ಪಾಕ್ ಉತ್ಪ್ರೇಕ್ಷೆಯ ದೂರು ಕಡೆಗಣಿಸಿ: ವಿಶ್ವಸಂಸ್ಥೆಗೆ ಭಾರತ ಮನವಿ!
‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದಿಂದ ಮಾನವ ಹಕ್ಕುಗಳ ಉಲ್ಲಂಘನೆ’| ‘ಪಾಕಿಸ್ತಾನದ ಆರೋಪ ಉತ್ಪ್ರೇಕ್ಷೆಯ ಮತ್ತು ಸುಳ್ಳಿನ ಸರಮಾಲೆ’| ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತದ ಸ್ಪಷ್ಟ ಸಂದೇಶ| ಪಾಕ್ ಉತ್ಪ್ರೇಕ್ಷೆಯ ಆರೋಪಗಳನ್ನು ಕಡೆಗಣಿಸುವಂತೆ ಮಾನವ ಹಕ್ಕು ಮಂಡಳಿಗೆ ಭಾರತ ಮನವಿ| ‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಭಾರತದ ಆಂತರಿಕ ವಿಚಾರ’|
ಜಿನೆವಾ(ಸೆ.10): ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ನೀಡಿರುವ ಉತ್ಪ್ರೇಕ್ಷೆಯ ಹಾಗೂ ಸುಳ್ಳಿನ ದೂರನ್ನು ಕಡೆಗಣಿಸುವಂತೆ ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಮನವಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ಬಳಿಕ, ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನ ಈ ಹಿಂದೆ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಪ್ರಶ್ನಿಸಿತ್ತು.
ಇಂದು ಜಿನೆವಾದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ದೂರನ್ನು ಸುಳ್ಳಿನ ಸರಮಾಲೆ ಎಂದು ಜರೆದಿರುವ ಭಾರತ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸರ್ಕಾರದ ಕಾರ್ಯದರ್ಶಿ ವಿಜಯ್ ಠಾಕೂರ್ ಸಿಂಗ್, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಆಂತರಿಕ ವಿಷಯ ಎಂದು ಸ್ಪಷ್ಟಪಡಿಸಿದರು.
ಭಾರತದ ವಿರುದ್ಧ ಪಾಕಿಸ್ತಾನ ಉತ್ಪ್ರೇಕ್ಷೆಯ ಮತ್ತು ದುರುದ್ದೇಶದ ಆರೋಪ ಮಾಡುತ್ತಿದ್ದು, ಪಾಕಿಸ್ತಾನದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಭಾರತ ಸ್ಪಷ್ಟಪಡಿಸಿದೆ.