Asianet Suvarna News Asianet Suvarna News

ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಪ್ರಸ್ತಾವಿತ ಯೋಜನೆ ವಿರುದ್ಧ ಮಲೆನಾಡಿನಲ್ಲಿ ಎದ್ದಿರುವ ವಿರೋಧ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿಭಟನೆ ಜಿಲ್ಲೆಯಾದ್ಯಂತ ಹಬ್ಬುತ್ತಿದೆ. ಇದೇ ಮೊದಲ ಬಾರಿಗೆ  ಒಕ್ಕೊರಲಿನ ಧ್ವನಿ ಮೂಡಿದ್ದು, ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ ಮಾಡಿಕೊಳ್ಳಲಾಗುತ್ತಿದೆ.

Pro and cons of Linganamakki Sharavati water to Bengaluru
Author
Bengaluru, First Published Jun 30, 2019, 10:04 AM IST

1897 ರವರೆಗೂ ಬೆಂಗಳೂರಿಗೆ ನಗರದಲ್ಲಿದ್ದ ಅಪಾರ ಸಂಖ್ಯೆಯ ಕೆರೆಕುಂಟೆಗಳೇ ಜಲಮೂಲವಾಗಿದ್ದವು. 1897 ರ ಹೊತ್ತಿಗೆ ಅರ್ಕಾವತಿ ನದಿಗೆ ಹೆಸರಘಟ್ಟದಲ್ಲಿ ಜಲಾಶಯ ನಿರ್ಮಿಸಿ, ನಗರಕ್ಕೆ ಕೊಳಾಯಿ ನೀರು ಒದಗಿಸಲಾಯಿತು. ಮುಂದೆ 1930 ರ ದಶಕದಲ್ಲಿ ನೀರಿನ ಕೊರತೆ ತಲೆದೋರಿದಾಗ ಮತ್ತೆ ಅದೇ ಅರ್ಕಾವತಿ ನದಿಗೆ ತಿಪ್ಪಗೊಂಡನಹಳ್ಳಿಯಲ್ಲಿ ಜಲಾಶಯ ನಿರ್ಮಿಸಿ ಹೆಚ್ಚುವರಿ ನೀರೊದಗಿಸಲಾಯಿತು.

1930 ರ ದಶಕದಲ್ಲಿ ಮತ್ತೆ ಬೆಂಗಳೂರಿಗೆ ನೀರಿನ ಕೊರತೆ ಉಂಟಾಗಿ ಕಾವೇರಿಯತ್ತ ಕಣ್ಣು ಹಾಕಲಾಯಿತು. ಬೆಂಗಳೂರಿನ ದಕ್ಷಿಣ ದಿಕ್ಕಿನಲ್ಲಿ ಇಲ್ಲಿಂದ ನೂರು ಕಿಲೋ ಮೀಟರ್ ದೂರದಲ್ಲಿ ಮತ್ತು ಒಂದು ಸಾವಿರ ಅಡಿ ತಗ್ಗಿನಲ್ಲಿ ಇರುವ ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ತರುವ ಕಾವೇರಿ ಮೊದಲ ಹಂತದ ಯೋಜನೆ ಆರಂಭವಾಯಿತು.

ಬೆಂಗಳೂರು ಬೆಳೆಯುತ್ತಲೇ ಸಾಗಿದ ಪರಿಣಾಮವಾಗಿ ಕಾವೇರಿಯ ನೀರು ಸರಬರಾಜು ಹಂತ ಹಂತವಾಗಿ ಮುಂದುವರೆದು ಇದೀಗ ಐದನೇ ಹಂತಕ್ಕೆ ಬಂದು ತಲುಪಿದೆ. ಈ ನಡುವೆ ಹೇಗೂ ಕಾವೇರಿ ನೀರಿದೆ ಎಂಬ ಹುಂಬ ಧೈರ್ಯದಲ್ಲಿ ನಗರದ ಅನೇಕ ಕೆರೆಗಳನ್ನು ಮುಚ್ಚಿ, ನಿವೇಶನ, ಬಸ್‌ಸ್ಟ್ಯಾಂಡ್, ಸ್ಟೇಡಿಯಂ, ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಯಿತು.  

ಸುಮಾರು 5500 ಕೋಟಿ ರೂಪಾಯಿ ವೆಚ್ಚದ ಕಾವೇರಿ ನೀರು ಸರಬರಾಜು ಯೋಜನೆಯ ಐದನೇ ಹಂತವು ಇದೀಗ ಪ್ರಗತಿಯಲ್ಲಿದ್ದು, ಅದು 2022 ರ ಹೊತ್ತಿಗೆ ಮುಕ್ತಾಯಗೊಳ್ಳಬೇಕಿದೆ. ಅದರಿಂದ ನಗರಕ್ಕೆ ಒಟ್ಟು 775 ದಶಲಕ್ಷ ಲೀಟರ್ ಹೆಚ್ಚುವರಿ ನೀರು ದೊರೆಯುವ ಪ್ರಸ್ತಾಪವಿದ್ದರೂ ಅದರಿಂದ ಬೆಂಗಳೂರಿನ ನೀರಡಿಕೆ ನೀಗಲಾರದು. ಕಾರಣ ಹದ್ದುಮೀರಿ ಬೆಳೆಯುತ್ತಿರುವ ಬೆಂಗಳೂರಿನ ಏರುತ್ತಿರುವ
ಜನಸಂಖ್ಯೆ. 

ಬೆಂಗಳೂರಿನ ಈಗಿನ ಜನಸಂಖ್ಯೆ ಒಂದೂ ಕಾಲು ಕೋಟಿ ಎನ್ನಲಾಗಿದ್ದು, ಅದರ ಬೆಳವಣಿಗೆಯ ವೇಗ ಶೇಕಡ ನಾಲ್ಕರ ಅಂಕೆಯನ್ನು ಮಿಕ್ಕಿದೆ. ಅಂದರೆ ಬೆಂಗಳೂರಿಗೆ ಪ್ರತಿವರ್ಷ ಐದು ಲಕ್ಷಕ್ಕಿಂತ ಹೆಚ್ಚು ಜನರ ಸೇರ್ಪಡೆಯಾಗುತ್ತಿದೆ. ಪ್ರಸ್ತುತ ಬೆಂಗಳೂರಿನ ನೀರಿನ ಬೇಡಿಕೆ ನೂರಾಮೂವತ್ತು ದಶಲಕ್ಷ ಲೀಟರ್ ಆಗಿದ್ದರೆ ಒದಗಿಸಲಾಗುತ್ತಿರುವುದು ಕೇವಲ 900 ದಶಲಕ್ಷ ಲೀಟರ್ ಮಾತ್ರ.

ಉಳಿದ ನೀರು ಬೆಂಗಳೂರಿನ ಒಟ್ಟು ನಾಲ್ಕು ಲಕ್ಷ ಸಂಖ್ಯೆಯ ಕೊಳವೆ ಬಾವಿಗಳಲ್ಲಿ ಜೀವಂತವಿರುವ ಶೇಕಡಾ ಇಪ್ಪತ್ತೈದರಷ್ಟು ಸಂಖ್ಯೆಯ ಕೊಳವೆ ಬಾವಿಗಳಿಂದ ಪೂರೈಕೆಯಾಗುತ್ತಿದೆ. ದಿನೇದಿನೇ ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು ಪ್ರತಿವರ್ಷ ಹತ್ತಾರು ಸಾವಿರ ಕೊಳವೆ ಬಾವಿಗಳು ಒಣಗುತ್ತಿವೆ. ಕಾವೇರಿ ಐದನೇ ಹಂತ ಮುಗಿದ ನಂತರ ಜಲಮಂಡಳಿ ಹೆಚ್ಚುವರಿ ನೀರಿಗಾಗಿ ಕಾವೇರಿ ನದಿಗೂ ಕೈಯಿಕ್ಕುವಂತಿಲ್ಲ. ಯಾಕೆಂದರೆ ಬೆಂಗಳೂರಿನ ಕುಡಿಯುವ ನೀರಿಗಾಗಿ ಕಾವೇರಿ ಪ್ರಾಧಿಕಾರ ಕೊಟ್ಟ ಪಾಲು ಅಲ್ಲಿಗೆ ಮುಗಿದಿರುತ್ತದೆ.

ಬೆಂಗಳೂರಿಗಾಗಿ ಪ್ರಾಧಿಕಾರ ಕೊಟ್ಟ ಪಾಲೆಷ್ಟು?:

ಪ್ರತ್ಯೇಕವಾಗಿ ಬೆಂಗಳೂರಿನ ಕುಡಿಯುವ ನೀರಿಗಾಗಿ ಕಾವೇರಿ ನದಿಯಿಂದ ಒಟ್ಟು ಮೂವತ್ತು ಟಿಎಂಸಿ ನೀರಿಗೆ ಕರ್ನಾಟಕ ಸರ್ಕಾರ ತನ್ನ ಬೇಡಿಕೆ ಮಂಡಿಸಿದ್ದರೂ ಕಾವೇರಿ ಜಲಪ್ರಾಧಿಕಾರ ತನ್ನ ಆದೇಶದ ಮೂಲಕ ಬೆಂಗಳೂರಿನ ಕುಡಿಯುವ ನೀರಿಗಾಗಿ ಹಂಚಿಕೆ ಮಾಡಿದ ನೀರಿನ ಪ್ರಮಾಣ 23 ಟಿ ಎಂ ಸಿ ಮಾತ್ರ.

ಪ್ರಾಧಿಕಾರ ತನ್ನ ಆದೇಶ ಹೊರಡಿಸುವಾಗ ಬೆಂಗಳೂರಿನ ಮೂರನೇ ಒಂದು ಭಾಗ ಮಾತ್ರ ಕಾವೇರಿ ಕಣಿವೆ ಪ್ರದೇಶದ ವ್ಯಾಪ್ತಿಗೆ ಬರುತ್ತಿದ್ದು, ಬೆಂಗಳೂರಿನ ಶೇಕಡ ಐವತ್ತರಷ್ಟು ನೀರಿನ ಬೇಡಿಕೆ\ ಅಂತರ್ಜಲದಿಂದ ಪೂರಣಗೊಳ್ಳಬಹುದಾದ ಕಾರಣ ನೀಡಿ ಬೆಂಗಳೂರಿಗೆ ಕಾವೇರಿಯಿಂದ ಒಟ್ಟು 23 ಟಿಎಂಸಿ ಪ್ರಮಾಣದಷ್ಟು ನೀರನ್ನು ಮಾತ್ರ ಒದಗಿಸುವುದು ಸಮರ್ಪಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ತನ್ನ ಆದೇಶದಲ್ಲಿ ಅದು ಎರಡನೆಯ ಹಂತದಲ್ಲಿ ಒದಗಿಸಿದ 4.75 ಟಿ ಎಂ ಸಿ ನೀರು ಬೆಂಗಳೂರು ಗ್ಲೋಬಲ್ ಸಿಟಿಯಾಗಿ ಬೆಳೆದು ನಿಂತ ಕಾರಣಕ್ಕಾಗಿ ಮಾತ್ರ ಎಂದು ಸ್ಪಷ್ಟವಾಗಿ ಹೇಳಿತ್ತು. ಈ ಎಲ್ಲ ಕಾರಣಗಳಿಂದ ಅನಿರೀಕ್ಷಿತ ಮತ್ತು ಅಪಾರ ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ಒಂದೂ ಕಾಲು ಕೋಟಿ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈಗ ಕಂಗಾಲಾಗಿ ನಿಂತಿದೆ. 

ಮುಂದೇನು ದಾರಿ? ಶರಾವತಿಯೇ ಗತಿಯೇ!?:

ಸರ್ಕಾರದ ಎದುರು 2022 ರ ನಂತರ ಬೆಂಗಳೂರಿನ ನೀರಿನ ಪೂರೈಕೆ ಹೇಗೆಂಬ ಪ್ರಶ್ನೆ ದೈತ್ಯಾಕಾರವಾಗಿ ನಿಂತಾಗ ಅದು ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಗಿರುವ ಪರ್ಯಾಯ ಮಾರ್ಗಗಳನ್ನು ಶೋಧಿಸುವುದಕ್ಕಾಗಿ, 2010 ರಲ್ಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ನಿವೃತ್ತ ಮುಖ್ಯ ಇಂಜಿನಿಯರ್ ಹೆಚ್ ಎನ್ ತ್ಯಾಗರಾಜರ ಅಧ್ಯಕ್ಷತೆಯಲ್ಲಿ
ಸಮಿತಿಯೊಂದನ್ನು ನೇಮಿಸಿತ್ತು.

ಅದು ಕಳೆದ ವರ್ಷ ಅಕ್ಟೋಬರ್ ಇಪ್ಪತ್ತೊಂದರಂದು ತನ್ನ ವರದಿ ಸಲ್ಲಿಸಿ, ಒಟ್ಟು ೧೨೫೦೦ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಶರಾವತಿ ಕಣಿವೆಯ ಲಿಂಗನಮಕ್ಕಿ ಜಲಾಶಯದಿಂದ ಒಟ್ಟು ಮೂವತ್ತು ಟಿ ಎಂ ಸಿ ನೀರನ್ನು ತರಬಹುದು ಎಂಬ ಶಿಫಾರಸ್ಸನ್ನು ಸರ್ಕಾರದೆದುರು ಮಂಡಿಸಿತು.

ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿ ಡಾ ಪರಮೇಶ್ವರ್, ತ್ಯಾಗರಾಜ ಸಮಿತಿಯ ಶಿಫಾರಸಿನಂತೆ ಕರ್ನಾಟಕ ಸರ್ಕಾರ ಬೆಂಗಳೂರಿಗೆ ಶರಾವತಿ ನೀರನ್ನು ತರಲು ಉದ್ದೇಶಿಸಿದ್ದು , ಆ ಕುರಿತು ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲು ತಾವು ಸೂಚನೆ ನೀಡಿರುವುದಾಗಿ ಉದ್ಘೋಷಿಸಿದರು. ಅವರ ಪ್ರಕಾರ ಈಗ ಹತ್ತು ಟಿ. ಎಂ ಸಿ ನೀರನ್ನು ತರುವುದು ಮತ್ತು ಮುಂದೆ ಅದನ್ನು ಮೂವತ್ತು ಟಿ ಎಂ ಸಿ ಗೆ ಹೆಚ್ಚಿಸುವುದು.

ಮೂವತ್ತು ಟಿ ಎಂ ಸಿ ನೀರನ್ನು ತಂದರೆ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ನೀರನ್ನು ಶರಾವತಿಯಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ಅಂದರೆ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತರುವುದು ಸರ್ಕಾರದ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಏನಿದು ಯೋಜನೆ?:

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ಲಿಂಗನಮಕ್ಕಿ ಹಿನ್ನೀರಿನ ಹಸಿರುಮಕ್ಕಿ ಎಂಬ ಸ್ಥಳದಲ್ಲಿ ನೀರೆತ್ತುವ ಸ್ಥಾವರ ಸ್ಥಾಪಿಸಿ ಅಲ್ಲಿಂದ ನೀರನ್ನು ಯಗಚಿ ಜಲಾಶಯಕ್ಕೆ ತರುವುದು. (ಕೆಲವು ಹೇಳಿಕೆ ಅಲ್ಲಿಂದ ವಾರಾಹಿ ಯೋಜನೆಯ ಮಾಣಿ ಜಲಾಶಯಕ್ಕೆ ತಂದು ಅಲ್ಲಿಂದ ಯಗಚಿಗೆ ತರಲಾಗುವುದೆಂದೂ ಹೇಳಲಾಗುತ್ತಿದೆ.) ಯಗಚಿ ಜಲಾಶಯದಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ತಂದು ಅಲ್ಲಿಂದ ಜಲಮಂಡಳಿಯ ನೀರಿನ ಪೈಪುಗಳ ಮೂಲಕ ನಗರಕ್ಕೆ ಒದಗಿಸುವುದು ಉದ್ದೇಶಿತ ಯೋಜನೆ.

ಲಿಂಗನಮಕ್ಕಿ ಜಲಾಶಯ ತುಂಬಿದಾಗ ಅದರ ಎತ್ತರ 1819. ಅದರಿಂದ ನೀರೆತ್ತಬಹುದಾದ ಕನಿಷ್ಠ ಎತ್ತರ ೧೭೧೫ ಅಡಿ. ಬೆಂಗಳೂರಿನ ಎತ್ತರ ಸರಾಸರಿ ೩೧೦೦ ಅಡಿಗೂ ಹೆಚ್ಚು. ಲಿಂಗನಮಕ್ಕಿಯಿಂದ ಬೆಂಗಳೂರಿನ ದೂರ ೪೦೦ ಕಿಲೋಮೀಟರ್ ಅಂದರೆ ಶರಾವತಿಯಿಂದ ಬೆಂಗಳೂರಿಗೆ ನೀರು ತರಲು ಅದನ್ನು ಸುಮಾರು ಒಂದೂವರೆ ಸಾವಿರ ಅಡಿ ಮೇಲಕ್ಕೆತ್ತಿ ನಾಲ್ಕು ನೂರು ಕಿಲೋಮೀಟರ್ ದೂರಕ್ಕೆ ತಳ್ಳಿಕೊಂಡುಬರಬೇಕು.

ಬೆಂಗಳೂರು ಭಾರತದ ಕೇಪ್ ಟೌನ್ ಆಗಲಿದೆ !:

ಬೆಂಗಳೂರು ಇದೇ ವೇಗದಲ್ಲಿ ಬೆಳೆದರೆ 2050 ರ ಹೊತ್ತಿಗೆ ನಗರದ ಜನಸಂಖ್ಯೆ ನಾಲ್ಕು ಕೋಟಿ ದಾಟುತ್ತದೆ. ಈಗೇನೋ ಶರಾವತಿಯಿಂದ ತರುತ್ತೀರಿ. ಅದು ಮುಗಿದರೆ ನಂತರ ಅಘನಾಶಿನಿ. ಅದೂ ಖಾಲಿಯಾದ ಮೇಲೆ ಸೂಪಾ ಜಲಾಶಯ ಅಲ್ಲವೇ? ಹೀಗೆ ನಾಡಿನ ನದಿಗಳನ್ನೆಲ್ಲ ಬೆಂಗಳೂರಿಗೇ ಹರಿಸಿ ಮುಗಿದ ಮೇಲೆ ಮತ್ತೆಲ್ಲಿಂದ ನೀರು ತರುತ್ತೀರಿ? ಇಂತಹ ಅವಿವೇಕದ ಚಿಂತನೆಗಳನ್ನು ಬದಿಗಿಟ್ಟು ಯೋಚಿಸಿದರೆ ಪರಿಹಾರ ಕಾಣಲು ಸಾಧ್ಯ. ಇಲ್ಲದಿದ್ದರೆ ಪ್ರಭುಗಳೇ, ಬಿಬಿಸಿ ಹೇಳಿದಂತೆ ಬೆಂಗಳೂರು ಭಾರತದ ಕೇಪ್ಟೌನ್ ಆಗಲಿದೆ.

ನಿಮಗೆ ಗೊತ್ತೇ, ಬಿಬಿಸಿಯ ಇಮ್ರಾನ್ ಖುರೇಶಿ ನಡೆಸಿದ ಅಧ್ಯಯನದ ಪ್ರಕಾರ ಬೆಂಗಳೂರು ದಕ್ಷಿಣ ಆಫ್ರಿಕದ ಕೇಪ್ ಟೌನ್ ನಗರದಂತೆ ವಿಶ್ವದಲ್ಲಿ ನೀರಿಲ್ಲದ ನಗರವೆಂಬ ಕುಖ್ಯಾತಿ ಗಳಿಸುವ ಕಾಲ ದೂರವಿಲ್ಲ. ಅದನ್ನು ತಪ್ಪಿಸಬೇಕೆಂದರೆ ದಯವಿಟ್ಟು ಈಗಲೇ ಬೆಂಗಳೂರಿನ ಬೆಳವಣಿಗೆಗೆ ತಡೆಯೊಡ್ಡಿ. ಬೆಂಗಳೂರು ಭಾರತದ ಕೇಪ್‌ಟೌನ್ ಎಂಬ ಕುಖ್ಯಾತಿ ತಪ್ಪಿಸಿ ಬೆಂಗಳೂರನ್ನು ಬದುಕಿಸಿ.

ತಡೆಯೊಡ್ಡಿ ಬೆಂಗಳೂರಿನ ಅನಿಯಂತ್ರಿತ ಬೆಳವಣಿಗೆಗೆ:

ಸಾಂಸ್ಕೃತಿಕವಾಗಿ ನಗರಗಳು ಬೆಳೆಯುತ್ತಿದ್ದುದೇ ಜಲಮೂಲಗಳ ಸಮೀಪ.ಆದರೆ ಬೆಂಗಳೂರಿನ ದೌರ್ಭಾಗ್ಯ. ಹತ್ತಿರದಲ್ಲಿ ಬೃಹತ್ ನದಿಗಳೂ ಇಲ್ಲ. ಇರುವ ಸಣ್ಣ ಪುಟ್ಟ ನದಿಗಳನ್ನೂ ಕೊಂದಿದ್ದೇವೆ. ಅಂತರ್ಜಲವನ್ನೂ ಕುಡಿದು ಖಾಲಿ ಮಾಡಿದ್ದೇವೆ. ಬಿದ್ದ ಮಳೆ ನೀರು ಇಂಗದಂತೆ ನಗರವನ್ನು ಕಾಂಕ್ರೀಟ್ ಕಾಡಾಗಿಸಿದ್ದೇವೆ. ಈಗ ಇದಕ್ಕಿರುವ ಏಕೈಕ ಪರಿಹಾರವೆಂದರೆ ನಗರದ ಬೆಳವಣಿಗೆಗೆ ತಡೆಯೊಡ್ಡುವುದು.

ತಕ್ಷಣದಲ್ಲೇ ನಗರದ ಕೈಗಾರಿಕೆಗಳನ್ನು ರಾಜ್ಯದ ಇತರ ನಗರ ಪಟ್ಟಣಗಳಿಗೆ ಸ್ಥಳಾಂತರಿಸುವುದು. ವಾಣಿಜ್ಯೋದ್ಯಮಿಗಳನ್ನು ಕರೆದು ಅವರನ್ನು ಶಿವಮೊಗ್ಗ, ಸಾಗರ, ಶಿರಸಿ, ಕಾರವಾರ, ಉಡುಪಿ ಮಂಗಳೂರುಗಳಿಗೆ ತೆರಳಲು ಪ್ರೋತ್ಸಾಹಿಸುವುದು. ಅಲ್ಲಿ ಉದ್ಯಮ ಸ್ಥಾಪಿಸಿದರೆ ಸಹಾಯ ಧನ, ತೆರಿಗೆ ಕಡಿತ ಮುಂತಾದ ಉತ್ತೇಜನ ನೀಡುವ ಭರವಸೆ ನೀಡಬೇಕು. ಐಟಿ, ಬಿಟಿ, ಕೈಗಾರಿಕೆಗಳಿಗೆ ಮಲೆನಾಡು ಸೂಕ್ತ. ಜವಳಿ ಉದ್ಯಮಗಳಿಗೆ ದಾವಣಗೆರೆ ದಾರವಾಡ ಹುಬ್ಬಳ್ಳಿ ಸೂಕ್ತ.

ದೂರದೂರದಿಂದ ನೀರನ್ನು ತರುವ ಬದಲು ಈ ನಗರವನ್ನೇ ತುಂಡು ತುಂಡು ಮಾಡಿ ಹಲವ ಪಟ್ಟಣಗಳತ್ತ ಕಳಿಸಿದರೆ ಬೆಂಗಳೂರು ನಗರವೂ ಬದುಕುತ್ತದೆ. ಈ ಉದ್ಯಮಗಳಿಂದ ಮೂಲಭೂತ ಸೌಕರ್ಯ ಹೆಚ್ಚಿ ಆ ಪಟ್ಟಣಗಳೂ ಪ್ರಗತಿ ಕಾಣುತ್ತವೆ. ಅಲ್ಲಿಂದ ಯುವ ಜನ ಬೆಂಗಳೂರಿಗೆ ಧಾವಿಸುವುದೂ ತಪ್ಪುತ್ತದೆ. ಜೊತೆಗೆ ಬೆಂಗಳೂರಿನ ಸುತ್ತ ಹೊಸ ನಿವೇಶನ ಮಾಡುವುದನ್ನು, ಹೊಸ ಹೊಸ ವಸತಿ ಸಮುಚ್ಛಯಕ್ಕಾಗಿ ಬೃಹತ್ ಬಹು ಮಹಡಿ ಕಟ್ಟಡ ನಿರ್ಮಿಸುವುದಕ್ಕೆ ತಡೆಹಾಕಿ.

ಇದರಿಂದ ಅತಿ ಸಾಂಧ್ರತೆಯಿಂದ ಬಳಲುವ ಬೆಂಗಳೂರಿನ ಟ್ರಾಫಿಕ್ ಜಾಮ್, ಕಸ ಎತ್ತುವ ಸಮಸ್ಯೆ, ನೀರಿನ ಕೊರತೆ ಮುಂತಾದ ಹಲವು ಸಮಸ್ಯೆಗಳಿಗೆ ಪರಿಹಾರ ಸುಲಭವಾಗುತ್ತದೆ. ಇದರಿಂದ ಶರಾವತಿ, ಅಘನಾಶಿನಿಗಳಷ್ಟೇ ಉಳಿಯುವುದಲ್ಲದೇ ವೃದ್ಧಾಶ್ರಮಗಳಾಗುತ್ತಿರುವ ಗ್ರಾಮಗಳ ಯುವಕರು ತಮ್ಮ ಸಮೀಪದ ನಗರ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತ ’ಗ್ರಾಮ ವಾಸ್ತವ್ಯ ಕಾರ್ಯಸಾಧುವಾಗುತ್ತದೆ. ನಿಜ ತುಸು ಆರ್ಥಿಕ ಏರುಪೇರು ಸಂಭವಿಸಬಹುದು.

ಆದರೆ ದೂರದೃಷ್ಟಿಯಿಂದ ಗಮನಿಸಿದರೆ ಅದು ಕೇವಲ ತಾತ್ಕಾಲಿಕ. ಇದಕ್ಕೆ ಮಹಾರಾಷ್ಟ್ರ ಉತ್ತಮ ಉದಾಹರಣೆ.ಅದು ಮುಂಬಯಿಯ ಜೊತೆಗೇ ಪೂನಾ, ನಾಗ್ಪುರ, ನಾಸಿಕ್, ಔರಂಗಾಬಾದ, ಸೊಲ್ಲಾಪುರ...ಹೀಗೆ ಹಲವು ನಗರಗಳನ್ನು ಅಭಿವೃದ್ಧಿಗೊಳಪಡಿಸಿದೆ. ಈ ದಿಶೆಯಲ್ಲಿ ವಿಸ್ತೀರ್ಣದಲ್ಲಿ ನಮ್ಮ ರಾಜ್ಯಕ್ಕಿಂತ ಕಡಿಮೆ ಇರುವ ಇಂಗ್ಲೆಂಡ್ ಕೂಡ ನಮಗೊಂದು ಉತ್ತಮ ಮಾದರಿ. 

Follow Us:
Download App:
  • android
  • ios