Tiger blocks road: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಬಳಿ ಹುಲಿಯೊಂದು ನಡುರಸ್ತೆಯಲ್ಲಿ ಮಲಗಿ ವಿಶ್ರಾಂತಿ ಪಡೆದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಅಪರೂಪದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆಯಲ್ಲಿ ಮಲಗಿ ವಿಶ್ರಾಂತಿ ಪಡೆದ ಹುಲಿ:
ಹುಲಿಯೊಂದು ರಸ್ತೆಯಲ್ಲೇ ಮಲಗಿ ಆರಾಮವಾಗಿ ವಿಶ್ರಾಂತಿ ಪಡೆದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾದಲ್ಲಿ ಈ ಘಟನೆ ನಡೆದಿದ್ದು, ಹುಲಿ ನಡುರಸ್ತೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಲವು ವಾಹನಗಳು ಆಗಮಿಸುತ್ತಿದ್ದರು ಕ್ಯಾರೇ ಎನ್ನದೇ ಹುಲಿ ರಸ್ತೆಯಲ್ಲೇ ಮಲಗಿದ್ದರಿಂದಾಗಿ ಗಂಟೆಗಳ ಕಾಲ ಆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಹುಲಿಯಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ:
ಆಂಗ್ಲ ಮಾಧ್ಯಮ ಎನ್‌ಡಿಟಿವಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತಡೋಬಾ ಬಳಿಯ ಚಂದ್ರಾಪುರ-ಮೊಹರ್ಲಿ ರಸ್ತೆಯಲ್ಲಿ ಅಪರೂಪದ ಆದರೆ ಅಪಾಯಕಾರಿ ಕ್ಷಣವನ್ನು ಸೆರೆಹಿಡಿಯಲಾಗಿದೆ. ದೃಶ್ಯಗಳಲ್ಲಿ, ಮಧು ಎಂಬ ಹುಲಿಯ ಸಂತತಿಯೆಂದು ನಂಬಲಾದ ಹುಲಿ ಮರಿ ರಸ್ತೆಯ ಮಧ್ಯದಲ್ಲಿ ಶಾಂತವಾಗಿ ಕುಳಿತಿರುವುದು ಕಂಡುಬರುತ್ತದೆ, ಇದರಿಂದಾಗಿ ಎಲ್ಲಾ ವಾಹನಗಳ ಸಂಚಾರ ಗಂಟೆಗಳ ಕಾಲ ಸ್ಥಗಿತಗೊಂಡಿದೆ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ಚೇರ್ ಮುರಿದು ಹಾಕಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು: ಕೋಪದಿಂದ ಹೊರಟು ಹೋದ ಬಿಗ್ಬಾಸ್ ಸ್ಪರ್ಧಿ
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಹುಲಿಯೊಂದು ರಸ್ತೆ ಮಧ್ಯದಲ್ಲಿ ಬಾಯನ್ನು ಆಕಳಿಸುತ್ತಾ ಕುಳಿತಿದೆ. ಸ್ವಲ್ಪ ಹೊತ್ತು ಸುಮ್ಮನೇ ಕುಳಿತ ಹುಲಿ ಬಳಿಕ ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳುವುದನ್ನು ಕಾಣಬಹುದು. ನಂತರ ಪಕ್ಕಕ್ಕೆ ತಿರುಗಿದ ಹುಲಿ ಅಲ್ಲೇ ಮಲಗುವುದನ್ನು ಕಾಣಬಹುದಾಗಿದೆ. ಹುಲಿಯಿಂದಾಗಿ ಹಲವು ವಾಹನಗಳು ರಸ್ತೆಯಲ್ಲೇ ಮುಂದೆ ಹೋಗದೇ ನಿಂತಿರುವುದನ್ನು ಕಾಣಬಹುದು.
ಈ ಘಟನೆ ತಡೋಬಾ ಹುಲಿ ಅಭಯಾರಣ್ಯದ ಬಫರ್ ವಲಯದಲ್ಲಿ ನಡೆದಿದೆ. ದಟ್ಟವಾದ ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ಪ್ರಾಣಿಗಳ ನೈಸರ್ಗಿಕ ಚಲನೆ ಸಾಮಾನ್ಯವಾಗಿದೆ. ಇದು ವನ್ಯಜೀವಿಗಳು ಆಗಾಗ್ಗೆ ಕಾಣಿಸಿಕೊಳ್ಳುವ ಪ್ರದೇಶವಾಗಿದೆ. ಈ ವೀಡಿಯೊವನ್ನು ಸ್ಥಳೀಯ ನಿವಾಸಿ ಆಕಾಶ್ ಆಲಂ ರೆಕಾರ್ಡ್ ಮಾಡಿದ್ದಾರೆ. ಅವರು ಈ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದೃಶ್ಯವನ್ನು ವೀಕ್ಷಿಸಿದ್ದಾಗಿ ಹೇಳಿದ್ದು, ಪ್ರವಾಸಿಗರು ಮತ್ತು ಗ್ರಾಮಸ್ಥರು ಇಬ್ಬರೂ ತಮ್ಮ ವಾಹನಗಳ ಒಳಗೆ ತಾಳ್ಮೆಯಿಂದ ಕಾಯುತ್ತಿರುವುದನ್ನು ಅವರ ವೀಡಿಯೊ ತೋರಿಸುತ್ತದೆ. ಸುಮಾರು ಗಂಟೆಯವರೆಗೂ ಅಲ್ಲೇ ಇದ್ದ ಹುಲಿ ಅಂತಿಮವಾಗಿ ಅಲ್ಲಿಂದ ಹೋಗಿದ್ದು, ವಾಹನ ಸವಾರರು ಪ್ರಯಾಣವನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬರ್ತ್‌ಡೇ ದಿನವೇ ಫನ್ ಅಂತ ಸ್ನೇಹಿತರೇ ಬೆಂಕಿ ಹಚ್ಚಿದ್ರು: 21ರ ಯುವಕನ ಸ್ಥಿತಿ ಗಂಭೀರ
ಸ್ಥಳೀಯರು ಹೇಳುವಂತೆ, ಈ ರಸ್ತೆಯಲ್ಲಿ ವಿಶೇಷವಾಗಿ ಮುಂಜಾನೆ ಹಾಗೂ ಸಂಜೆ ಕತ್ತಲಾದ ನಂತರ ವನ್ಯಜೀವಿಗಳು ಕಾಣಿಸಿಕೊಳ್ಳುವುದು ಬಹುತೇಕ ಸಾಮಾನ್ಯವಾಗಿದೆ. ಚಂದ್ರಾಪುರ-ಮೊಹರ್ಲಿ ಮಾರ್ಗವು ಹತ್ತಿರದ ಹಳ್ಳಿಗಳಿಗೆ ಪ್ರಾಥಮಿಕ ಪ್ರಯಾಣದ ಮಾರ್ಗವಾಗಿದೆ. ಇದು ಮಾನವರು ಮತ್ತು ಕಾಡು ಪ್ರಾಣಿಗಳ ನಡುವಿನ ಮುಖಾಮುಖಿಗಳನ್ನು ಸಾಮಾನ್ಯ ಎನಿಸಿದೆ. ಹೀಗಾಗಿ ಇಲ್ಲಿ ಪ್ರಯಾಣಿಕರು ಜಾಗರೂಕರಾಗಿರಿ, ಹಾರ್ನ್ ಮಾಡುವುದನ್ನು ತಪ್ಪಿಸಿ ಮತ್ತು ಪ್ರಾಣಿಗಳು ಇರುವಾಗ ತಮ್ಮ ವಾಹನಗಳಿಂದ ಹೊರಬರಬಾರದು ಎಂದು ಅರಣ್ಯ ಅಧಿಕಾರಿಗಳು ಆಗಾಗ್ಗೆ ಸಲಹೆ ನೀಡುತ್ತಾರೆ.


