ಸೋತು ಗೆದ್ದ ಅನರ್ಹರು, ರಚಿತಾ ಮನೆಯಲ್ಲಿ ಮದ್ವೆ ತಯಾರಿ ಶುರು; ನ.13ರ ಟಾಪ್ 10 ಸುದ್ದಿ!
17 ಶಾಸಕರನ್ನು ಅನರ್ಹ ಮಾಡಿದ್ದು ಸರಿ ಎಂದು ಸ್ಪೀಕರ್ ಅದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಶಾಸಕರಿಗೆ ಚುನಾವಣೆಗೆ ಸ್ಫರ್ಧಿಸಲು ಅವಕಾಶ ನೀಡಿದೆ. ಈ ಮೂಲಕ ಸಿಹಿ ಕಹಿ ಎರಡನ್ನೂ ನೀಡಿದೆ. ಅನರ್ಹರ ತೀರ್ಪಿನ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ತೀರ್ಪು ನೀಡಲು ರೆಡಿಯಾಗಿದೆ. ಇತ್ತ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮನೆಯಲ್ಲಿ ಮದುವೆ ತಯಾರಿಗಳು ನಡೆಯುತ್ತಿದೆ. ಉಪಸಮರದ ಕಾವು, ಮೋದಿಗೆ ಸಂಕಟ ತಂದ ವರದಿ ಸೇರಿದಂತೆ ನವೆಂಬರ್ 13ರ ಟಾಪ್ 10 ಸುದ್ದಿ ಇಲ್ಲಿವೆ.
1) ಸೋತರೂ ಗೆದ್ದ ಅನರ್ಹ ಶಾಸಕರು: ಚುನಾವಣೆಗೆ ಸ್ಪರ್ಧೆಗೆ ಅಸ್ತು ಎಂದ ಸುಪ್ರೀಂ
ರಾಜ್ಯ 17 ಅನರ್ಹ ಶಾಸಕರ ತೀರ್ಪು ಕೊನೆಗೂ ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ. ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಇದೇ ವೇಳೆ ರಿಲೀಫ್ ಕೂಡ ನೀಡಿದೆ. ರಾಜ್ಯದಲ್ಲಿ ಶೀಘ್ರ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಹೇಳಿದೆ.
2) ನಾಳೆ ಶಬರಿಮಲೆ ಸುಪ್ರೀಂ ಆದೇಶ: ಕೇರಳದಲ್ಲಿ ಮತ್ತೆ ಅದೇ ಆವೇಶ!
ಅಯೋಧ್ಯೆ ತೀರ್ಪಿನ ಬಳಿಕ ಇಡೀ ದೇಶ ನಿರಾಳವಾಗಿದೆ. ಆದರೆ ದೇಶದ ದಕ್ಷಿಣ ಭಾಗದಲ್ಲಿ ಮಾತ್ರ ಅಯ್ಯಪ್ಪ ಕುದಿ ಹೆಚ್ಚಾಗತೊಡಗಿದೆ. ಸುಪ್ರೀಂಕೋರ್ಟ್ ನಾಳೆ(ನ.14) ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಾದ ಮರುಪರಿಶೀಲನಾ ಅರ್ಜಿಯ ತೀರ್ಪು ಪ್ರಕಟಿಸಲಿದ್ದು, ತೀವ್ರ ಪ್ರತಿಭಟನೆ ಕಂಡಿದ್ದ ಕೇರಳದಲ್ಲಿ ಮತ್ತೆ ಕಟ್ಟೆಚ್ಚರದ ವಾತಾವರಣ .
3) 2018-19 ರಲ್ಲಿ ಬಿಜೆಪಿಗೆ 700 ಕೋಟಿ ದೇಣಿಗೆ; ಅರ್ಧದಷ್ಟು ನೀಡಿದ್ದು ಟಾಟಾ ಟ್ರಸ್ಟ್
ಟಾಟಾ ಸಮೂಹದ ನಿಯಂತ್ರಣದಲ್ಲಿರುವ ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಬಿಜೆಪಿ 356 ಕೋಟಿ ರು. ದೇಣಿಗೆಯನ್ನು ಸ್ವೀಕರಿಸಿದೆ. ಭಾರತದ ಶ್ರೀಮಂತ ಟ್ರಸ್ಟ್ ಆಗಿರುವ ‘ದ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್’ ಬಿಜೆಪಿಗೆ ದೇಣಿಗೆ ರೂಪದಲ್ಲಿ 54.25 ಕೋಟಿ ರು. ನೀಡಿದೆ.
4) ಗ್ಯಾಸ್ ಮೇಲೆ ಹಾಲಿಟ್ಟು ಮಲಗಿದ ದಂಪತಿ, ನಿದ್ರಾಸ್ಥಿತಿಯಲ್ಲೇ ಸಾವು..!.
ಕಾಫಿ ಮಾಡೋಕೆ ಅಂತ ಹಾಲು ಗ್ಯಾಸ್ ಮೇಲಿಟ್ಟು ನಿದ್ರೆಗೆ ಜಾರಿದ ಪರಿಣಾಮ ದಂಪತಿಗಳು ನಿದ್ರಾವಸ್ಥೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಹಾಲು ಉಕ್ಕಿ ಸ್ಟೌವ್ ಮೇಲೆ ಸುರಿದು ಬೆಂಕಿ ನಂದಿ ಹೋಗಿದೆ. ಆದರೆ ಅನಿಲ ಸೋರಿಕೆಯಾಗಿದೆ.
5) ರಂಗೇರಿದ ಉಪಸಮರ: ಅಪ್ಪನ ಶತ್ರುತ್ವ ಮರೆತು ಮಗನಿಗೆ ಬೆಂಬಲ ಘೋಷಿಸಿದ JDS
ದಿನದಿಂದ ದಿನಕ್ಕೆ ರಂಗೇರುತ್ತಿರುವ ಹೊಸಕೋಟೆ ಅಖಾಡಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಗ್ ಟ್ವಿಸ್ಟ್ ಕೊಟ್ಟಿದ್ದು, ಅಪ್ಪನ ಶತ್ರುತ್ವ ಮರೆತು ಮಗನಿಗೆ ಬೆಂಬಲ ಘೋಷಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
6) ತಾಯಿಯ ನಿಧನರಾದರೂ ತಾಯ್ನಾಡಿಗೆ ತೆರಳದೆ ಪಂದ್ಯ ಆಡಿದ ಪಾಕ್ ಕ್ರಿಕೆಟಿಗ!
ತಾಯಿ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ಬಂದಾಗ ಮೈದಾನದಲ್ಲೇ ಅತ್ತ ಪಾಕಿಸ್ತಾನ ಕ್ರಿಕೆಟಿಗ ತಾಯ್ನಾಡಿಗೆ ಮರಳದೇ ಕ್ರಿಕೆಟ್ ಮುಂದುವರಿಸಿದ್ದಾರೆ. ತಾಯಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಲ್ಳದೇ ಕ್ರಿಕೆಟ್ ಆಡಿದ ನಸೀಮ್ ಶಾಗೆ ಎಲ್ಲರೂ ಧರ್ಯ ಹೇಳಿದ್ದಾರೆ.
7) ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ; ವಿದೇಶಿ ಹುಡುಗನ ಜೊತೆ ಡೇಟ್ ಫಿಕ್ಸ್!
ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ ಎಂದು ಗಾಂಧಿ ನಗರದಲ್ಲಿ ಕೇಳಿ ಬರುತ್ತದೆ. ಅರೇ! ಕೈ ತುಂಬಾ ಸಿನಿಮಾ ಹಾಗೂ ರಿಯಾಲಿಟಿ ಶೋ ಇಟ್ಟುಕೊಂಡು ರಚಿತಾ ರಾಮ್ ಮದುವೆ ಆಗ್ತಿದ್ದಾರಾ? ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ ಬಗ್ಗೆ ಇಲ್ಲಿದೆ ಕ್ಲಾರಿಟಿ
8) ನಾನು 3 ಮದುವೆಯಾದ್ರೆ ನಿಮ್ಗೇನು ಪ್ರಾಬ್ಲಂ? ಸಿಎಂ ಮೇಲೆ ಪವನ್ ಕಲ್ಯಾಣ್ ಗರಂ
ಸರ್ಕಾರಿ ಶಾಲೆಗಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳನ್ನಾಗಿ ಮಾಡಬೇಕು ಎಂದಿರುವ ಜಗನ್ಮೋಹನ್ ರೆಡ್ಡಿ ನಿರ್ಧಾರವನ್ನು ಪವನ್ ಕಲ್ಯಾಣ್ ಖಂಡಿಸಿದ್ದಾರೆ. ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ವೈಯಕ್ತಿಕ ವಿಚಾರವನ್ನು ಕೆದಕಿದ ರೆಡ್ಡಿ ಮೇಲೆ ಪವನ್ ಕಲ್ಯಾಣ್ ಗರಂ ಆಗಿದ್ದಾರೆ.
9) ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!
ಎಸ್‌ಬಿಐ ರಿಸರ್ಚ್ ವರದಿ ಜಿಡಿಪಿ ಕುಂಠಿತದ ಕುರಿತು ಎಚ್ಚರಿಕೆ ನೀಡಿದ್ದು, ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಈ ಮುನ್ನ ಯೋಜಿಸಿರುವಂತೆ ಶೇ.6.1ರ ಬೆಳವಣಿಗೆಗೆ ಬದಲಾಗಿ ಶೇ.5ರ ಬೆಳವಣಿಗೆ ದಾಖಲಾಗಲಿದೆ ಎಂದು ಹೇಳಲಾಗಿದೆ.
10) ಆಲ್ಟ್ರಾವಿಯೋಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರು ಕಂಪನಿ!
ಬೆಂಗಳೂರು ಮೂಲದ ಆಲ್ಟ್ರಾವಿಯೋಲೆಟ್ ಕಂಪನಿ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಬೈಕ್‌ಗಳ ಪೈಕಿ ಆಲ್ಟ್ರಾವಿಯೋಲೆಟ್ ಕಂಪನಿ F77 ಆಕರ್ಷಕ ಲುಕ್ ಹೊಂದಿದೆ.