ವಾಷಿಂಗ್ಟನ್(ಅ.05): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯಲ್ಲಿ ನಿಷೇಧಾಜ್ಞೆ ಹೇರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮಧ್ಯೆ ಕಣಿವೆಯ ವಾಸ್ತವ ಸ್ಥಿತಿಗತಿ ಅರಿಯಲು ಪ್ರಯತ್ನಿಸಿದ ಅಮೆರಿಕದ ಜನಪ್ರತಿನಿಧಿಯೋರ್ವರಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗಿದೆ.

ಕಣಿವೆಯ ವಾಸ್ತವ ಪರಿಸ್ಥಿತಿ ಅರಿಯಲು ಮುಂದಾದಾಗ ಸ್ಥಳೀಯ ಆಡಳಿತ ತಮಗೆ ಪ್ರವೇಶ ನಿರಾಕರಿಸಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಗಂಭೀರ ಆರೋಪ ಮಾಡಿದ್ದಾರೆ.

ಕಣಿವೆಗೆ ಭೇಟಿ ನೀಡಲು ಭಾರತ ಸರ್ಕಾರ ಅನುಮತಿ ನೀಡದಿರುವುದು ವಾಸ್ತವ ಸಂಗತಿ ಬೇರೆಯೇ ಇದೆ ಎಂಬ ಅನುಮಾನ ಮೂಡಲು ಕಾರಣವಾಗಿಎ ಎಂದು ಹೊಲೆನ್ ಕಿಡಿಕಾರಿದ್ದಾರೆ.  

ಸಂವಹನ ಜಾಲ ನಿರ್ಬಂಧಿಸಿರುವ ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಅರಿಯುವುದು ಬಹಳ ಮುಖ್ಯವಾಗಿದ್ದು, ಎಲ್ಲವೂ ಸರಿ ಇದೆ ಎಂದು ಹೇಳುವ ಭಾರತ ಸರ್ಕಾರ ಭಯಪಡುತ್ತಿರುವುದೇಕೆ ಎಂದು ಹೊಲೆನ್ ಪ್ರಶ್ನಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಹೊಲೆನ್ ಮಾಡಿರುವ ಆರೋಪ ಇದೀಗ ಚರ್ಚೆಗೆ ಇಂಬು ನೀಡಿದೆ. 

ಇನ್ನು ಕಾಶ್ಮೀರದಲ್ಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಅಮೆರಿಕ ಸೆನೆಟ್ ಸಮಿತಿಯಲ್ಲಿ ಭಾರತದ ವಿರುದ್ಧ ಮಸೂದೆ ಪ್ರಸ್ತಾಪಿಸಲಾಗಿದ್ದು, ಕಾಶ್ಮೀರದಲ್ಲಿನ ಪ್ರಸ್ತುತ ಮಾನವ ಹಕ್ಕುಗಳ ಉಲ್ಲಂಘನೆಯತ್ತ ಗಮನಹರಿಸುವುದು ಅತ್ಯಂತ ಅವಶ್ಯ ಎಂದು ಹೊಲೆನ್ ಅಭಿಪ್ರಾಯಪಟ್ಟಿದ್ದಾರೆ.