ಅಯೋಧ್ಯೆ ವಿವಾದ: ವಿಚಾರಣೆಗೆ ಕೊನೆಗೂ ಡೆಡ್ ಲೈನ್ ಫಿಕ್ಸ್ ಮಾಡಿದ ಸುಪ್ರೀಂ!
ಅಯೋಧ್ಯೆ ವಿವಾದ, ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಡೆಡ್‌ಲೈನ್ ಫಿಕ್ಸ್| ವಿಚಾರಣೆ ಪೂರ್ಣಗೊಂಡರೆ ಡಿಸೆಂಬರ್‌ನೊಳಗೆ ತೀರ್ಪು| ಐತಿಹಾಸಿಕ ತೀರ್ಪಿಗೆ ದಿನಗಣನೆ
ನವದೆಹಲಿ[ಸೆ.18]: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ತರ ಆದೇಶವೊಂದನ್ನು ಹೊರಡಿಸಿದೆ. ಕಕ್ಷಿದಾರರು ತಮ್ಮೆಲ್ಲಾ ವಾದ-ಪ್ರತಿವಾದಗಳನ್ನು ಮಂಡಿಸಲು ಸುಪ್ರೀಂ ಕೋರ್ಟ್ ಸಿಜೆಐ ರಂಜನ್ ಗೊಗೋಯ್ ಅಂತಿಮ ಗಡುವು ವಿಧಿಸಿದ್ದಾರೆ. ಈ ಮೂಲಕ ಡಿಸೆಂಬರ್ ತಿಂಗಳಿನೊಳಗೆ ತೀರ್ಪು ಬರುವುದು ಬಹುತೇಕ ಖಚಿತವಾಗಿದೆ.
ಅಯೋಧ್ಯೆ ಪ್ರಕರಣ ಸಂಬಂಧ ಆಗಸ್ಟ್ 6 ರಿಂದ ಪ್ರತಿದಿನ ವಿಚಾರಣೆ ನಡೆಸುತ್ತಿದ್ದು, ಇದು 26ನೇ ದಿನ ತಲುಪಿದೆ. ಹೀಗಿರುವಾಗ ರಾಮಜನ್ಮ ಭೂಮಿ ಹಾಗು ಬಾಬ್ರಿ ಮಸೀದಿ ಭೂ ವಿವಾದದ ವಿಚಾರಣೆ ಅಕ್ಟೋಬರ್ 18ರೊಳಗೆ ಮುಕ್ತಾಯಗೊಳಿಸಲೇಬೇಕು. ಇದಕ್ಕಾಗಿ ಪ್ರತಿದಿನ ಒಂದು ಗಂಟೆ ಹೆಚ್ಚು ಸಮಯ ವಿಚಾರಣೆ ನಡೆಸಲು ಸಿದ್ಧ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮಧ್ಯಸ್ಥಿಕೆ ಮೂಲಕ ಅತ್ಯರ್ಥಪಡಿಸಕೊಳ್ಳಬಹುದು ಎಂದು ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.
ಸುಪ್ರೀಂ ಸಿಜೆಐ ಆದೇಶದನ್ವಯ ಅಕ್ಟೋಬರ್ 18ರೊಳಗೆ ಈ ವಿಚಾರಣೆ ಪೂರ್ಣಗೊಂಡಿದ್ದೇ ಆದಲ್ಲಿ 2019ರ ಡಿಸೆಂಬರ್ ತಿಂಗಳಿನೊಳಗೆ ತೀರ್ಪು ಸಿಗಲಿದೆ. ಅಲ್ಲದೇ ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಗಲಿದೆ.