ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯ ವಸತಿ ಸಂಕೀರ್ಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇದುವರೆಗೆ ಮೃತರಾದವರ ಸಂಖ್ಯೆ 128 ಕ್ಕೆ ಏರಿದೆ. 280ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ಕಳೆದ 77 ವರ್ಷಗಳಲ್ಲಿ ನಗರದಲ್ಲಿ ನಡೆದ ಅತ್ಯಂತ ಭೀಕರ ಅಗ್ನಿ ದುರಂತ ಎನಿಸಿದೆ.

ಹಾಂಗ್‌ಕಾಂಗ್ ಭೀಕರ ಅಗ್ನಿ ದುರಂತಕ್ಕೆ ಇದುವರೆಗೆ 128 ಬಲಿ:280 ಜನ ನಾಪತ್ತೆ:

ಚೀನಾದ ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯ ವಸತಿ ಸಂಕೀರ್ಣದಲ್ಲಿ ಬುಧವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೃತರಾದವರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 280 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕನಿಷ್ಠ 76 ಮಂದಿ ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಸಿಲುಕಿರುವ ನಿವಾಸಿಗಳು ಬದುಕುಳಿಯುವ ಸಾಧ್ಯತೆಗಳು ಪ್ರತಿ ಗಂಟೆಗೂ ಕಡಿಮೆಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಹಾಂಗ್ ಕಾಂಗ್ ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಕಟ್ಟಡ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಖ್ಯ ಗುತ್ತಿಗೆದಾರ ಸೇರಿದಂತೆ ಮೂವರನ್ನು ಬಂಧಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಕಟ್ಟಡದ ರಿನೋವೇಷನ್ ಸಮಯದಲ್ಲಿ ಅನುಮೋದಿಸದ, ಹೆಚ್ಚು ದಹಿಸುವ ವಸ್ತುಗಳನ್ನು ಬಳಸಿದ್ದರಿಂದ ಬೆಂಕಿ ವೇಗವಾಗಿ ಹರಡಲು ನೇರ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಒಟ್ಟು 8 ಗಗನಚುಂಬಿ ವಸತಿ ಸಂಕೀರ್ಣಗಳಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಬಿದ್ದು ಹೊತ್ತಿ ಉರಿಯುವುದಕ್ಕೆ ಆರಂಭವಾಗಿತ್ತು. ಬೆಂಕಿ ಹೊತ್ತಿಕೊಂಡ ಸಂಕೀರ್ಣವು ಒಟ್ಟು ಎಂಟು ಕಟ್ಟಡಗಳನ್ನು ಒಳಗೊಂಡಿತ್ತು, ಈ ಪ್ರತಿಯೊಂದೂ ಕಟ್ಟಡವೂ 35 ಮಹಡಿಗಳನ್ನು ಹೊಂದಿದ್ದು, ಸುಮಾರು ಎರಡು ಸಾವಿರ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿತ್ತು.

77 ವರ್ಷಗಳಲ್ಲಿ ಇದೊಂದು ಅತ್ಯಂತ ವಿನಾಶಕಾರಿ ಬೆಂಕಿ ದುರಂತ

ಚೀನಾದಲ್ಲಿ 77 ವರ್ಷಗಳಲ್ಲಿ ಇದೊಂದು ಅತ್ಯಂತ ವಿನಾಶಕಾರಿ ಬೆಂಕಿ ದುರಂತವಾಗಿದ್ದು, ಈ ಬೆಂಕಿಯನ್ನು ನಿಯಂತ್ರಣಕ್ಕೆ ತರಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಈ ಹಠಾತ್ ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೂ ಅನೇಕ ನಿವಾಸಿಗಳು ಸಿಗರೇಟಿನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: 5 ಕೋಟಿ ಕೊಡಿ ಇಲ್ಲ ಚಿನ್ನ ಹಾಕೋದು ನಿಲ್ಸಿ: ಕೇಜಿಗಟ್ಟಲೇ ಚಿನ್ನ ಹಾಕಿ ಓಡಾಡ್ತಿದ್ದ ಚಿತೋರಗಢದ ಗೋಲ್ಡ್‌ಮ್ಯಾನ್‌ಗೆ ಬೆದರಿಕೆ

ಜುಲೈ 2024 ರಿಂದಲೂ ಈ ಸಂಕೀರ್ಣದಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಹೊರಗೆ ಅಳವಡಿಸಲಾದ ಸ್ಟೈರೋಫೋಮ್ ಮತ್ತು ಸಿಂಥೆಟಿಕ್ ಬಲೆ ಸೇರಿದಂತೆ ಸುಡುವ ವಸ್ತುಗಳು ಬೆಂಕಿಯ ಹರಡುವಿಕೆಯನ್ನು ವೇಗಗೊಳಿಸಿದವು, ಇದರಿಂದಾಗಿ ಬೆಂಕಿ ಕೆಲವೇ ನಿಮಿಷಗಳಲ್ಲಿ ಬಹು ಮಹಡಿಗಳನ್ನು ತಲುಪಲು ಸಾಧ್ಯವಾಯಿತು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಬೆಂಕಿಯು ಫ್ಲಾಟ್‌ಗಳು ಮತ್ತು ಕಾರಿಡಾರ್‌ಗಳನ್ನು ಬೇಗನೆ ಆವರಿಸಿತು, ಇದರಿಂದಾಗಿ ಅನೇಕ ನಿವಾಸಿಗಳು ಹೊರಬರಲಾಗದೇ ಒಳಗೆ ಸಿಲುಕಿಕೊಂಡರು.

ಸ್ಥಳದಿಂದ ಸೆರೆಯಾದ ಚಿತ್ರಗಳು ವ್ಯಾಪಕ ವಿನಾಶವನ್ನು ತೋರಿಸುತ್ತವೆ, ಕುಸಿದ ಸ್ಕ್ಯಾಫೋಲ್ಡಿಂಗ್‌ಗಳು ಮತ್ತು ಬೆಂಕಿಯಿಂದ ಸುಟ್ಟು ಹೋದ ಕಟ್ಟಡಗಳಿಂದ ಜ್ವಾಲೆಗಳನ್ನು ನಿಯಂತ್ರಣಕ್ಕೆ ತಂದ ಗಂಟೆಗಳ ನಂತರವೂ ಹೊಗೆ ಬರುತ್ತಿತ್ತು. ಆರಂಭಿಕ ವರದಿಗಳು ಹಾಂಗ್ ಕಾಂಗ್ ನವೀಕರಣ ಯೋಜನೆಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ಬಿದಿರಿನ ಸ್ಕ್ಯಾಫೋಲ್ಡಿಂಗ್ ಅನ್ನು ದೂಷಿಸಿದ್ದರೂ, ತಜ್ಞರು ಈ ಬೆಂಕಿಯ ಹಿಂದಿನ ಪ್ರಮುಖ ಕಾರಣ ಬಿದಿರು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಹುಲಿಯ ದರ್ಬಾರ್: ಗಂಟೆಗಟ್ಟಲೆ ಸಂಚಾರ ಸ್ಥಗಿತ!

ಪ್ಲಾಸ್ಟಿಕ್ ಬಲೆ ಮತ್ತು ಇತರ ಸಂಶ್ಲೇಷಿತ ವಸ್ತುಗಳಿಗೆ ಹೋಲಿಸಿದರೆ ಬಿದಿರು ನೈಸರ್ಗಿಕ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ನಿಧಾನವಾಗಿ ಉರಿಯುತ್ತದೆ. ತೈ ಪೋ ಬೆಂಕಿಗೆ, ಬಲೆ ಮತ್ತು ಇತರ ಎಂಜಿನಿಯರಿಂಗ್ ವಸ್ತುಗಳು ಪ್ರಾಥಮಿಕವಾಗಿ ಕಾರಣವೆಂದು ತೋರುತ್ತದೆ ಎಂದು ಹಾಂಗ್ ಕಾಂಗ್‌ನ ಚೀನೀ ವಿಶ್ವವಿದ್ಯಾಲಯದ ವಾಸ್ತುಶಿಲ್ಪಿ ರಾಫೆಲ್ಲಾ ಆಂಡ್ರೆಜಿ ಹೇಳಿದ್ದಾರೆ.

ಗಾಳಿಯ ಆರ್ಭಟಕ್ಕೆ ಪಕ್ಕದ ಕಟ್ಟಡಕ್ಕೂ ವ್ಯಾಪಿಸಿದ ಬೆಂಕಿ

ಬಲವಾದ ಗಾಳಿಯು ಸುಡುವ ಬೆಂಕಿಯ ಕಿಡಿಗಳನ್ನು ಪಕ್ಕದ ಕಟ್ಟಡಗಳಿಗೂ ವ್ಯಾಪಿಸುವಂತೆ ಮಾಡಿತು. ಇದರಿಂದಾಗಿ ಬೆಂಕಿ ಮುಖ್ಯ ಕಟ್ಟಡದಿಂದ ಪಕ್ಕದ ವಸತಿ ಕಟ್ಟಡಕ್ಕೆ ಹರಡಿತು. ನವೀಕರಣ ಕಾರ್ಯದಿಂದಾಗಿ ಕಿಟಕಿಗಳು ಮುಚ್ಚಲ್ಪಟ್ಟಿದ್ದರಿಂದ ಬೆಂಕಿಯ ಎಚ್ಚರಿಕೆ ಕರೆಗಂಟೆಗಳು ಅನೇಕ ನಿವಾಸಿಗಳಿಗೆ ತಿಳಿಯಲೇ ಇಲ್ಲ.ಜನರ ಸ್ಥಳಾಂತರ ವಿಳಂಬವೂ ಈ ದುರಂತಕ್ಕೆ ಕಾರಣವಾಗಿದೆ. ಇದರ ಜೊತೆಗೆ ಸಿಕ್ಕಿಬಿದ್ದ ನಿವಾಸಿಗಳನ್ನು ತಲುಪುವಲ್ಲಿ ತುರ್ತು ತಂಡಗಳು ತೀವ್ರ ಸವಾಲುಗಳನ್ನು ಎದುರಿಸಿದವು. ಹಲವಾರು ಮಹಡಿಗಳಲ್ಲಿ, ಅಗ್ನಿಶಾಮಕ ದಳದವರು ಪ್ರವೇಶಿಸಲು ತಾಪಮಾನವು ತುಂಬಾ ಹೆಚ್ಚಾಗಿತ್ತು, ಇದು ತಕ್ಷಣದ ರಕ್ಷಣಾ ಪ್ರಯತ್ನಗಳನ್ನು ತಡೆಯಿತು ಮತ್ತು ಡಜನ್‌ಗಟ್ಟಲೆ ಜನರು ತಮ್ಮ ಅಪಾರ್ಟ್ಮೆಂಟ್‌ಗಳಲ್ಲೇ ಸಿಲುಕಿಕೊಂಡರು.

ಹಾಂಗ್ ಕಾಂಗ್‌ನ ಅತ್ಯಂತ ಭೀಕರ ಐತಿಹಾಸಿಕ ಅಗ್ನಿ ದುರಂತಗಳು

ಹಾಂಗ್‌ಕಾಂಗ್‌ನಲ್ಲಿ ಈ ರೀತಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು ಇದೇ ಮೊದಲೇನಲ್ಲ, 1918 ರ ರೇಸ್‌ಕೋರ್ಸ್ ಬೆಂಕಿಯಲ್ಲಿ 600 ಜನರು ಸಾವನ್ನಪ್ಪಿದರು, 1948 ರ ಗೋದಾಮಿನ ಸ್ಫೋಟವು 176 ಜನರನ್ನು ಬಲಿ ತೆಗೆದುಕೊಂಡಿತು. ಕಳೆದ ಶತಮಾನದಲ್ಲಿ ಹಾಂಗ್ ಕಾಂಗ್ ಹಲವಾರು ವಿನಾಶಕಾರಿ ಅಗ್ನಿ ಅವಘಡಗಳಿಗೆ ಸಾಕ್ಷಿಯಾಗಿದೆ, ಅವುಗಳಲ್ಲಿ ಹಲವು ನಗರದ ಇತಿಹಾಸದಲ್ಲಿ ಅತ್ಯಂತ ನೋವಿನ ವಿಪತ್ತುಗಳೆಂದು ಇಂದಿಗೂ ನೆನಪಿನಲ್ಲಿವೆ. ದಾಖಲಾದ ಅತ್ಯಂತ ಮಾರಕ ಬೆಂಕಿ 100 ವರ್ಷಗಳ ಹಿಂದೆ, ಫೆಬ್ರವರಿ 27, 1918 ರಂದು ಹ್ಯಾಪಿ ವ್ಯಾಲಿ ರೇಸ್‌ಕೋರ್ಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ದುರಂತ. ಈ ದುರಂತದಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.