಕಿ, ಯಶಸ್ವಿಯಾಗಿದ್ದು ಸಿದ್ದರಾಮಯ್ಯ ಮಾತ್ರ. ಐದು ವರ್ಷಗಳ ಕಾಲ ಚಾಂಪಿಯನ್ ಆಟಗಾರನಂತಿದ್ದ ಸಿದ್ದರಾಮಯ್ಯನವರನ್ನು ಒಂದೇ ಒಂದು ಸೋಲಿನ ಕಾರಣದಿಂದ ಕಾಂಗ್ರೆಸ್​ನಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ. ಆ ಮೂಲಕ ಮೋದಿಗೆ ಎದುರಾಗಿ ನಿಲ್ಲಬಲ್ಲ ಏಕೈಕ ನಾಯಕ ಎಂದು ಬಿಂಬಿತವಾಗಿದ್ದ ಸಿದ್ದರಾಮಯ್ಯನವರ ಭವಿಷ್ಯವೇ ಮಂಕಾಯಿತು ಎನ್ನುವಂತಾಗಿದೆ.

ಕಾಂಗ್ರೆಸ್​ಗೆ ಪೋಸ್ಟರ್ ಬಾಯ್ ಆಗಿದ್ದ ಸಿದ್ದು

2006ರಿಂದ ಕಾಂಗ್ರೆಸ್​ ಪಾಲಿಗೆ ಪೋಸ್ಟರ್ ಬಾಯ್​ ಆಗಿದ್ದ ಸಿದ್ದರಾಮಯ್ಯ 2018 ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ದಿನದಿಂದಲೇ ಮರೆಗೆ ಸರಿಯುತ್ತಿದ್ದಾರೆ. ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ರಚಿಸುವ ವಿಷಯದಲ್ಲಿ ಸಿದ್ದರಾಮಯ್ಯನವರನ್ನು ಲೆಕ್ಕಕ್ಕೂ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್​ಗೆ ಕರ್ನಾಟಕದಲ್ಲಿ ಇನ್ನು ಅಧಿಕಾರ ಸಿಗುವುದೇ ದುರ್ಲಭ ಎನ್ನುವಂತಹ ಸ್ಥಿತಿಯಲ್ಲಿ ಗಣಿ ಕಳ್ಳರ ವಿರುದ್ಧ ತೊಡೆ ತಟ್ಟಿ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್​ ಅನ್ನು 2013ರಲ್ಲಿ ಅಧಿಕಾರಕ್ಕೆ ತಂದಿದ್ದರು. ಅಂಥ ನಾಯಕನನ್ನು ಕೇವಲ ಒಂದು ಸೋಲಿಗೆ ಹೊಣೆಯಾಗಿಸಿ ಬದಿಗೆ ಸರಿಸಿದರೆ ಹೇಗೆ? ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
 

loader