ನವದೆಹಲಿ(ಸೆ.12): ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದೊಂದಿಗೆ ಕಣಿವೆಯ ಏಕೀಕರಣದಿಂದ ಕಾಶ್ಮೀರಿಗರ ಕಲ್ಯಾಣ ಸಾಧ್ಯ ದೇಶದ ಉನ್ನತ ಮುಸ್ಲಿಂ ಮಂಡಳಿ ಜಮೈತ್ ಉಲೆಮಾ-ಎ-ಹಿಂದ್ ಹೇಳಿದೆ. 

ಜಮೈತ್ ಉಲೆಮಾ-ಎ-ಹಿಂದ್ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ನಿರ್ಣಯ ಹೊರಡಿಸಲಾಗಿದ್ದು, ನೆರೆಯ ಪಾಕಿಸ್ತಾನದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

ನೆರೆ ದೇಶದ ದುಷ್ಟ ಶಕ್ತಿಗಳು ಇಲ್ಲಿನ ಜನರನ್ನು ಕತ್ತಿ, ಗುರಾಣಿಗಳಂತೆ ಬಳಸಿಕೊಂಡು ಕಾಶ್ಮೀರವನ್ನು ಹಾಳುಮಾಡುತ್ತಿವೆ ಎಂದು ಮಂಡಳಿ ಮುಖ್ಯಸ್ಥ ಮೌಲಾನಾ ಮೆಹಮೂದ್ ಮದನಿ ಹರಿಹಾಯ್ದಿದ್ದಾರೆ.

ಕಾಶ್ಮೀರ ಭಾರತಕ್ಕೆ ಸೇರಿದ್ದು. ಇಲ್ಲಿನ ಜನರ ಆಸೆ, ಆಕಾಂಕ್ಷೆಗಳು, ಅವರ ಆತ್ಮಗೌರವ, ಸಾಂಸ್ಕೃತಿಕ ಗುರತು ಇವೆಲ್ಲವೂ ಸಾಕಾರಗೊಳ್ಳಬೇಕಾದರೆ, ಅದು ಭಾರತದೊಂದಿಗೆ ಅವಿಭಾಜ್ಯ ಅಂಗವಾಗಿ ಸೇರಬೇಕು ಎಂದು ಮದನಿ ಅಭಿಪ್ರಾಯಪಟ್ಟಿದ್ದಾರೆ. 

ಕಾಶ್ಮೀರಿಗಳ ಕಲ್ಯಾಣ ಭಾರತದೊಂದಿಗಿನ ಏಕೀಕರಣದಲ್ಲಿದ್ದು, ಪ್ರತ್ಯೇಕತಾವಾದಿ ಚಳವಳಿ ದೇಶಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದು ಮದನಿ ಆರೋಪಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ NRC ಪ್ರಕ್ರಿಯೆಗೆ ಮುಂದಾದರೆ ಮಂಡಳಿ ಅದನ್ನು ಸ್ವಾಗತಿಸುವುದಾಗಿ ಮದನಿ ಸ್ಪಷ್ಟಪಡಿಸಿದ್ದಾರೆ. NRCಯಿಂದ ಯಾರು ಅಕ್ರಮ ವಲಸಗಿರು, ಯಾರು ನೈಜ ಭಾರತೀಯರು ಎಂಬುದು ತಿಳಿಯಲಿದೆ ಎಂದಾದರೆ ಮಂಡಳಿ NRCಯನ್ನು ಸ್ವಾಗತಿಸುತ್ತದೆ ಎಂದು ಮದನಿ ಹೇಳಿದ್ದಾರೆ.