2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಇಥಿಯೋಪಿಯಾ ಪ್ರಧಾನಿ| ನೊಬೆಲ್ ಬಾಚಿದ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ| ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧಿಸುವ ಪ್ರಯತ್ನಕ್ಕೆ ಮೆಚ್ಚುಗೆ| ಎರಿಟ್ರಿಯಾದೊಂದಿಗಿನ ಎರಡು ದಶಕಗಳ ಕದನಕ್ಕೆ ಅಂತ್ಯ ಹಾಡಿದ ಅಬಿ ಅಹ್ಮದ್ ಅಲಿ| ಅಬಿ ಅಹ್ಮದ್ ಅವರಿಗೆ ಪ್ರಶಸ್ತಿ ನೀಡಲು ನಾರ್ವೇಜಿಯನ್ ನೊಬೆಲ್ ಸಮಿತಿ ತೀರ್ಮಾನ|

ಓಸ್ಲೋ(ಅ.11): ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿಯವರಿಗೆ 2019ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧಿಸುವ ನಿಟ್ಟಿನಲ್ಲಿ ಅಬಿ ಅಹ್ಮದ್ ಅಲಿ ನಡೆಸಿರುವ ಪ್ರಯತ್ನಗಳನ್ನು ಮೆಚ್ಚಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನೆರೆಯ ಎರಿಟ್ರಿಯಾದೊಂದಿಗಿನ ಗಡಿ ಸಂಘರ್ಷವನ್ನು ಪರಿಹರಿಸುವಲ್ಲಿ ಅಬಿ ಅಹ್ಮದ್ ನಿರ್ಣಾಯಕ ಪಾತ್ರವಹಿಸಿದ್ದು, ಈ ಹಿನ್ನೆಲೆಯಲ್ಲಿ 2019ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ನಾರ್ವೇಜಿಯನ್ ನೊಬೆಲ್ ಸಮಿತಿ ನಿರ್ಧರಿಸಿದೆ.

Scroll to load tweet…

ಇಥಿಯೋಪಿಯಾದಲ್ಲಿ, ಹೆಚ್ಚಿನ ಅಭಿವೃದ್ದಿ ಕಾರ್ಯಗಳಾಗಬೇಕಿದ್ದರೂ, ಅಬಿ ಅಹ್ಮದ್ ಇಥಿಯೋಪಿಯಾದ ಜನರ ಜೀವನಮಟ್ಟ ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ಸಮಿತಿ ತನ್ನ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದೆ.

ಕಳೆದ 20 ವರ್ಷಗಳಿಂದ ಇಥಿಯೋಪಿಯಾ ಹಾಗೂ ಎರಿಟ್ರಿಯಾ ಗಡಿ ಸಮಸ್ಯೆ ಎದುರಿಸುತ್ತಿದ್ದು, ನಿರಂತರ ಕದನ ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಕದನಕ್ಕೆ ಅಂತಿಮ ವಿರಾಮ ಹಾಡುವಲ್ಲಿ ಯಶಸ್ವಿಯಾಗಿರುವ ಅಬಿ ಅಹ್ಮದ್ ಇಥಿಯೋಪಿಯಾದಲ್ಲಿ ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಿದ್ದಾರೆ.