ಕೊಚ್ಚಿ[ಮೇ.04]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾರತೀಯ ಪೌರತ್ವದ ಕುರಿತು ವಿವಾದ ಉಂಟಾಗಿರುವಾಗಲೇ, ಕೇರಳದ ವಯನಾಡಿನ ನಿವೃತ್ತ ನರ್ಸ್‌ವೊಬ್ಬರು ತಾನು ರಾಹುಲ್‌ ಗಾಂಧಿ ಅವರ ಜನನಕ್ಕೆ ಸಾಕ್ಷಿಯಾಗಿದ್ದೆ ಎಂದು ಹೇಳಿದ್ದಾರೆ.

ದೆಹಲಿಯ ಹೋಲಿ ಫೆಮಿಲಿ ಆಸ್ಪತ್ರೆಯಲ್ಲಿ 1970 ಜೂ.19ರಂದು ರಾಹುಲ್‌ ಜನಿಸಿದಾಗ ಕೇರಳದ ವಯನಾಡಿನ ರಾಜಮ್ಮಾ ವವತಿಲ್‌ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಂದಿನ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡಿರುವ ಅವರು ‘ಸೋನಿಯಾಗಾಂಧಿ ಅವರನ್ನು ಹೆರಿಗೆಗೆಂದು ಕರೆತಂದಾಗ ರಾಹುಲ್‌ ಗಾಂಧಿ ಅವರ ತಂದೆ ರಾಜಿವ್‌ ಗಾಂಧಿ ಮತ್ತು ಚಿಕ್ಕಪ್ಪ ಸಂಜಯ್‌ ಗಾಂಧಿ ಕೋಣೆಯ ಹೊರಗಡೆ ಕಾಯುತ್ತಿದ್ದರು. ಪ್ರಧಾನಿ ಇಂದಿರಾಗಾಂಧಿಯ ಮೊಮ್ಮಗನನ್ನು ನೋಡಲು ನಾವೆಲ್ಲರೂ ತುದಿಗಾಲಿನಲ್ಲಿ ಕಾಯುತ್ತಿದ್ದೆವು. ನವಜಾತ ಶಿಶುವನ್ನು ಮೊದಲು ಎತ್ತಿಕೊಳ್ಳುವ ಅವಕಾಶ ನನಗೆ ಒದಗಿಬಂದಿದ್ದರಿಂದ ಪುಳಕಿತಗೊಂಡಿದ್ದೆ. 49 ವರ್ಷಗಳ ಬಳಿಕ ‘ಆ ಮುದ್ದಾದ ಮಗು’ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದಾನೆ ಮತ್ತು ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ’ ಎಂದು 72 ವಯಸ್ಸಿನ ನಿವೃತ್ತ ದಾದಿ ವವತಿಲ್‌ ಪಿಟಿಐಗೆ ತಿಳಿಸಿದ್ದಾಳೆ.

ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ರಾಹುಲ್‌ ಗಾಂಧಿ ಅವರ ಪೌರತ್ವ ಪ್ರಶ್ನಿಸಿರುವುದು ಬೇಸರ ತಂದಿದೆ. ಅವರ ಆರೋಪ ಆಧಾರ ರಹಿತ. ಯಾರೂ ಕೂಡ ರಾಹುಲ್‌ ಗಾಂಧಿ ಅವರ ಪೌರತ್ವವನ್ನು ಪ್ರಶ್ನಿಸಬಾರದು ಎಂದು ವವತಿಲ್‌ ಹೇಳಿದ್ದಾರೆ.

ದೆಹಲಿಯ ಹೋಲಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕೋರ್ಸ್‌ ಮುಗಿಸಿದ್ದ ವವತಿಲ್‌, ಬಳಿಕ ಭಾರತೀಯ ಸೇನೆಯಲ್ಲಿ ನರ್ಸ್‌ ಆಗಿ ಸೇರಿಕೊಂಡಿದ್ದರು. 1987ರಲ್ಲಿ ನಿವೃತ್ತಿಯ ಬಳಿಕ ಕೇರಳಕ್ಕೆ ಬಂದು ನೆಲೆಸಿರುವ ಅವರು ವೈನಾಡಿನ ಮತದಾರರಾಗಿದ್ದಾರೆ. ಮುಂದಿನ ಬಾರಿ ರಾಹುಲ್‌ ವೈನಾಡಿಗೆ ಭೇಟಿ ನೀಡಿದ ವೇಳೆ ಅವರನ್ನು ಭೇಟಿ ಮಾಡುವ ವಿಶ್ವಾಸನ್ನು ವವತಿಲ್‌ ವ್ಯಕ್ತಪಡಿಸಿದ್ದಾರೆ.