ಅಮೇಠಿ[ಏ.22]: ಉತ್ತರ ಪ್ರದೇಶದ ಅಮೇಠಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಲ್ಲಿಸಿರುವ ನಾಮಪತ್ರದ ಕುರಿತು ರಿಟರ್ನಿಂಗ್‌ ಆಫೀಸರ್‌ ಸೋಮವಾರ ಪರಿಶೀಲನೆ ನಡೆಸಲಿದ್ದಾರೆ. ಚುನಾವಣಾ ಅಧಿಕಾರಿಯ ನಿರ್ಧಾರ, ರಾಹುಲ್‌ ಅಮೇಠಿ ಸ್ಪರ್ಧೆಯನ್ನೇ ನಿರ್ಧರಿಸುವ ಶಕ್ತಿ ಹೊಂದಿರುವ ಕಾರಣ, ಸೋಮವಾರ ಹೊರಬೀಳಲಿರುವ ನಿರ್ಧಾರ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

‘ರಾಹುಲ್‌ ಗಾಂಧಿ 2004ರಲ್ಲಿ ಬ್ರಿಟನ್ನಿನ ಕಂಪನಿಯೊಂದರಲ್ಲಿ ಹೂಡಿಕೆ ಮಾಡುವಾಗ ತಾವು ಬ್ರಿಟಿಷ್‌ ಪ್ರಜೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಅವರಿಗೆ ವಿದೇಶದಲ್ಲಿ ರಾಹುಲ್‌ ವಿನ್ಸಿ ಎಂದೂ ಹೆಸರಿದೆ. ಭಾರತದಲ್ಲಿ ಅವರು ತಮ್ಮ ಹೆಸರನ್ನು ರಾಹುಲ್‌ ಗಾಂಧಿ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಈ ಹಿಂದೆ ರಾಹುಲ್‌ ತಾವು ಡೆವಲಪ್‌ಮೆಂಟ್‌ ಎಕನಾಮಿಕ್ಸ್‌ನಲ್ಲಿ ಎಂ.ಫಿಲ್‌ ಪದವಿ ಪಡೆದಿದ್ದಾಗಿ ಹೇಳಿಕೊಂಡಿದ್ದರು, ಆದರೆ ನಂತರ ಕೇಂಬ್ರಿಜ್‌ ಯುನಿವರ್ಸಿಟಿಯಿಂದ ಡೆವಲಪ್‌ಮೆಂಟ್‌ ಸ್ಟಡೀಸ್‌ನಲ್ಲಿ ಎಂ.ಫಿಲ್‌ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ರಾಹುಲ್‌ ವಿರುದ್ಧ ಕಣಕ್ಕೆ ಇಳಿದಿರುವ ಪಕ್ಷೇತರ ಅಭ್ಯರ್ಥಿ ಧ್ರುವ ಲಾಲ್‌ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಶನಿವಾರ ನಡೆಯಬೇಕಿದ್ದ ರಾಹುಲ್‌ರ ನಾಮಪತ್ರ ಪರಿಶೀಲನೆಯನ್ನು ರಿಟರ್ನಿಂಗ್‌ ಆಫೀಸರ್‌ ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು.

ಭಾರತೀಯ ಪ್ರಜೆ ಅಲ್ಲದವರಿಗೆ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್‌ ಬ್ರಿಟನ್ನಿನ ಪ್ರಜೆ ಎಂಬ ಆರೋಪ ಮಹತ್ವ ಪಡೆದುಕೊಂಡಿದೆ. ಕಳೆದ ಚುನಾವಣೆಗಳಲ್ಲೂ ರಾಹುಲ್‌ ಅವರ ಪೌರತ್ವ ಹಾಗೂ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಚರ್ಚೆಯಾಗಿತ್ತು. ಆದರೆ ಈ ಬಾರಿ ಅದು ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್‌ಗಳ ಪರಿಶೀಲನೆಯವರೆಗೂ ಹೋಗಿರುವುದರಿಂದ ಕಾಂಗ್ರೆಸ್‌ ಅಧ್ಯಕ್ಷ ಇಕ್ಕಟ್ಟಿಗೆ ಸಿಲುಕಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28