ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವ ವಿವಾದ| ಪೌರತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್| ರಾಹುಲ್ ಲೋಕಸಭೆ ಸ್ಪರ್ಧೆ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ| ಬ್ರಿಟನ್ ಕಂಪನಿಯ ದಸ್ತಾವೇಜಿನಲ್ಲಿ ರಾಹುಲ್ ಬ್ರಿಟನ್ ಪ್ರಜೆ ಎಂದು ಉಲ್ಲೇಖ|
ನವದೆಹಲಿ(ಮೇ.09): ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ರಾಹುಲ್ ಗಾಂಧಿ ಪೌರತ್ವ ಪ್ರಶ್ನಾರ್ಹವಾಗಿದ್ದು ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ನಿರ್ಣಯ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ, ದೆಹಲಿ ಮೂಲದ ಜೈ ಪ್ರಕಾಶ್ ಗೋಯಲ್ ಮತ್ತು ಚಂದರ್ ಪ್ರಕಾಶ್ ತ್ಯಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಅರ್ಜಿಯನ್ನು ತಿರಸ್ಕರಿಸಿರುವ ಘನ ನ್ಯಾಯಾಲಯ, ಬ್ರಿಟಿಷ್ ಕಂಪನಿಯೊಂದರ ದಸ್ತಾವೇಜುಗಳಲ್ಲಿ ರಾಹುಲ್ ಅವರನ್ನು ಬ್ರಿಟನ್ ಪ್ರಜೆ ಎಂದು ನಮೂದಿಸಿದ ಕಾರಣಕ್ಕೆ ಅವರ ಪೌರತ್ವವನ್ನು ಪ್ರಶ್ನಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೇ ಈ ಕುರಿತು ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
ರಾಹುಲ್ ಗಾಂಧಿ ಬ್ರಿಟನ್ ಪ್ರಜೆಯಾಗಿದ್ದು, ಈ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ 15 ದಿನಗಳೊಳಗಾಗಿ ಉತ್ತರಿಸುವಂತೆ ಕೇಂದ್ರ ಗೃಹ ಇಲಾಖೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
