Asianet Suvarna News Asianet Suvarna News

ಚೆನ್ನೈನಲ್ಲಿ ಹನಿ ನೀರಿಗೂ ತತ್ವಾರ ಬೆಂಗಳೂರಿಗೂ ಕಾದಿದೆ ಗಂಡಾಂತರ

ಬೆಂಗಳೂರು ನಗರದ ನೀರಿನ ವತಾರಗಳು ಈಗಾಗಲೇ ನಾಶವಾಗಿವೆ. ಕೆಂಪೇಗೌಡರು ನಿರ್ಮಿಸಿದ ನೂರಾರು ಕೆರೆಗಳು ಈಗಾಗಲೇ ಭೂಗಳ್ಳರ, ರಿಯಲ್‌ ಎಸ್ಟೇಟ್‌ನವರ ಪಾಲಾಗಿವೆ. ನೀರು ಪೂರೈಸುವ ಪ್ರಮುಖ ಮೂಲಗಳಾಗಿದ್ದ ಅರ್ಕಾವತಿ ನಶಿಸಿದೆ.ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರಿಗೆ ನೀರಿಗಾಗಿ ಪರದಾಡುವುದರಲ್ಲಿ ಅನುಮಾನವೇ ಇಲ್ಲ. 

More work less water Garden city Bengaluru faces water scarcity
Author
Bengaluru, First Published Jul 1, 2019, 2:12 PM IST

ತಮಿಳುನಾಡಿನ ರಾಜಧಾನಿ. ಭಾರತದ 6ನೇ ದೊಡ್ಡ ನಗರ. ಇಷ್ಟುದಿನ ನೆಮ್ಮದಿಯಾಗಿದ್ದ ಚೆನ್ನೈಗೆ ಮಾನ್ಸೂನ್‌ ಕೈಕೊಟ್ಟಿದ್ದು, ಭಾರೀ ಸಮಸ್ಯೆಯನ್ನೇ ಸೃಷ್ಟಿದೆ. ಇದೇ ನೀರಿನ ಅಭಾವ. ಜನರು ನೀರಿಗಾಗಿ ಕೊಡ ಹಿಡಿದು ಬೀದಿ ಬೀದಿಗಳಲ್ಲಿ ಹಗಲು ಇರುಳೆನ್ನದೆ ಅಲೆಯುತ್ತಿದ್ದಾರೆ.

ನಗರಕ್ಕೆ ನೀರು ಪೂರೈಸುವ ಪ್ರಮುಖ ನಾಲ್ಕು ನೀರಿನ ಮೂಲಗಳು ಬರಿದಾಗಿವೆ. ಸರ್ಕಾರ ನಗರಕ್ಕೆ ನೀರು ಪೂರೈಸಲು ಹರಸಾಹಸ ಪಡುತ್ತಿದೆ. ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೆ ತಲುಪಲು ಹೆಚ್ಚು ಸಮಯ ಬೇಕಿಲ್ಲ.

ದೇಶದಲ್ಲಿ ನೀರನ್ನು ಪೋಲು ಮಾಡುತ್ತಿರುವವರೇ ಶ್ರೀಮಂತರು!

ಚೆನ್ನೈನಲ್ಲಿ ಎದುರಾದ ಸ್ಥಿತಿ ಬೆಂಗಳೂರಿಗರನ್ನು ಕಾಡದೆ ಬಿಡಲ್ಲ ಎನ್ನುತ್ತಿವೆ ವಾಸ್ತವ ಸಂಗತಿಗಳು. ಹಾಗಾದರೆ ಚೆನ್ನೈ ನೀರಿನ ಹಾಹಾಕಾರ ಎಷ್ಟರಮಟ್ಟಿಗೆ ತೀವ್ರವಾಗಿದೆ, ನಗರದ ಈ ಅವಸ್ಥೆಗೆ ಕಾರಣ ಏನು, ಬೆಂಗಳೂರು ಏಕೆ ಎಚ್ಚೆತ್ತುಕೊಳ್ಳಬೇಕು ಎಂಬ ವಿವರ ಇಲ್ಲಿದೆ.

ಸಮುದ್ರವೇ ಇದ್ದರೂ ಹನಿ ನೀರಿಗೆ ಪರದಾಟ!

ನಲ್ಲಿಯಲ್ಲಿ ಬರುತ್ತಿದ್ದ ನೀರು ನಿಂತುಹೋಗಿದೆ. ಬೋರ್‌ವೆಲ್‌ಗಳು ಬರಿದಾಗಿವೆ. ಸಮುದ್ರವೇ ಬಳಿಯಲ್ಲಿದ್ದರೂ ನೀರಿನ ಬರ. ಎಲ್ಲೆಡೆಯೂ ನೀರಿಗಾಗಿ ಹಾಹಾಕಾರ. ಇದು ಚೆನ್ನೈ ಸ್ಥಿತಿ. ಖಾಸಗಿ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಿ ಎನ್ನುತ್ತಿದೆ. ಮತ್ತಷ್ಟುಕಂಪನಿಗಳು ಕೆಲಸದ ವೇಳೆಯನ್ನು ಕಡಿತಗೊಳಿಸಿವೆ. ಹೋಟೆಲ್‌ಗಳಲ್ಲಿ ತಟ್ಟೆಯಲ್ಲಿ ಊಟ, ತಿಂಡಿ ಕೊಡುವ ಬದಲು ಬಾಳೆ ಎಲೆಯಲ್ಲಿ ನೀಡಲಾಗುತ್ತಿದೆ. ಕೆಲ ಹೋಟೆಲ್‌ಗಳು ಮಧ್ಯಾಹ್ನ ಊಟ ನೀಡುವ ವ್ಯವಸ್ಥೆಯನ್ನೇ ನಿಲ್ಲಿಸಲು ಯೋಜಿಸುತ್ತಿವೆ.

ಶರಾವತಿ ನೀರು ಬೆಂಗಳೂರಿಗೆ; ಸುವರ್ಣ ನ್ಯೂಸ್‌ಗೆ ಸಿಎಂ ಪ್ರತಿಕ್ರಿಯೆ

ಜನರು ಬೆಳಗ್ಗೆ, ಸಂಜೆ, ರಾತ್ರಿ ಎನ್ನದೆ ನೀರಿನ ಬಗ್ಗೆಯೇ ಯೋಚಿಸುವ ಸ್ಥಿತಿ ಸೃಷ್ಟಿಯಾಗಿದೆ. ಇದು ಕೇವಲ ಚೆನ್ನೈನ ಸಮಸ್ಯೆ ಅಷ್ಟೇ ಅಲ್ಲ. ತಮಿಳುನಾಡಿನ 17 ಜಿಲ್ಲೆಗಳೂ ನೀರಿನ ಸಮಸ್ಯೆಯಿಂದ ನಲುಗಿವೆ. ಇದರೊಂದಿಗೆ ಚೆನ್ನೈ ವಿಶ್ವದ ಗಮನ ಸೆಳೆದಿದೆ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನೀರಿನ ಸಮಸ್ಯೆಯಂತೆಯೇ ಚೆನ್ನೈ ಕೂಡ ಆಗುತ್ತಿದೆ. ಮೊದಲು ಬೆಂಗಳೂರು ಕೇಪ್‌ಟೌನ್‌ನಂತೆ ಆಗುತ್ತದೆ ಎಂದು ಹೇಳಲಾಗುತ್ತಿತ್ತು. ಅದಕ್ಕಿಂತ ಮೊದಲೇ ಚೆನ್ನೈನಲ್ಲಿ ಜಲಕ್ಷಾಮ ತಾರಕ್ಕೇರಿದೆ.

ಬರಿದಾದ ನೀರಿನ ಮೂಲಗಳು

ಚೆನ್ನೈಗೆ ಪ್ರಮುಖವಾಗಿ ನೀರು ಪೂರೈಸುವುದು 4 ಜಲಾಶಯಗಳು. ಇವು ನಗರದ ಶೇ.60ರಷ್ಟುನೀರನ್ನು ಒದಗಿಸುತ್ತವೆ. ರೆಡ್‌ ಹಿಲ್ಸ್‌, ಚೆಂಬರಂಬಕ್ಕಂ, ಕೊಲರವನ್‌, ಪೂಂಡಿ ಜಲಾಶಯಗಳು ಖಾಲಿ ಆಗಿವೆ. ನೀರಿನಿಂದ ತುಂಬಿರಬೇಕಿದ್ದ ಅವುಗಳ ನೆಲ ಒಣಗಿ ಬಿರುಕು ಬಿಟ್ಟಿದೆ. 25 ವರ್ಷಗಳಿಂದ ಬರಿದಾಗದ ಜಲಾಶಯಗಳು ಈ ವರ್ಷ ಖಾಲಿ ಹೊಡೆಯುತ್ತಿವೆ.

ಇದ್ದ ಅಲ್ಪಸ್ಪಲ್ಪ ನೀರನ್ನು ಟ್ಯಾಂಕರ್‌ ಮೂಲಕ ಚೆನ್ನೈಗೆ ಪೂರೈಸಲಾಗುತ್ತಿದೆ. ಜಲಾಶಯಗಳ ನೀರು ಖಾಲಿ ಆದ ಬಳಿಕ ಜನರು ಬೋರ್‌ವೆಲ್‌ಗಳತ್ತ ತಿರುಗಿದರು. ಆದರೆ ದುರಂತ ಅಲ್ಲಿಯೂ ಅಟಕಾಯಿಸಿಕೊಂಡಿತು.

ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

ನಗರದ 40 ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಒಂದೇ ತಿಂಗಳಲ್ಲಿ ಬರಿದಾದವು. ಈಗ 600 ಅಡಿ ಆಳಕ್ಕೆ ಕೊರೆದರೂ ಒಂದು ಹನಿ ನೀರು ಸಿಗುತ್ತಿಲ್ಲ. ಲಭ್ಯವಿರುವ ನೀರೂ ಕೂಡ ಕುಡಿಯಲು ಯೋಗ್ಯವಾಗಿಲ್ಲ. ಸಮುದ್ರ ನೀರನ್ನು ಶುದ್ಧೀಕರಿಸಿ ಬಳಸುವ ತಂತ್ರಜ್ಞಾನವನ್ನು ತಮಿಳುನಾಡು ಇನ್ನೂ ಅಳವಡಿಸಿಕೊಂಡಿಲ್ಲ.

ಒಂದು ಕೊಡ ನೀರಿನ ಬೆಲೆ 10 ರು.!

ಹೌದು ನೀರಿನ ಕೊರತೆ ಯಾವ ಮಟ್ಟಕ್ಕೆ ತಲುಪಿದೆ ಎಂದರೆ 20 ಲೀಟರ್‌ ಹಿಡಿಯುವ ಒಂದು ಕೊಡ ನೀರಿಗೆ ಜನರು 10 ರು. ನೀಡಬೇಕಿದೆ. ಇದು ಅಲ್ಲಿನ ತೀರಾ ಬಡತನದಲ್ಲಿರುವ ಜನರ ಪಾಲಿಗೆ ಅತ್ಯಂತ ಸಂಕಷ್ಟದ ಸ್ಥಿತಿಯನ್ನು ತಂದೊಡ್ಡಿದೆ.

ತಮ್ಮ ಆದಾಯದ ನಾಲ್ಕನೇ ಒಂದು ಭಾಗವನ್ನು ಕೇವಲ ನೀರಿಗಾಗಿ ತೆಗೆದಿಡುವ ಸ್ಥಿತಿ ಇದೆ. ಹಣ ನೀಡಿದರೂ ಅಷ್ಟುಸುಲಭವಾಗಿ ನೀರು ಸಿಗುವುದಿಲ್ಲ. ಮಾಡುವ ಕೆಲಸ ಬಿಟ್ಟು ಕೇವಲ ನೀರಿಗಾಗಿ 2-3 ಕಿಲೋ ಮೀಟರ್‌ ಕ್ಯೂ ನಿಲ್ಲುವ ಪರಿಸ್ಥಿತಿ. ಅಲ್ಲದೆ ಒಂದು ಲೋಡು ಲಾರಿ ನೀರಿಗೆ ಆರ್ಡರ್‌ ಕೊಟ್ಟರೆ ತಕ್ಷಣವೇ ಸಿಗುವುದಿಲ್ಲ.

ತಿಂಗಳುಗಟ್ಟಲೇ ಕಾಯಬೇಕು. ನಲ್ಲಿಯಲ್ಲಿ 2 ದಿನಕ್ಕೊಮ್ಮೆ 1 ಗಂಟೆ ನೀರು ಬಂದರೆ ಅದೇ ಪುಣ್ಯ. ಚೆನ್ನೈ ಮೆಟ್ರೋ ನೀರು ಸರಬರಾಜು ಮಂಡಳಿ ನೀರಿನ ಪೂರೈಕೆಯನ್ನು 830 ಎಂಎಲ್‌ಡಿಯಿಂದ 525 ಎಂಎಲ್‌ಡಿ ಇಳಿಸಿದೆ. ಇದರ ಪರಿಣಾಮ ಜನರ ಮೇಲೆ ದೊಡ್ಡ ಮಟ್ಟದಲ್ಲಿಯೇ ಆಗಿದೆ.

ಮಹಾ ಮಳೆ, ಅಧಿಕ ಉಷ್ಣಾಂಶ

2015 ರಲ್ಲಿ ತಮಿಳುನಾಡಿನಲ್ಲಿ ಮಹಾಮಳೆಯಾಗಿತ್ತು. ಅಂದು ಚೆನ್ನೈ ಅಕ್ಷರಶಃ ನೀರಿನಲ್ಲಿ ಮುಳುಗಿತ್ತು. 400ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟರು. 2018ರಲ್ಲೂ ಮಳೆ ಕರ್ನಾಟಕ, ತಮಿಳುನಾಡಿನಲ್ಲಿ ಭರ್ಜರಿಯಾಗಿಯೇ ಸುರಿಯಿತು. ಕಾವೇರಿ ಕಣಿವೆಯಲ್ಲಿ ನೀರು ನಿಯಂತ್ರಣವಿಲ್ಲದೆ ಹರಿಯಿತು. ಆದರೂ ನೀರಿನ ಸಮಸ್ಯೆ ತಾರಕಕ್ಕೇರಿದೆ.

ಆದರೂ 22 ಕಿ.ಮೀ. ದೂರದ ಜೊಲಾರ್‌ಪೇಟೆಯಿಂದ ಚೆನ್ನೈ ನಗರಕ್ಕೆ ರೈಲಿನಲ್ಲಿ ನೀರನ್ನು ತರಲು ಸರ್ಕಾರ ಯೋಚಿಸುತ್ತಿದೆ. ಇದಕ್ಕೆ ಕಾರಣ ಹಲವು. ಚೆನ್ನೈನಲ್ಲಿ ಈ ವರ್ಷ ವಾಡಿಕೆ ಮಳೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸುರಿದಿದೆ. ಇದರ ಪರಿಣಾಮ ಈ ವರ್ಷ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ನೀರಿನ ವತಾರಗಳು ಬತ್ತಿವೆ.

2001 ರಲ್ಲಿ ನಗರಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕಾಗಿ ಸರ್ಕಾರ ನೀರಿನ ಸಮಸ್ಯೆ ತಲೆದೋರದಂತೆ ಮಳೆ ನೀರು ಕೊಯ್ಲು ಕಾಯ್ದೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದಿತ್ತು. ಆದರೆ ಸಮಸ್ಯೆ ಮಾತ್ರ ಬಗೆ ಹರಿಯಲೇ ಇಲ್ಲ. ಜನರಲ್ಲಿ ಜಾಗೃತಿ ಮೂಡಿಸಿ ಸಮರ್ಪಕವಾಗಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಯಿತು. ಇದರ ಪರಿಣಾಮ ಈಗ ಕಣ್ಣ ಮುಂದಿದೆ.

ಜನರ ನಿರ್ಲಕ್ಷ್ಯ, ಭವಿಷ್ಯ ಭಯಂಕರ!

ಆಡಳಿತದಾರರ ಮರುಳು ಮಾತುಗಳು ಕೂಡ ಒಮ್ಮೊಮ್ಮೆ ಕೆಟ್ಟಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಚೆನ್ನೈ ಸಾಕ್ಷಿಯಾಗಿ ನಿಂತಿದೆ. ಅಲ್ಲಿ ಕೇವಲ ಕಾಯ್ದೆ ಮಾಡಿ ಸುಮ್ಮನಾದ ಪರಿಣಾಮ ನೀರಿನ ಸಮಸ್ಯೆ ಆಕಾಶದೆತ್ತರಕ್ಕೆ ಬೆಳೆದಿದೆ.

ತಜ್ಞರ ವರದಿ ಪ್ರಕಾರ ಚೆನ್ನೈ 2100ರ ವೇಳೆಗೆ ಮತ್ತಷ್ಟುನೀರಿನ ಕೊರತೆ ಎದುರಿಸುವುದು ನಿಶ್ಚಿತ. ಒಟ್ಟಾರೆ ಮಳೆಯ ಪ್ರಮಾಣ ಶೇ.9ರಷ್ಟುಕಡಿಮೆ ಆಗಲಿದೆ. ಅನಗತ್ಯವಾಗಿ, ರೂಪುರೇಷೆ ಇಲ್ಲದೆ, ಭವಿಷ್ಯಕ್ಕೆ ಬೇಕಾದ ಮೂಲ ಸೌಕರ‍್ಯದ ಅಂದಾಜು ಲೆಕ್ಕಾಚಾರ ಹಾಕದೆ, ನಗರವನ್ನು ಬೆಳೆಯಲು ಬಿಟ್ಟಿರೆ ಏನಾಗುತ್ತದೆ ಎನ್ನುವುದಕ್ಕೆ ಚೆನ್ನೈ ಸಾಕ್ಷಿಯಾಗುತ್ತಲೇ ಇದೆ. ಅತ್ತ ಅತಿವೃಷ್ಟಿಯನ್ನೂ ತಾಳಲಾರದೆ, ಇತ್ತ ಅನಾವೃಷ್ಟಿಯನ್ನೂ ಎದುರಿಸಲಾಗದೆ ನಲುಗುತ್ತಿದೆ.

ಚೆನ್ನೈ ಸ್ಥಿತಿ ಬೆಂಗಳೂರಿಗೆ ಎಚ್ಚರಿಕೆಯ ಗಂಟೆ!

ಚೆನ್ನೈನಲ್ಲಿ ಇಂದು ನಿರ್ಮಾಣ ಆಗಿರುವ ಸ್ಥಿತಿ ಸಿಲಿಕಾನ್‌ ಸಿಟಿ, ಉದ್ಯಾನ ನಗರಿ ಬೆಂಗಳೂರಿಗೂ ಎಚ್ಚರಿಕೆಯ ಗಂಟೆ ಎನ್ನುವುದಲ್ಲಿ ಅನುಮಾನವಿಲ್ಲ. ನಗರದ ನೀರಿನ ವತಾರಗಳು ಈಗಾಗಲೇ ನಾಶವಾಗಿವೆ. ಕೆಂಪೇಗೌಡರು ನಿರ್ಮಿಸಿದ ನೂರಾರು ಕೆರೆಗಳು ಈಗಾಗಲೇ ಭೂಗಳ್ಳರ, ರಿಯಲ್‌ ಎಸ್ಟೇಟ್‌ನವರ ಪಾಲಾಗಿವೆ.

ನೀರು ಪೂರೈಸುವ ಪ್ರಮುಖ ಮೂಲಗಳಾಗಿದ್ದ ಅರ್ಕಾವತಿ ನಶಿಸಿದೆ. ವೃಷಭಾವತಿ ನದಿಗೆ ಕಟ್ಟಲಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಬಳಕೆಗೆ ಯೋಗ್ಯವಲ್ಲದ ಮಟ್ಟಿಗೆ ಹಾಳಾಗಿದೆ. ಇರುವ ಒಂದೇ ಮೂಲವೆಂದರೆ ಕಾವೇರಿ ನದಿ. ಅಲ್ಲಿಂದಲೂ 5ನೇ ಹಂತದಲ್ಲಿ ನೀರು ತರುವ ಕಾರ‍್ಯ ಚಾಲ್ತಿಯಲ್ಲಿದೆಯಾದರೂ, ಪ್ರಸ್ತುವ ವರ್ಷ ಕಾವೇರಿ ಮೂಲ ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಕೆಆರ್‌ಎಸ್‌, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿ ನೀರು ಈಗಲಾಗಲೇ ತಳಮಟ್ಟದಲ್ಲಿದೆ.

ಜೂನ್‌ ತಿಂಗಳು ಕಳೆದರೂ ನೀರು ತುಂಬಿಲ್ಲ. ಇವುಗಳಿಂದ ನೀರು ತಂದು ಬೆಂಗಳೂರಿನ ಜಲ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಗೆ ಆರಂಭದಲ್ಲೇ ಕಂಟಕ ಎದುರಾಗಿದೆ. ಇನ್ನು ನಗರಕ್ಕೆ ನೀರು ತರುವ ಯೋಜನೆಯಾದ ಎತ್ತಿನಹೊಳೆ ಯೋಜನೆ ಇನ್ನೂ ಕುಂಟುತಾ ಸಾಗಿದೆ.

ಆದರೆ ಅದರಿಂದ ನೀರು ತರುವ, ಅದರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟಚಿತ್ರ ಸಿಕ್ಕಿಲ್ಲ. ಇನ್ನೂ ಒಂದು ಯೋಜನೆ ಸರ್ಕಾರದ ಮುಂದಿದೆ. ಅದೇ ಶರಾವತಿಯಿಂದ ನೀರು ತರುವ ಯೋಜನೆ. ಆದರೆ ಸದ್ಯಕ್ಕೆ ಇದು ಕಾರ‍್ಯಸಾಧು ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಬಾರಿ ಮಳೆ ಬಾರದಿದ್ದರೆ ಬೆಂಗಳೂರಿನ ಸ್ಥಿತಿ ಊಹಿಸಿಕೊಳ್ಳಲೂ ಕಷ್ಟ.

ಇನ್ನೊಂದು ಕೇಪ್‌ಟೌನ್‌ ಆಗುತ್ತಾ ರಾಜಧಾನಿ?

ಇಂತಹ ಅನುಮಾನ ನಿತ್ಯವೂ ಬಲವಾಗುತ್ತಲೇ ಸಾಗಿದೆ. ನೀರಿನ ಸಮಸ್ಯೆ ಬೆಂಗಳೂರು ನಗರವನ್ನು ಹಿಂದೆಯೂ ಬಾಧಿಸಿತ್ತು. ಆದರೆ ಅದಕ್ಕೊಂದು ತಾತ್ಕಾಲಿಕ ಪರಿಹಾರವನ್ನಷ್ಟೇ ಸರ್ಕಾರ ನೀಡುತ್ತಾ ಬಂದಿತು. ಎಗ್ಗಿಲ್ಲದೆ ಬೆಳೆಯುತ್ತಿರುವ ನಗರಲ್ಲಿ ಅವ್ಯಾಹತವಾಗಿ ಬೋರ್‌ವೆಲ್‌ ಕೊರೆಯಲು ಅನುಮತಿ ನೀಡಿತು. ಬಳಿಕ ಅದನ್ನು ನಿಯಂತ್ರಿಸಲು ಕಾನೂನು ತಂದರೂ ಕೇಳುವವರೇ ಇಲ್ಲದ ಸ್ಥಿತಿ.

ಇದರ ಪರಿಣಾಮ 1000 ಅಡಿಗೆ ಹೋದರೂ ನೀರಿನ ಪಸೆ ಸಿಗುತ್ತಿಲ್ಲ. ನಗರದಲ್ಲಿ ಸುರಿಯುವ ಮಳೆಯ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಇಂಗಲು ಜಾಗವೂ ಇಲ್ಲ. ಇದರಿಂದ ನಗರದ ಉಷ್ಣಾಂಶವೂ ಪ್ರತಿ ವರ್ಷ ಏರುತ್ತಿದೆ. ಇದರಿಂದ ಜಲ ಮೂಲಗಳಲ್ಲಿ ಇರುವ ಅಲ್ಪಸ್ವಲ್ಪ ನೀರೂ ಆವಿ ಆಗುತ್ತದೆ. ನಗರದ ಕೆರೆಗಳ ಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿದೆ.

ಇರುವ ಕೆರೆಗಳಲ್ಲಿ ಬೆಂಕಿ ಉತ್ಪತಿ ಆಗುತ್ತಿದೆ. ಇದಕ್ಕಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಕೆಟ್ಟದಾಗಿ ಚಿತ್ರಿತವಾಗುತ್ತಿದೆ. ಕೆಲವು ಕೆರೆಗಳಲ್ಲಿ ನೀರೇ ಇಲ್ಲ. ಇದ್ದರೂ ಅ ನೀರು ಯಾವುದಕ್ಕೂ ಬೇಡ. ಮಡಿವಾಳ ಕೆರೆ ಸೇರಿದಂತೆ ಕೆಲವು ಕೆರೆಗಳನ್ನು ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ್ದರೂ ಒಟ್ಟಾರೆ ವ್ಯವಸ್ಥೆಯಲ್ಲಿ ಅದು ನಗಣ್ಯವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬೆಂಗಳೂರು ನಗರ ಅಲ್ಲ ನರಕ ಆಗುವುದರಲ್ಲಿ ಅನುಮಾನವಿಲ್ಲ.

 

Follow Us:
Download App:
  • android
  • ios