ರಾಜ್ಯದಲ್ಲಿನ ಮುಖ್ಯಮಂತ್ರಿ ಬದಲಾವಣೆ ಚರ್ಚೆಯು ಕೇವಲ ಊಹಾಪೋಹವಾಗಿದ್ದು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿರುವ ಅವರು, ಹಿಂದುಳಿದ ವರ್ಗಗಳು ರಾಜಕೀಯವಾಗಿ ಶೈಕ್ಷಣಿಕವಾಗಿ ಸಬಲರಾಗುವ  ಕರೆ ನೀಡಿದ್ದಾರೆ.

ಮಂಡ್ಯ (ನ.29): ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ಮತ್ತು ಕಾಂಗ್ರೆಸ್ ಆಂತರಿಕ ಗೊಂದಲಗಳ ಕುರಿತು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಮಂಡ್ಯದಲ್ಲಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ.

ಸಿಎಂ ಬದಲಾವಣೆ ಚರ್ಚೆ: 'ಯಾವುದೇ ಘರ್ಷಣೆ ಇಲ್ಲ

ಸಿಎಂ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಕೇವಲ ಊಹಾಪೋಹ. ಪಕ್ಷದಲ್ಲಿ ಯಾವುದೇ ಯುದ್ದ, ಯಾವುದೇ ಘರ್ಷಣೆ ಇಲ್ಲ. ಮೀಡಿಯಾದಲ್ಲಿ ಮಾತ್ರ ಚರ್ಚೆ ಆಗ್ತಿದೆ ಅಷ್ಟೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮ:

ನಮ್ಮ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನ ತೀರ್ಮಾನ ಮಾಡಬೇಕಾದುದು ನಮ್ಮ ಹೈಕಮಾಂಡ್. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್‌ಗೆ ಬದ್ಧರಾಗಿದ್ದಾರೆ ಎಂದರು.

ಗೊಂದಲ ನಿವಾರಣೆಗೆ ಆಗ್ರಹ:

ಹೈಕಮಾಂಡ್ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಇಬ್ಬರ ಜೊತೆ ಕುಳಿತು ಮಾತನಾಡಲಿದ್ದು, ಆದಷ್ಟು ಬೇಗ ಗೊಂದಲ ನಿವಾರಣೆ ಆಗಿ, ಹೈಕಮಾಂಡ್ ಈ ವಿಚಾರಕ್ಕೆ ತೆರೆ ಎಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡೂವರೇ ವರ್ಷ ಬದಲಾವಣೆ ಬಗ್ಗೆ ಯಾರಿಗೂ ಗೊತ್ತಿಲ್ಲ, ಅದರ ಬಗ್ಗೆ ಚರ್ಚೆಯ ಅವಶ್ಯಕತೆ ಇಲ್ಲ, ಕೆಲವರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಮಾಡಲು ಹೇಳಿದ್ದಾರೆ. ಪಕ್ಷ ಅಂದ ಮೇಲೆ ಎಷ್ಟೋ ಜನ ಮುಖ್ಯಮಂತ್ರಿ ಪದವಿಗೆ ಆಕಾಂಕ್ಷಿತರಿರುತ್ತಾರೆ. ಅವರ ಕಡೆಯವರು ಕೇಳಿದ್ದಾರೆ ಅಷ್ಟೇ, ಅದು ದೊಡ್ಡ ವಿಷಯ ಅಲ್ಲ ಎಂದು ಅಭಿಪ್ರಾಯಪಟ್ಟರು.

ಹಿಂದುಳಿದ ವರ್ಗಗಳ ಬಲವರ್ಧನೆಗೆ ಕರೆ: 

ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳು ರಾಜಕೀಯ ಶಕ್ತಿಯನ್ನು ಗಳಿಸುವುದು ಎಷ್ಟು ಮುಖ್ಯ ಎಂದು ವಿವರಿಸಿದರು. ರಾಜಕೀಯ ಶಕ್ತಿ ಇಲ್ಲದಿದ್ದರೆ ಸಮುದಾಯ ಮೇಲೆ ಬರಲು ಸಾಧ್ಯವಿಲ್ಲ. ಇದಕ್ಕಾಗಿ ನಾವೆಲ್ಲ ಒಟ್ಟಾಗಬೇಕು. ಸಮುದಾಯ ಉದ್ಧಾರ ಮಾಡುವವರ ಹಿಂದೆ ನಿಂತು ಅವರಿಗೆ ಬೆಂಬಲ ಕೊಡಬೇಕು, ಎಂದು ಕರೆ ನೀಡಿದರು.

ದಲಿತರು ಇನ್ನೂ ಮುಖ್ಯಮಂತ್ರಿ ಆಗಿಲ್ಲ:

ಮುಖ್ಯಮಂತ್ರಿ ಸ್ಥಾನವನ್ನು ಪಡೆದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟ. ರಾಜ್ಯದಲ್ಲಿ ಇದುವರೆಗೆ ಕೇವಲ 5 ಜನ ಹಿಂದುಳಿದ ವರ್ಗದವರು ಸಿಎಂ ಆಗಿದ್ದಾರೆ. ಅದರಲ್ಲಿ ದಲಿತರು ಇನ್ನೂ ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಮತ್ತು ಅರಸು ಅವರು ಮಾತ್ರ 5 ವರ್ಷ ಪೂರೈಸಿದ್ದಾರೆ.ಹಿಂದುಳಿದ ವರ್ಗದವರು ಸಣ್ಣ ತಪ್ಪು ಮಾಡಿದರೆ ದೊಡ್ಡದಾಗಿ ಬಿಂಬಿಸುತ್ತಾರೆ. ಇಲ್ಲದ ಹಗರಣವನ್ನು ಸೃಷ್ಟಿ ಮಾಡುತ್ತಾರೆ, ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ರಾಜಕೀಯ ಶಕ್ತಿ ಉಳಿಸುವ ಕೆಲಸ ಮಾಡಬೇಕು, ಎಂದು ಎಚ್ಚರಿಸಿದರು.

ಸಮಾನತೆಗಾಗಿ ಜಾತಿ ಜಾಗೃತಿ ಅಗತ್ಯ

ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂದು ಹೇಳಿದ ಯತೀಂದ್ರ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳು ಜಾಗೃತರಾಗಬೇಕು ಎಂದು ಒತ್ತಿ ಹೇಳಿದರು. ಸ್ವತಂತ್ರ ಬಂದು 75 ವರ್ಷವಾಗಿದೆ, ಜಾತಿ ಅನ್ನೋದು ಸಂಪೂರ್ಣವಾಗಿ ಹೋಗಿಲ್ಲ. ಈಗ ಜಾತಿಯನ್ನು ಸೂಕ್ಷ್ಮವಾಗಿ ಮಾಡ್ತಿದ್ದಾರೆ. ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ, ಉದ್ಯಮಿಗಳು, ಕೋಟ್ಯಾಧಿಪತಿಗಳ ಸ್ಥಾನದಲ್ಲಿ ಇನ್ನೂ ಪ್ರಬಲ ಸಮುದಾಯದವರೇ ಇದ್ದಾರೆ. ಹಿಂದುಳಿದ ವರ್ಗದವರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದುವರಿದು, ನಿಜವಾದ ಸಮಾನತೆ ನಾವು ಅವರ ಸ್ಥಾನದಲ್ಲಿ ಕೂತಾಗ ಸಿಕ್ಕಂತಾಗುತ್ತೆ. ಇದಕ್ಕಾಗಿ ನಾವು ಶಿಕ್ಷಣ ಪಡೆಯಬೇಕು, ಶಿಕ್ಷಿತರಾಗಬೇಕು," ಎಂದು ಕರೆ ನೀಡಿದರು.