ಶ್ರೀನಗರ(ಆ.24): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಕಣಿವೆಗೆ ಭೇಟಿ ನೀಡಲು ಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಿಂದಲೇ ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

ಕಣಿವೆಯ ಸ್ಥಿತಿಗತಿ ಅರಿಯಲು ಬಂದಿದ್ದ ಪ್ರತಿಪಕ್ಷದ ನಿಯೋಗವನ್ನು, ಭದ್ರತೆ ದೃಷ್ಟಿಯಿಂದ ಕಣಿವೆ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಪರಿಶೀಲಿಸಲು ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗ ಇಂದು ಶ್ರೀನಗರಕ್ಕೆ ಆಗಮಿಸಿತ್ತು. ಆದರೆ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದ ಭದ್ರತಾ ಸಿಬ್ಬಂದಿ, ಅವರನ್ನು ವಾಪಸ್ ದೆಹಲಿಗೆ ಕಳುಹಿಸಿದೆ.

ಪ್ರತಿಪಕ್ಷಗಳ ನಿಯೋಗದಲ್ಲಿ ಗುಲಾಮ್ ನಬಿ ಆಝಾದ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಸಿಪಿಐನ ಡಿ.ರಾಜಾ, ಸಿಪಿಐ(ಎಂ)ನ ಸೀತಾರಾಮ್ ಯಚೂರಿ, ಡಿಎಂಕೆಯ ತಿರುಚಿ ಶಿವಾ, ಆರ್‍ಜೆಡಿಯ ಮನೀಜ್ ಝಾ, ಟಿಎಂಸಿಯ ದಿನೇಶ್ ತ್ರಿವೇದಿ, ಎನ್‍ಸಿಪಿಯ ಮಜೀದ್ ಮೆನನ್ ಹಾಗೂ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಹಾಗೂ ಇತರರು ಇದ್ದರು.