ನವದೆಹಲಿ(ಆ.25): ನಿನ್ನೆ(ಆ.24) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ತೆರಳಿದ್ದ ಪ್ರತಿಪಕ್ಷದ ನಿಯೋಗವನ್ನು ತಡೆದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. 

ಈ ಕುರಿತು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, ಕಣಿವೆಯಲ್ಲಿ ಎಲ್ಲವೂ ಸರಿ ಇದೆ ಎಂದು ಪ್ರತಿಪಾದಿಸುತ್ತಿರುವ ಸರ್ಕಾರ, ಪ್ರತಿಪಕ್ಷದ ನಿಯೋಗವನ್ನು ತಡೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 
ಕಾಶ್ಮೀರದಲ್ಲಿ ಸಹಜ ವಾತಾವರಣವಿದೆ ಎಂದಾದ ಮೇಲೆ ನಮ್ಮನ್ನು ವಾಪಸ್ ಕಳುಹಿಸಿದ್ದು ಏಕೆ ಎಂದು ರಾಹುಲ್ ಖಾರವಾಗಿ ಪ್ರಶ್ನಿಸಿದ್ದಾರೆ.

ಸರ್ಕಾರದ ಈ ಅಸಂವಿಧಾನಿಕ ನಡೆಯಿಂದಲೇ ಕಣಿವೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ರಾಹುಲ್ ಕಿಡಿಕಾರಿದ್ದಾರೆ.

 ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಾಯಕರ ನಿಯೋಗ ಜಮ್ಮು ಮತ್ತು ಕಾಶ್ಮೀರ ಭೇಟಿಗಾಗಿ ಶ್ರೀನಗರಕ್ಕೆ ತೆರಳಿತ್ತು. ಆದರೆ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದ ಭದ್ರತಾ ಸಿಬ್ಬಂದಿ, ಅವರನ್ನು ವಾಪಸ್ ದೆಹಲಿಗೆ ಕಳುಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.