ಲಕ್ನೋ[ಏ.22]: ಲೋಕಸಭಾ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಖಚಿತವಾಗಿದೆ. ಅಮೇಠಿಯ ರಿಟರ್ನಿಂಗ್ ಅಧಿಕಾರಿ ರಾಹುಲ್ ಗಾಂಧಿಯ ನಾಮಪತ್ರವನ್ನು ಅಂಗೀಕರಿಸಿದ್ದಾರೆ. 

ಹೌದು, ಪಕ್ಷೇತರ ಅಭ್ಯರ್ಥಿಯೊಬ್ಬರು  ಲೋಕಸಭಾ ಚುನಾವಣೆಗೆ ಅಮೇಠಿ ಹಾಗೂ ಕೇರಳದ ವಯನಾಡಿನಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಹುಲ್ ಗಾಂಧಿಯ ಪೌರತ್ವವನ್ನು ಪ್ರಶ್ನಿಸಿದ್ದರು. ಅಲ್ಲದೇ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. 


ರಾಹುಲ್‌ ಗಾಂಧಿ 2004ರಲ್ಲಿ ಬ್ರಿಟನ್ನಿನ ಕಂಪನಿಯೊಂದರಲ್ಲಿ ಹೂಡಿಕೆ ಮಾಡುವಾಗ ತಾವು ಬ್ರಿಟಿಷ್‌ ಪ್ರಜೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಅವರಿಗೆ ವಿದೇಶದಲ್ಲಿ ರಾಹುಲ್‌ ವಿನ್ಸಿ ಎಂದೂ ಹೆಸರಿದೆ. ಭಾರತದಲ್ಲಿ ಅವರು ತಮ್ಮ ಹೆಸರನ್ನು ರಾಹುಲ್‌ ಗಾಂಧಿ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಈ ಹಿಂದೆ ರಾಹುಲ್‌ ತಾವು ಡೆವಲಪ್‌ಮೆಂಟ್‌ ಎಕನಾಮಿಕ್ಸ್‌ನಲ್ಲಿ ಎಂ.ಫಿಲ್‌ ಪದವಿ ಪಡೆದಿದ್ದಾಗಿ ಹೇಳಿಕೊಂಡಿದ್ದರು, ಆದರೆ ನಂತರ ಕೇಂಬ್ರಿಜ್‌ ಯುನಿವರ್ಸಿಟಿಯಿಂದ ಡೆವಲಪ್‌ಮೆಂಟ್‌ ಸ್ಟಡೀಸ್‌ನಲ್ಲಿ ಎಂ.ಫಿಲ್‌ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಬೇಕು
-ಧ್ರುವ ಲಾಲ್‌, ಪಕ್ಷೇತರ ಅಭ್ಯರ್ಥಿ 

ಈ ಹಿನ್ನೆಲೆಯಲ್ಲಿ, ಶನಿವಾರ ನಡೆಯಬೇಕಿದ್ದ ರಾಹುಲ್‌ರ ನಾಮಪತ್ರ ಪರಿಶೀಲನೆಯನ್ನು ರಿಟರ್ನಿಂಗ್‌ ಆಫೀಸರ್‌ ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಪೌರತ್ವ ವಿಚಾರಕ್ಕೆ ಸಂಬಮಧಿಸಿದಂತೆ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ ಹಾಗೂ ಅವರು ಯಾವುದೇ ಅಡಚಣೆ ಇಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28