Hong Kong skyscraper fire: ಒಂದಲ್ಲ ಎರಡಲ್ಲ ಬರೋಬ್ಬರಿ 9 ಗಗನಚುಂಬಿ ಬಹುಮಹಡಿ ಕಟ್ಟಡಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 13 ಜನರು ಸಾವನ್ನಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಚೀನಾದ ಹಾಂಗ್‌ಕಾಂಗ್‌ನಲ್ಲಿ ಘಟನೆ ನಡೆದಿದೆ.

ಚೀನಾದ ಹಾಂಗ್‌ಕಾಂಗ್‌ನಲ್ಲಿ ದುರಂತ: 9 ಗಗನಚುಂಬಿ ಕಟ್ಟಡಗಳಿಗೆ ಏಕಾಏಕಿ ಬೆಂಕಿ:

ಒಂದಲ್ಲ ಎರಡಲ್ಲ ಬರೋಬ್ಬರಿ 9 ಗಗನಚುಂಬಿ ಬಹುಮಹಡಿ ಕಟ್ಟಡಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 13 ಜನರು ಸಾವನ್ನಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಚೀನಾದ ಹಾಂಗ್‌ಕಾಂಗ್‌ನಲ್ಲಿ ಘಟನೆ ನಡೆದಿದೆ. ಒಟ್ಟು 9 ಗಗನಚುಂಬಿ ವಸತಿ ಸಂಕೀರ್ಣಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅನೇಕರು ಹೊರಬರಲಾಗದೇ ಪರದಾಡಿದು, ಇದುವರೆಗೆ ಈ ದುರಂತದಲ್ಲಿ ಮೃತರಾದವರ ಸಂಖ್ಯೆ 13ಕ್ಕೆ ಏರಿದೆ ಹಾಗೂ ಕಟ್ಟಡದಿಂದ ಹೊರಬರಲು ಪ್ರಯತ್ನಿಸಿದ ಅನೇಕರು ಹೊರಬರಲಾಗದೇ ಅಲ್ಲೇ ಸಿಲುಕಿದ್ದಾರೆ ಎಂದು ಹಾಂಗ್‌ಕಾಂಗ್‌ನ ಅಗ್ನಿ ಶಾಮಕ ಸೇವೆ ಮಾಹಿತಿ ನೀಡಿದೆ.

ಇದುವರೆಗೆ 13 ಜನರ ಸಾವು

ಆರಂಭದಲ್ಲಿ 9 ಜನ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದು ಬಂದಿತ್ತು. ರಕ್ಷಿಸಲ್ಪಟ್ಟ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಕೂಡ ನಂತರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕನಿಷ್ಠ 15 ಜನ ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಕನಿಷ್ಠ 700 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಿಂದ ಹತ್ತಿಕೊಂಡ ಬೆಂಕಿ:

ಹಾಂಗ್‌ಕಾಂಗ್‌ನ ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ ವಸತಿ ಸಂಕೀರ್ಣದ ಹೊರಭಾಗದಲ್ಲಿ ಸ್ಥಾಪಿಸಲಾದ ಬಿದಿರಿನ ಸ್ಕ್ಯಾಫೋಲ್ಡಿಂಗ್ ಮತ್ತು ನಿರ್ಮಾಣ ಜಾಲಕ್ಕೆ ಮೊದಲು ಬೆಂಕಿ ಬಿದ್ದಿದ್ದು, ಅದು ವೇಗವಾಗಿ ಹರಡುತ್ತಿದ್ದಂತೆ ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಸುತ್ತಲೂ ಆವರಿಸಿತು. ಈ ವಸತಿ ಸಂಕೀರ್ಣವು ಎಂಟು ಬ್ಲಾಕ್‌ಗಳನ್ನು ಹೊಂದಿದ್ದು, ಸುಮಾರು 2,000 ಅಪಾರ್ಟ್‌ಮೆಂಟ್‌ಗಳು ಸುಮಾರು 4,800 ಜನರನ್ನು ಹೊಂದಿವೆ ಎಂದು ದಾಖಲೆಗಳು ತೋರಿಸುತ್ತವೆ. (ಸ್ಕ್ಯಾಫೋಲ್ಡಿಂಗ್ ಎಂದರೆ ಎತ್ತರದ ಕಟ್ಟಡಗಳಿಗೆ ಪೈಂಟ್ ಮಾಡುವುದಕ್ಕೆ ಅಥವಾ ಏನಾದರೂ ರಿಪೇರಿ ಕಾರ್ಯಗಳಿದ್ದರೆ ಅದನ್ನು ಮಾಡುವುದಕ್ಕೆ ಕಾರ್ಮಿಕರು ಹತ್ತಿ ಇಳಿಯುವುದಕ್ಕೆ ಕಟ್ಟಡದ ಹೊರಭಾಗದಿಂದ ಜೋಡಿಸಿದ ಮರದ ಅಥವಾ ಕಬ್ಬಿಣದ ಪರಿಕರವಾಗಿದೆ)

ಇದನ್ನೂ ಓದಿ: ಜ್ವಾಲಾಮುಖಿಯ ಮೇಲೆ ವಿಮಾನಗಳು ಹಾರಾಡುವುದಿಲ್ಲ ಏಕೆ?

ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕಾಣುವಂತೆ ಒಂದಕ್ಕೊಂದು ಹತ್ತಿರದಲ್ಲಿ ಇರುವ ಹಲವಾರು ಗಗನಚುಂಬಿ ಕಟ್ಟಡಗಳು ಉರಿಯುತ್ತಿರುವುದು ಕಾಣುತ್ತಿದೆ. ರಾತ್ರಿಯಾಗುತ್ತಿದ್ದಂತೆ ಅನೇಕ ಅಪಾರ್ಟ್ಮೆಂಟ್‌ಗಳ ಕಿಟಕಿಗಳಿಂದ ಪ್ರಕಾಶಮಾನವಾದ ಜ್ವಾಲೆಗಳು ಮತ್ತು ಹೊಗೆ ಹೊರ ಬರುತ್ತಿವೆ. ಅಗ್ನಿಶಾಮಕ ದಳದವರು ಕ್ರೇನ್ ಬಳಸಿ ಎತ್ತರದಿಂದ ನೀರು ಸುರಿದು ಅಗ್ನಿ ಶಾಮನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿತು ಮತ್ತು ರಾತ್ರಿಯಾಗುತ್ತಿದ್ದಂತೆ ಅದು ತೀವ್ರ ಗೊಂಡಿದ್ದು, ಅಗ್ನಿಶಾಮಕ ಅಧಿಕಾರಿಗಳು ಅದನ್ನು 5ನೇ ಹಂತದ ಎಚ್ಚರಿಕೆ ಎಂದು ಹೇಳಿದ್ದು, ಇದು ತೀವ್ರತೆಯ ಅತ್ಯಧಿಕ ಮಟ್ಟವಾಗಿದೆ ಎಂದು ಅಗ್ನಿಶಾಮಕ ಸೇವೆಗಳ ಇಲಾಖೆ ತಿಳಿಸಿದೆ. ತಡರಾತ್ರಿಯವರೆಗೂ ಬೆಂಕಿ ಉರಿಯುತ್ತಲೇ ಇತ್ತು. ಅಗ್ನಿಶಾಮಕ ದಳದವರು 128 ಅಗ್ನಿಶಾಮಕ ವಾಹನಗಳು ಮತ್ತು 57 ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ.

ಇದನ್ನೂ ಓದಿ: ಮಾಜಿ ಗೆಳತಿಯಿಂದ ರೇ*ಪ್ ಕೇಸ್: ಚೇತೇಶ್ವರ್ ಪೂಜಾರ್ ಭಾಮೈದ ಸಾವಿಗೆ ಶರಣು

ಈ ದುರಂತದಲ್ಲಿ ಜನರ ಪ್ರಾಣ ಉಳಿಸಲು ಹೋದ ಒಬ್ಬ ಅಗ್ನಿಶಾಮಕ ಸಿಬ್ಬಂದಿ ಕೂಡ ಸೇರಿದ್ದಾರೆ ಮತ್ತು ಇನ್ನೊಬ್ಬ ಸಿಬ್ಬಂದಿ ಶಾಖದಿಂದಾದ ಬಳಲಿಕೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಗ್ನಿಶಾಮಕ ಸೇವೆಗಳ ಇಲಾಖೆಯ ನಿರ್ದೇಶಕ ಆಂಡಿ ಯೆಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಟ್ಟಡಗಳ ಅವಶೇಷಗಳಡಿಯಲ್ಲಿ ಜನರು ಸಿಲುಕಿರುವ ಬಗ್ಗೆ ಹಲವು ವರದಿಗಳು ಬಂದಿವೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು, ಆದರೆ ವಿವರಗಳನ್ನು ನೀಡಿಲ್ಲ.

ಬೆಂಕಿಯಲ್ಲಿ ಸಿಲುಕಿದ ವೃದ್ಧರು:

ಬೆಂಕಿಯಲ್ಲಿ ಸಿಲುಕಿರುವ ಹೆಚ್ಚಿನ ನಿವಾಸಿಗಳು ವೃದ್ಧರು ಎಂದು ನಂಬಲಾಗಿದೆ ಎಂದು ತೈಪೋ ಜಿಲ್ಲಾ ಮಂಡಳಿ ಸದಸ್ಯ ಲೋ ಹಿಯು-ಫಂಗ್ ಬುಧವಾರ ಸ್ಥಳೀಯ ಟಿವಿ ಚಾನೆಲ್ ಟಿವಿಬಿಗೆ ತಿಳಿಸಿದ್ದಾರೆ. ಮತ್ತೊಂದೆಡೆ ಬೆಂಕಿಯಿಂದ ನಿರಾಶ್ರಿತರಾದ ಜನರಿಗೆ ತೈ ಪೋದಲ್ಲಿ ಜಿಲ್ಲಾ ಅಧಿಕಾರಿಗಳು ತಾತ್ಕಾಲಿಕ ಆಶ್ರಯಗಳನ್ನು ತೆರೆದಿದ್ದಾರೆ.

ಘಟನೆಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೊಬ್ಬರು ಮಾತನಾಡಿ, ನನ್ನ ಆಸ್ತಿಯ ಬಗ್ಗೆ ಯೋಚಿಸುವುದನ್ನು ನಾನು ಬಿಟ್ಟುಬಿಟ್ಟಿದ್ದೇನೆ, ಅದು ಹಾಗೆ ಉರಿಯುವುದನ್ನು ನೋಡುವುದು ನಿಜವಾಗಿಯೂ ನಿರಾಶಾದಾಯಕವಾಗಿತ್ತು ಎಂದು ದುಃಖ ತೋಡಿಕೊಂಡಿದ್ದಾರೆ. ತೈ ಪೊ ಎಂಬುದು ಹಾಂಗ್ ಕಾಂಗ್‌ನ ಉತ್ತರ ಭಾಗದಲ್ಲಿರುವ ಮತ್ತು ಚೀನಾದ ಮುಖ್ಯ ಭೂಭಾಗದ ನಗರವಾದ ಶೆನ್‌ಜೆನ್‌ನ ಗಡಿಯ ಸಮೀಪದಲ್ಲಿರುವ ನ್ಯೂ ಟೆರಿಟರಿಸ್‌ನಲ್ಲಿರುವ ಉಪನಗರ ಪ್ರದೇಶವಾಗಿದೆ. ಹಾಂಗ್ ಕಾಂಗ್‌ನಲ್ಲಿ ಕಟ್ಟಡ ನಿರ್ಮಾಣ ಮತ್ತು ನವೀಕರಣ ಯೋಜನೆಗಳಲ್ಲಿ ಬಿದಿರಿನ ಸ್ಕ್ಯಾಫೋಲ್ಡಿಂಗ್ ಬಳಸುವುದು ಸಾಮಾನ್ಯವಾಗಿದೆ, ಆದರೆ ಈ ವರ್ಷದ ಆರಂಭದಲ್ಲಿ ಸರ್ಕಾರವು ಸುರಕ್ಷತೆಯ ಕಾರಣಕ್ಕೆ ಸಾರ್ವಜನಿಕ ಯೋಜನೆಗಳಿಗೆ ಬಿದಿರಿನ ಸ್ಕ್ಯಾಫೋಲ್ಡಿಂಗ್ ಅನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಾರಂಭಿಸುವುದಾಗಿ ಹೇಳಿದೆ. ಇದರ ನಡುವೆಯೇ ಈಗ ಈ ದುರಂತ ಸಂಭವಿಸಿದೆ.

Scroll to load tweet…