ಸರ್ಕಾರದಲ್ಲಿ ಸಿದ್ದು ಪಾತ್ರ ಇನ್ನೂ ಚರ್ಚಿಸಿಲ್ಲ: ಪರಂ

news | Friday, May 25th, 2018
Suvarna Web Desk
Highlights

ಮುಖ್ಯಮಂತ್ರಿ ಗಾದಿ ಹಂಚಿಕೆ, ಪ್ರಮುಖ ಖಾತೆಗಳ ಪೈಕಿ ಯಾವುದು ಯಾವ ಪಕ್ಷಕ್ಕೆ, ಸಮನ್ವಯ ಸಮಿತಿಯಲ್ಲಿ ಯಾರಾರ‍ಯರು ಇರಬೇಕು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸರ್ಕಾರದಲ್ಲಿ ನಿರ್ವಹಿಸುವ ಪಾತ್ರವೇನು?

ಬೆಂಗಳೂರು :  ಮುಖ್ಯಮಂತ್ರಿ ಗಾದಿ ಹಂಚಿಕೆ, ಪ್ರಮುಖ ಖಾತೆಗಳ ಪೈಕಿ ಯಾವುದು ಯಾವ ಪಕ್ಷಕ್ಕೆ, ಸಮನ್ವಯ ಸಮಿತಿಯಲ್ಲಿ ಯಾರಾರ‍ಯರು ಇರಬೇಕು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸರ್ಕಾರದಲ್ಲಿ ನಿರ್ವಹಿಸುವ ಪಾತ್ರವೇನು ?

ಈ ಎಲ್ಲ ವಿಷಯಗಳ ಬಗ್ಗೆ ಇನ್ನೂ ಯಾವ ಚರ್ಚೆಯೂ ಆಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ನಂತರ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಶುಕ್ರವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಇದರಲ್ಲಿ ಗೆಲ್ಲುವ ವಿಶ್ವಾಸವಿದೆ. ಇದಾದ ನಂತರ ರಾಜ್ಯದ ಕಾಂಗ್ರೆಸ್‌ ನಾಯಕರು ದೆಹಲಿಗೆ ತೆರಳಲಿದ್ದು, ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್‌ ಜತೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಆದರೆ, ಮುಖ್ಯಮಂತ್ರಿ ಹುದ್ದೆ ಕುಮಾರಸ್ವಾಮಿ ಅವರ ಪಾಲಿಗೆ ಪರಿಪೂರ್ಣ ಐದು ವರ್ಷದ ಅವಧಿಗೆ ಇರಲಿದೆಯೇ ಅಥವಾ ಹಂಚಿಕೆಯಾಗಲಿದೆಯೇ ಎಂಬ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ. ಯಾವ ಪ್ರಮುಖ ಖಾತೆಗಳು ಯಾರಿಗೆ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಇವೆಲ್ಲವೂ ಕ್ರಮೇಣ ಚರ್ಚೆ ನಡೆಯಲಿದೆ ಎಂದರು.

ಎರಡು ಪ್ರತ್ಯೇಕ ಪಕ್ಷಗಳಾದ ಕಾರಣ ನಮಗೆ ನಮ್ಮವೇ ಆದ ಪ್ರಣಾಳಿಕೆಗಳಿವೆ. ಎರಡೂ ಪ್ರಣಾಳಿಕೆಯನ್ನು ಸಮ್ಮಿಳನಗೊಳಿಸಿ ಸಾಮಾನ್ಯ ಕಾರ್ಯಸೂಚಿಯನ್ನು ರೂಪಿಸಬೇಕಿದೆ. ಇನ್ನು ಸರ್ಕಾರದ ಕಾರ್ಯ ನಿರ್ವಹಣೆ ಕುರಿತು ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮನ್ವಯ ಸಮಿತಿಯ ಕಾರ್ಯ ನೀತಿ ನಿರೂಪಣೆಗೆ ಸೀಮಿತವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ಈ ಸಮನ್ವಯ ಸಮಿತಿಯಲ್ಲಿ ಇರುತ್ತಾರೆಯೇ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನಾಗಿರುತ್ತದೆ ಎಂಬ ಪ್ರಶ್ನೆಗೆ ಪರಮೇಶ್ವರ್‌, ಈ ಬಗ್ಗೆ ಯಾವ ಚರ್ಚೆಯೂ ಆಗಿಲ್ಲ ಎಂದಷ್ಟೇ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ:

ಕಾಂಗ್ರೆಸ್‌ ಹೈಕಮಾಂಡ್‌ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ತಮಗೆ ಇನ್ನೂ ಏನನ್ನೂ ಹೇಳಿಲ್ಲ. ಆದರೆ, ಉಪ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಹಿನ್ನೆಲೆಯಲ್ಲಿ ಪಕ್ಷದ ಹುದ್ದೆ ನಿರ್ವಹಿಸಲು ಕಷ್ಟವಾಗುತ್ತದೆ ಎಂಬ ಭಾವನೆ ನನಗೆ ಇದೆ. ಏಕೆಂದರೆ, ಶೀಘ್ರವೇ ಲೋಕಸಭಾ ಚುನಾವಣೆ ಬರಲಿದೆ. ಈ ಚುನಾವಣೆಗೆ ಹೆಚ್ಚಿನ ಗಮನವಿಟ್ಟು ಕೆಲಸ ಮಾಡಬೇಕಾಗುತ್ತದೆ. ಸರ್ಕಾರದಲ್ಲಿ ಇದ್ದೂ ಪಕ್ಷದ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಕೆಪಿಸಿಸಿ ಹುದ್ದೆ ತೊರೆಯುವ ಬಯಕೆ ಹೊಂದಿದ್ದೇನೆ ಎಂದರು.

ಹೈಕಮಾಂಡ್‌ ಶೀಘ್ರದಲ್ಲೇ ಕೆಪಿಸಿಸಿ ಹುದ್ದೆಗೆ ಹೊಸಬರನ್ನು ನೇಮಕ ಮಾಡಬಹುದು ಎಂಬ ಸುಳಿವನ್ನು ಈ ಸಂದರ್ಭದಲ್ಲಿ ಅವರು ನೀಡಿದರು.

ತಮಗೆ ದಲಿತ ಎಂಬ ಕಾರಣಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ ಎಂಬ ವ್ಯಾಖ್ಯಾನವನ್ನು ಅಲ್ಲಗಳೆದ ಪರಮೇಶ್ವರ್‌, ನನಗೂ ಅರ್ಹತೆಯಿದೆ ಎಂಬ ಕಾರಣಕ್ಕೆ ಈ ಹುದ್ದೆಯನ್ನು ನನಗೆ ನೀಡಿರಬಹುದು. ಕಾಂಗ್ರೆಸ್‌ನಲ್ಲಿ ಜಾತಿ ಆಧಾರದ ಮೇಲೆ ಹುದ್ದೆ ನೀಡುವುದಿಲ್ಲ. ಆದರೆ, ವಿಶ್ಲೇಷಕರು ಇಂತಹ ವಿಶ್ಲೇಷಣೆ ಮಾಡುತ್ತಿರಬಹುದು. ಇನ್ನು ನಾನು ಕೇವಲ ಡಿಸಿಎಂ ಅಷ್ಟೇ ಅಲ್ಲ. ಸರ್ಕಾರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುವ ಹೊಣೆಯನ್ನು ಹೊತ್ತಿದ್ದೇನೆ. ಈ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸ ನನಗಿದೆ ಎಂದರು.

ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿರುವ ಡಿಸಿಎಂ ಹುದ್ದೆ ಬೇಡಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗುವ ಅರ್ಹತೆ ಇರುವ ಹಲವಾರು ನಾಯಕರು ಇದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಶಕ್ತಿ. ಆದರೆ, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಇಂತಹ ನಾಯಕರಿಗೆ ಯಾವ ಹುದ್ದೆಯನ್ನು ನೀಡಬೇಕು ಎಂಬುದನ್ನು ಕಾಂಗ್ರೆಸ್‌ ಹೈಕಮಾಂಡ್‌ ನೀಡುತ್ತದೆ ಎಂದರು.

ಡಿ.ಕೆ.ಶಿವಕುಮಾರ್‌ ಅವರು ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡಕ್ಕೂ ಬೇಡಿಕೆಯಿಟ್ಟಿದ್ದಾರಂತಲ್ಲ ಎಂಬ ಪ್ರಶ್ನೆಗೆ, ಶಿವಕುಮಾರ್‌ ಅವರು ಅತ್ಯಂತ ಸಮರ್ಥ ನಾಯಕ. ಅವರು ಕೆಪಿಸಿಸಿ ಅಧ್ಯಕ್ಷರಾದರೆ ಸಂತೋಷ. ಅವರು ಪಕ್ಷದ ಮುಂದೆ ಯಾವುದೇ ಬೇಡಿಕೆಯಿಟ್ಟಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ ಎಂದರು.

ಕೋಮವಾದಿ ಬಿಜೆಪಿಯನ್ನು ಅಧಿಕಾರದಲ್ಲಿ ದೂರವಿಡಬೇಕು ಎಂಬ ಕಾರಣಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಈ ಸರ್ಕಾರ ಐದು ವರ್ಷ ಸಮರ್ಪಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ಗುರಿ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರವು ಉತ್ತಮವಾಗಿ ಕೆಲಸ ಮಾಡಿತ್ತು. ಆದರೆ, ಕೆಲವೊಂದು ನ್ಯೂನತೆಗಳಿದ್ದವು. ಆ ನ್ಯೂನತೆಗಳನ್ನು ಸರಿಪಡಿಸಿಕೊಂಡು ಹೊಸ ಮನ್ವಂತರಕ್ಕೆ ನಾಂದಿ ಆಡುವುದಾಗಿ ಪರಮೇಶ್ವರ್‌ ಈ ಸಂದರ್ಭದಲ್ಲಿ ತಿಳಿಸಿದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR