Asianet Suvarna News Asianet Suvarna News

ದೇಶದಲ್ಲಿ ನೀರನ್ನು ಪೋಲು ಮಾಡುತ್ತಿರುವವರೇ ಶ್ರೀಮಂತರು!

ದೇಶದಲ್ಲಿ ನೀರಿನ ಹಾಹಾಕಾರ | ದಿನಕ್ಕೆ 2500 ಜನರು ಶುದ್ಧ ಕುಡಿಯುವ ನೀರು ಸಿಗದೆ ಸಾವಿಗೀಡಾಗುತ್ತಿದ್ದಾರೆ | 

Water emergency in India well known writer P Sainath tells about Water crisis
Author
Bengaluru, First Published Jun 14, 2019, 4:35 PM IST

ದೇಶದೆಲ್ಲೆಡೆ ನೀರಿಗಾಗಿ ತೀವ್ರ ಹಾಹಾಕಾರ ಆರಂಭವಾಗಿದೆ. ಕುಡಿಯುವ ನೀರೂ ಇಲ್ಲದೆ ಜನರು ವ್ಯಥೆಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಿನ ಬರಕ್ಕೆ ಕಾರಣ ಏನು, ಇದಕ್ಕೆ ಪರಿಹಾರ ಏನು ಎಂದು ಹಿರಿಯ ಪತ್ರಕರ್ತ, ಕೃಷಿ ತಜ್ಞ ಸಾಯಿನಾಥ್‌ ಇಂಡಿಯಾ ಟುಡೇಯೊಂದಿಗೆ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ದೇಶದಲ್ಲಿ 60 ಕೋಟಿ ಜನರು ತೀವ್ರ ಬರ ಎದುರಿಸುತ್ತಿದ್ದಾರೆ. ದಿನಕ್ಕೆ 2500 ಜನರು ಶುದ್ಧ ಕುಡಿಯುವ ನೀರು ಸಿಗದೆ ಸಾವಿಗೀಡಾಗುತ್ತಿದ್ದಾರೆ. ಮುಂದಿನ ವರ್ಷದಲ್ಲಿ 21 ಪ್ರಮುಖ ನಗರಗಳಲ್ಲಿ ತೀವ್ರ ನೀರಿನ ಹಾಹಾಕಾರ ಉಂಟಾಗಲಿದೆ ಎಂದು ನೀತಿ ಆಯೋಗ ಹೇಳಿದೆ. ಇದು ಎಷ್ಟುಗಂಭೀರ ಸ್ಥಿತಿ?

ಈ ಸಂಖ್ಯೆಗಳು ನಿಜಕ್ಕೂ ಆತಂಕಕಾರಿ. ಸಮಸ್ಯೆಗಳನ್ನು ಲೆಕ್ಕಹಾಕುವುದು ಸರಿಯೇ. ಆದರೆ, ಈ ಸಮಸ್ಯೆಗೆ ಮೂಲ ಕಾರಣ ಏನು ಎಂದು ತಿಳಿದುಕೊಳ್ಳುವುದು ಮುಖ್ಯ. ಈ ಮಟ್ಟಿನ ನೀರಿನ ಕೊರತೆಗೆ ಮನುಷ್ಯನೇ ಕಾರಣ. ಆದರೆ ಮೇ ಮತ್ತು ಜೂನ್‌ ಆರಂಭದಲ್ಲಿ ಮಾಧ್ಯಮಗಳು ಬರದ ಬಗ್ಗೆ ಎಚ್ಚರಗೊಳ್ಳುತ್ತವೆ.

ಕಾರಣ ಈ ಸಮಯದಲ್ಲಿ ತಾಪಮಾನ ತೀವ್ರವಾಗಿರುತ್ತದೆ. ಸದ್ಯ ಭಾರತದಲ್ಲಿ ನೀರಿಗೆ ತೀವ್ರ ಬರ ಬಂದಿದೆ. ಇದು ಸಾಮಾನ್ಯ ಬರಕ್ಕಿಂತ ಗಂಭೀರವಾದುದು. ಈ ಬರಗಾಲ ನೀರಿನ ಕೊರತೆಯ ಒಂದು ಭಾಗ ಅಷ್ಟೆ. ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ ಈ ಬರ 2018ರ ಅಕ್ಟೋಬರ್‌ನಲ್ಲಿಯೇ ಆರಂಭವಾಗಿದೆ.

ಅಕ್ಟೋಬರ್‌ 1ರಿಂದ ಡಿಸೆಂಬರ್‌ 31 ವರೆಗೆ ಉತ್ತರ ಕರ್ನಾಟಕದಲ್ಲಿ 85%, ಮರಾಠವಾಡಾದಲ್ಲಿ 84%, ವಿದರ್ಭದಲ್ಲಿ 88% ಹಿಂಗಾರು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದು ಮಳೆಯ ಕೊರತೆ ಎಷ್ಟಿದೆ ಎಂಬುದರ ಸೂಚಕ. ರಾಜಕೀಯಕ್ಕಾಗಿ ಸಾಮಾನ್ಯ ಮಾನ್ಸೂನ್‌ ಎಂದು ವರ್ಗೀಕರಿಸಲಾಗುತ್ತದೆ. ಆದರೆ ಅಂಥದ್ದೊಂದು ವಿಂಗಡಣೆಯೇ ಇಲ್ಲ. ಒಂದೋ ಹೆಚ್ಚುವರಿ ಮಾನ್ಸೂನ್‌ ಅಥವಾ ಕೊರತೆಯ ಮಾನ್ಸೂನ್‌ ಎಂಬ ಎರಡೇ ವಿಂಗಡಣೆಗಳಿವೆ. ಸಾಮಾನ್ಯ ಮಾನ್ಸೂನ್‌ ಚುನಾವಣಾ ವರ್ಷದಲ್ಲಿ ಸೃಷ್ಟಿಯಾಗುತ್ತದೆ! ಅದು ರಾಷ್ಟ್ರೀಯ ಸರಾಸರಿ. ಪ್ರಾದೇಶಿಕವಾಗಿ ಮಳೆಯ ಕೊರತೆ ಅದಕ್ಕೂ ಹೆಚ್ಚಿರುತ್ತದೆ. ಇದು ಅಪಾಯಕಾರಿ.

ಬರಗಾಲ ಮತ್ತು ನೀರಿನ ಹಾಹಾಕಾರ ಬೇರೆ ಬೇರೆಯೇ? ಮಳೆಯ ಕೊರತೆಯಿಂದ ಬರಗಾಲ ಉಂಟಾಗುತ್ತದೆ, ಆದರೆ ನೀರಿನ ಹಾಹಾಕಾರ ಮನುಷ್ಯನಿಂದಲೇ ಸೃಷ್ಟಿಯಾಗುತ್ತದೆ ಎನ್ನುತ್ತೀರಿ. ಇದು ಹೇಗೆ?

ನೀರಿನ ಹಾಹಾಕಾರ ಉಂಟಾಗಲು ಮನುಷ್ಯನೇ ಕಾರಣ. ಹಾಗಂತ ಬರಗಾಲದ ಪ್ರಾಮುಖ್ಯತೆ ಅಥವಾ ಅದರ ತೀವ್ರತೆಯನ್ನು ನಾನು ಕಡೆಗಣಿಸುತ್ತಿಲ್ಲ. ಕೇಂದ್ರ ಸರ್ಕಾರದ 2016ರ ರಿವೈಸ್ಡ್‌ ಡ್ರಾಟ್‌ ಮ್ಯಾನ್ಯುವಲ್‌ ನೋಡಿದರೆ, ಅದರಲ್ಲಿ ಬರವನ್ನು ನಿರ್ಧರಿಸುವ ಹಾಗೂ ಘೋಷಿಸುವ ರಾಜ್ಯ ಸರ್ಕಾರಗಳ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ಈಗ ಲಭ್ಯವಿರುವ ಅಂಶಗಳು ವಾಸ್ತವಕ್ಕೆ ಬಹುದೂರವಾಗಿವೆ. ಬರಪೀಡಿತ ತಾಲೂಕುಗಳು ಎಂದು ಘೋಷಿಸುವುದು ಈಗ ಕಷ್ಟ. ಆದಾಗ್ಯೂ ಮಹಾರಾಷ್ಟ್ರ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಇದೂ ಒಂದು ಗಂಭೀರ ಸಮಸ್ಯೆಯೇ. ಇನ್ನು, ನೀರು ಬಡವರಿಂದ ಶ್ರೀಮಂತರಿಗೆ ಹಾಗೂ ಕೆಳವರ್ಗದಿಂದ ಮೇಲ್ವರ್ಗಕ್ಕೆ ವರ್ಗಾವಣೆಯಾಗುತ್ತಿರುವುದು ಇನ್ನೊಂದು ಸಮಸ್ಯೆ.

ಹಾಗೆಂದರೇನು?

ಅಂದರೆ ನೀರು ಅಸಮಾನವಾಗಿ ಹಂಚಿಕೆಯಾಗುತ್ತಿದೆ. ಉದಾಹರಣೆಗೆ, ಕೃಷಿ ಭೂಮಿಯಿಂದ ಕೈಗಾರಿಕೆವರೆಗಿನ ನೀರಿನ ಹಂಚಿಕೆ. ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟೆರಲೈಟ್‌ ಘಟಕ ಒಂದು ಸಾವಿರ ಲೀಟರ್‌ ನೀರನ್ನು ಕೇವಲ 10 ರು.ಗೆ ಕೊಂಡುಕೊಳ್ಳುತ್ತದೆ.

ಅದೇ ಕಂಪನಿಯ ಸುತ್ತಮುತ್ತ ಇರುವ ಮಹಿಳೆಯರು 25 ಲೀಟರ್‌ ಕ್ಯಾನ್‌ ನೀರಿಗೆ 10 ರು. ನೀಡಿ ಕೊಂಡುಕೊಳ್ಳುತ್ತಾರೆ. ಇನ್ನೊಂದು ಉದಾಹರಣೆ, ಶರದ್‌ ಪವಾರ್‌ ಅವರ ಕ್ಷೇತ್ರ ಮಾವಲ್‌ನಲ್ಲಿ 2007ರಲ್ಲಿ 5-6 ರೈತರು ಕೃಷಿ ಭೂಮಿಯಿಂದ ಕೈಗಾರಿಕಾ ಘಟಕಗಳಿಗೆ ನೀರು ಕೊಡುವುದನ್ನು ವಿರೋಧಿಸಿ ಪ್ರತಿಭಟಿಸಿದ್ದಕ್ಕೆ ಗುಂಡಿಟ್ಟು ಕೊಲ್ಲಲಾಯ್ತು. ಹೀಗೆ ಕೃಷಿ ಭೂಮಿಗೆ ಬಳಕೆಯಾಗಬೇಕಾದ ನೀರು ಕೈಗಾರಿಕೆಗೆ ಹೋಗಿ ಮಲಿನಗೊಂಡು ನದಿ ಸೇರುತ್ತಿದೆ. ಇದೇ ಅಸಮಾನ ಹಂಚಿಕೆ.

ನೀರಿನ ಹಾಹಾಕಾರಕ್ಕೆ ಕಾರಣವಾಗುವ ಎರಡನೇ ಅಂಶ ಯಾವುದು?

ಕೃಷಿ ಕ್ಷೇತ್ರದಲ್ಲಿ, ಆಹಾರ ನೀಡುವ ಫಸಲಿನಿಂದ ಹಣ ನೀಡುವ ಫಸಲಿಗೆ ನೀರು ಸರಬರಾಜಾಗುತ್ತಿದೆ. ಮಹಾರಾಷ್ಟ್ರದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಕಬ್ಬು ಬೆಳೆಯಲು ಒಂದು ಎಕರೆಗೆ 1.8 ಕೋಟಿಯಿಂದ 2 ಕೋಟಿ ಲೀಟರ್‌ ನೀರು ಬೇಕು. ಆ ಭೂಮಿಯಲ್ಲಿ ಕಬ್ಬಿನ ಬದಲು ಜೋಳ ಬೆಳೆಯಬಹುದು.

ಅತಿಯಾಗಿ ನೀರು ಲಭ್ಯವಿರುವ ಪ್ರದೇಶದಲ್ಲಿ ಕಬ್ಬು ಬೆಳೆಯಲಿ. ಆದರೆ, ನೀರು ಮಿತವಾಗಿರುವ ಪ್ರದೇಶದಲ್ಲಿ ಕಾಫಿ ಅಥವಾ ಕಾಳುಮೆಣಸು ಬೆಳೆಯುವುದು ಉತ್ತಮ. ಇದು ರೈತರ ಆಯ್ಕೆಗೆ ಬಿಟ್ಟಿದ್ದು. ಆದರೆ ಮಹಾರಾಷ್ಟ್ರದ 68% ನೀರಾವರಿ ಯೋಜನೆಯ ನೀರನ್ನು ಕೇವಲ 4% ರೈತರು ಬಳಸಿಕೊಳ್ಳುತ್ತಿದ್ದಾರೆ. ಉಳಿದ ರೈತರ ಬಗ್ಗೆಯೂ ಅಲ್ಲಿನ ಮುಖ್ಯಮಂತ್ರಿಗಳು ಯೋಚಿಸಬೇಕಲ್ಲವೇ?

ದೆಹಲಿ, ಹೈದರಾಬಾದ್‌, ಮುಂಬೈ ಮುಂತಾದ ನಗರಗಳಲ್ಲೂ ಜಲ ಹಾಹಾಕಾರ ಆರಂಭವಾಗಿದೆ. ಗ್ರಾಮೀಣ-ನಗರ ಪ್ರದೇಶವೆನ್ನದೆ ಎಲ್ಲಡೆ ಶಾಶ್ವತ ನೀರಿನ ಸಮಸ್ಯೆ ಕಾಡುವ ಲಕ್ಷಣ ಕಾಣುತ್ತಿದೆಯಲ್ಲವೇ?

ನೀರಿನ ಸಮಸ್ಯೆಗೆ ಮೂರನೇ ಕಾರಣ- ಗ್ರಾಮೀಣ ಪ್ರದೇಶದಿಂದ ನೀರು ನಗರಕ್ಕೆ ವರ್ಗಾವಣೆಯಾಗುತ್ತಿರುವುದು. ಮಹಾರಾಷ್ಟ್ರದ ಉದಾಹರಣೆಯನ್ನೇ ಗಮನಿಸಿ. ಅಲ್ಲಿನ ನಗರಗಳಲ್ಲಿ ಗ್ರಾಮೀಣ ಪ್ರದೇಶಕ್ಕಿಂತ 400% ಹೆಚ್ಚು ಕುಡಿಯುವ ನೀರು ಬಳಕೆಯಾಗುತ್ತಿದೆ.

ಹಳ್ಳಿಗಳಲ್ಲಿ ತಲಾ ಬಳಕೆ 60ರಿಂದ 70 ಲೀಟರ್‌ ಇದ್ದರೆ, ನಗರಗಳಲ್ಲಿ 500-600 ಲೀಟರ್‌ ಇದೆ. ಮಾಧ್ಯಮಗಳಲ್ಲಿ ಒಂದಷ್ಟುಜನ ಮಹಿಳೆಯರು ಸಾಲುಗಟ್ಟಿನೀರಿಗಾಗಿ ಕಾಯುವ ಚಿತ್ರಗಳು ಮಾತ್ರ ಪ್ರಕಟವಾಗುತ್ತವೆ. ಅವರು ಒಂದು ಲೀಟರ್‌ ನೀರಿಗೆ ಎಷ್ಟುಹಣ ಪಾವತಿಸುತ್ತಾರೆ ಗೊತ್ತಾ? ಮೊದಮೊದಲು ಲೀಟರ್‌ ನೀರಿಗೆ 45 ಪೈಸೆ ನೀಡಿದರೆ, ತೀವ್ರ ಹಾಹಾಕಾರ ಇದ್ದಾಗ 1 ರು. ನೀಡುತ್ತಿರುತ್ತಾರೆ. ಅದಕ್ಕಿಂತ ಹೆಚ್ಚಾಗಿ 4 ಗಂಟೆ ಕಾದು ತಮ್ಮ ಅಮೂಲ್ಯವಾದ ಸಮಯ ಕಳೆದುಕೊಂಡಿರುತ್ತಾರೆ.

ಅದೇ ಸಮಯಕ್ಕೆ ಮಹಾರಾಷ್ಟ್ರದ 24 ಬಿಯರ್‌ ಮತ್ತು ಆಲ್ಕೋಹಾಲ್‌ ಫ್ಯಾಕ್ಟರಿಗಳು ಕೇವಲ ಲೀಟರ್‌ಗೆ 4 ಪೈಸೆಯಂತೆ ನಿತ್ಯ 500 ದಶಲಕ್ಷ ಲೀಟರ್‌ ನೀರು ಕೊಂಡುಕೊಳ್ಳುವೆ. ಹೀಗೆ ಬಡವರಿಂದ ಶ್ರೀಮಂತರಿಗೆ ನೀರು ವರ್ಗಾವಣೆಯಾಗುತ್ತಿದೆ.

ಮುಂಬೈ, ಪುಣೆಗಳ ದೊಡ್ಡ ದೊಡ್ಡ ಕಾಂಪ್ಲೆಕ್ಸ್‌ಗಳಲ್ಲಿ ಪ್ರತಿ ಫೆä್ಲೕರ್‌ಗಳಲ್ಲಿ ಸ್ವಿಮ್ಮಿಂಗ್‌ ಪೂಲ್‌ಗಳಿರುತ್ತವೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಹಳ್ಳಿಗಳಲ್ಲಿ ನೀರು ದೊರಕದೆ ನಗರಕ್ಕೆ ವಲಸೆ ಬಂದಿರುತ್ತಾರೆ. ಭಾರತದಲ್ಲಿ ನೀರು ಬಡವರಿಂದ ಶ್ರೀಮಂತರೆಡೆಗೆ ಹರಿಯುತ್ತಿದೆ. ಜೀವನಾಧಾರವಾಗಬೇಕಿದ್ದ ನೀರು, ಜೀವನ ಶೈಲಿಯಾಗಿ ಪರಿವರ್ತನೆಯಾಗಿ ಮೇಲ್ಮುಖವಾಗಿ ಹರಿಯುತ್ತಿದೆ.

ಇದಕ್ಕೆ ಪರಿಹಾರ ಇದೆಯೇ?

ನೀರು ಮಾರುವ, ಲಾಭತರುವ ವಸ್ತುವೇ ಅಥವಾ ಮನುಷ್ಯರು ಮತ್ತು ಅಸ್ತಿತ್ವದಲ್ಲಿರುವ ಲಕ್ಷಾಂತರ ಜೀವಿಗಳ ಮೂಲಭೂತ ಹಕ್ಕೇ ಎಂಬುದನ್ನು ಮೊದಲು ನಿರ್ಧರಿಸಬೇಕು. ನೀರು ಕೇವಲ ಮನುಷ್ಯನ ಅಗತ್ಯ ಮಾತ್ರವಲ್ಲ. ಪ್ರತಿ ಜೀವಸಂಕುಲದ ಮೂಲಭೂತ ಹಕ್ಕು. ಮೂಲಭೂತವಾಗಿ ಅಗತ್ಯವಿರುವ ನೀರು ಪ್ರತಿಯೊಬ್ಬರಿಗೂ ದೊರಕುವ ವ್ಯವಸ್ಥೆ ಕಲ್ಪಿಸಬೇಕು. ಅದೇ ಈ ಸಮಸ್ಯೆಗೆ ಪರಿಹಾರ.

ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಮೂಲಭೂತವಾಗಿ ಅಗತ್ಯವಿರುವಷ್ಟುನೀರು ಹಂಚಿಕೆಯಾಗುವುದೇ ಈ ಸಮಸ್ಯೆಗೆ ಪರಿಹಾರವೇ?

ಹೌದು, ಇದರಿಂದ ಬೋರ್‌ವೆಲ್‌ ಮತ್ತು ಟ್ಯಾಂಕರ್‌ ಮಾಫಿಯಾಗೆ ಪೆಟ್ಟು ಬೀಳುತ್ತದೆ. ಸಾಕಷ್ಟುದೇಶಗಳಲ್ಲಿ ಈ ವ್ಯವಸ್ಥೆ ಇದೆ. ಬಾಂಬೆ ಲೋಕಸಭಾ ಕ್ಷೇತ್ರದಷ್ಟಿರುವ ಉರುಗ್ವೆಯಲ್ಲಿ 2003ರಲ್ಲಿ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. 70% ಜನರು ನೀರು ಮನುಷ್ಯನ ಹಕ್ಕು, ಅದು ಖಾಸಗಿ ಮಾಲಿಕತ್ವವಾಗಬಾರದು ಎಂದು ವೋಟ್‌ ಮಾಡಿದ್ದರು.

- ಪಿ ಸಾಯಿನಾಥ್, ಹಿರಿಯ ಪತ್ರಕರ್ತ, ಕೃಷಿ ತಜ್ಞ

Follow Us:
Download App:
  • android
  • ios