ನಾಶಿಕ್(ಸೆ.19): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ತಮ್ಮ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಧಾನಿ ಮೋದಿ, ಇಂದು ನಾಶಿಕ್'ನಲ್ಲಿ ಭರ್ಜರಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಹೊಸ ಕಾಶ್ಮೀರ ನಿರ್ಮಾಣದ ವಾಗ್ದಾನ ನೀಡಿದರು.

ನಾವೆಲ್ಲಾ ಹೊಸ ಕಾಶ್ಮೀರ ನಿರ್ಮಾಣಕ್ಕೆ ಸಿದ್ಧರಾಗಬೇಕಿದ್ದು, ಹೊಸ ಸ್ವರ್ಗವನ್ನು ಸೃಷ್ಟಿಸುವ ಸವಾಲನ್ನು ಸ್ವೀಕರಿಸಬೇಕಿದೆ ಎಂದು ಮೋದಿ ಜನತೆಗೆ ಕರೆ ನೀಡಿದರು.

ಆರ್ಟಿಕಲ್ 370ರ ರದ್ದತಿಯನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಅಬ್ ಮಿಲ್‌ಕರ್ ಏಕ್ ನಯಾ ಕಾಶ್ಮೀರ ಬನಾನಾ ಹೈ(ನಾವೆಲ್ಲಾ ಜೊತೆಯಾಗಿ ಹೊಸ ಕಾಶ್ಮೀರದ ನಿರ್ಮಾಣ ಮಾಡಬೇಕಿದೆ) ಎಂದು ಹೇಳಿದರು.

370ನೇ ವಿಧಿ ರದ್ದತಿಯಿಂದಾಗಿ ಕಾಶ್ಮೀರ ಜನತೆ ಹಾಗೂ ಕೇಂದ್ರ ಸರ್ಕಾರದ ನಡುವೇ ಇದೀಗ ನೇರ ಸಂಪರ್ಕ ಏರ್ಪಟ್ಟಿದ್ದು, ಕಣಿವೆಯಲ್ಲಿ ಅಭಿವೃದ್ಧಿಯ ಹೊಸ ಪರ್ವ ಶುರುವಾಗಲಿದೆ ಎಂದು ಮೋದಿ ಭರವಸೆ ನೀಡಿದರು.

ಇದೇ ವೇಳೆ ರಾಮ ಮಂದಿರ ನಿರ್ಮಾಣದ ಕುರಿತು ಮನಬಂದಂತೆ ಹೇಳಿಕೆ ನೀಡುತ್ತಿರುವವರ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ವಿವಾದ ಸುಪ್ರೀಂಕೋರ್ಟ್'ನಲ್ಲಿರುವಾಗ ಈ ವಿಷಯದ ಕುರಿತು ಹೇಳಿಕೆ ನೀಡುವುದು ಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.