ಕಾಸ್ಮೋಲಾಜಿಗೆ ಭೌತಶಾಸ್ತ್ರದ ನೊಬೆಲ್: ಹೇಳ್ಲಿಲ್ವಾ ದಿಗಂತವೇ ಪವರ್‌ಫುಲ್!
ಭೌತಶಾಸ್ತ್ರ ವಿಭಾಗದ 2019ರ ನೊಬೆಲ್ ಪ್ರಶಸ್ತಿ ಪ್ರಕಟ| ಮೂವರು ಪ್ರಮುಖ ಭೌತಶಾಸ್ತ್ರಜ್ಞರಿಗೆ ನೊಬೆಲ್ ಪಾರಿತೋಷಕ| ಫಿಸಿಕಲ್ ಕಾಸ್ಮೋಲಜಿಯಲ್ಲಿ ನೊಬೆಲ್ ಪಡೆದ ಕೆನಡಾದ ಸಂಶೋಧಕ ಜೇಮ್ಸ್ ಪೀಬಲ್ಸ್| ಎಕ್ಸೋಪ್ಲ್ಯಾನೆಟ್(ಸೌರಮಂಡಲದ ಹೊರಗಿನ ಗ್ರಹ) ಆವಿಷ್ಕಾರಕ್ಕಾಗಿ ಇಬ್ಬರು ಸ್ವಿಸ್ ಸಂಶೋಧಕರಿಗೆ ನೊಬೆಲ್| ನೊಬೆಲ್ ಬಾಚಿದ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್|
ಸ್ಟಾಕ್’ಹೋಮ್(ಅ.08): ಭೌತಶಾಸ್ತ್ರ ವಿಭಾಗದ 2019ರ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಆವಿಷ್ಕಾರಗಳಲ್ಲಿ ಸಾಧನೆಗೈದ ಮೂವರು ಪ್ರಮುಖ ಭೌತಶಾಸ್ತ್ರಜ್ಞರಿಗೆ ನೊಬೆಲ್ ಪಾರಿತೋಷಕ ಒಲಿದಿದೆ.
ಫಿಸಿಕಲ್ ಕಾಸ್ಮೋಲಜಿಯಲ್ಲಿ ಸೈದ್ಧಾಂತಿಕ ಆವಿಷ್ಕಾರ ನಡೆಸಿದ ಕೆನಡಾದ ಸಂಶೋಧಕ ಜೇಮ್ಸ್ ಪೀಬಲ್ಸ್ ಅವರಿಗೆ ನೊಬೆಲ್ ಪ್ರಶಸ್ತಿ ಒಲಿದಿರುವುದು ವಿಶ್ವದಾದ್ಯಂತ ಭೌತ ಶಾಸ್ತ್ರಜ್ಞರ ಸಂತಸಕ್ಕೆ ಕಾರಣವಾಗಿದೆ.
ಎರಡು ದಶಕಗಳಲ್ಲಿ ಜೇಮ್ಸ್ ಪೀಬಲ್ಸ್ ಅಭಿವೃದ್ಧಿಪಡಿಸಿದ ಸೈದ್ಧಾಂತಿಕ ಮಾದರಿ ಬಿಗ್ ಬ್ಯಾಂಗ್ ಥಿಯರಿ, ಬ್ರಹ್ಮಾಂಡದ ಇತಿಹಾಸದ ಕುರಿತಾದ ಆಧುನಿಕ ತಿಳುವಳಿಕೆಗೆ ಅಡಿಪಾಯವಾಗಿದೆ.
ಅದರಂತೆ ಸೌರ ಮಾದರಿ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸೋಪ್ಲ್ಯಾನೆಟ್(ಸೌರಮಂಡಲದ ಹೊರಗಿನ ಗ್ರಹ) ಆವಿಷ್ಕಾರಕ್ಕಾಗಿ ಸ್ವಿಡ್ಜರಲ್ಯಾಂಡ್’ನ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ ಈ ಸಾಲಿನ ಪ್ರತಿಷ್ಟಿತ ನೊಬೆಲ್ ಪ್ರಶಸ್ತಿ ಲಭಿಸಿದೆ.
1995ರಲ್ಲಿ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಸೇರಿ ಸೌರಮಂಡಲದ ಆಚೆಗಿನ ಮೊದಲ ಗ್ರಹವನ್ನು ಕಂಡುಹಿಡಿದಿದ್ದು, ಅದೊಂದು ಸೌರ ಮಾದರಿಯ ನಕ್ಷತ್ರದ ಸುತ್ತ ಪರಿಭ್ರಮಿಸುತ್ತಿರುವುದನ್ನು ಇಬ್ಬರೂ ಸಂಶೋಧಕರು ಪತ್ತೆ ಹಚ್ಚಿದ್ದರು.