ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!
ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣ| ಪ್ರಕರಣದ ಪ್ರತಿದಿನದ ವಿಚಾರಣೆ ಅಂತ್ಯಗೊಳಿಸಿದ ಸುಪ್ರೀಂಕೋರ್ಟ್| ಅಯೋಧ್ಯೆ ಪ್ರಕರಣದ ಪ್ರತಿದಿನದ ವಿಚಾರಣೆಗೆ ಇತಿಶ್ರೀ| ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ ಹಿಂದೂ ಮಹಾಸಭಾ ಅರ್ಜಿ ತಿರಸ್ಕರಿಸಿದ ಸಿಜೆಐ| ಪ್ರಕರಣವನ್ನು ಮತ್ತಷ್ಟು ದಿನಗಳ ಕಾಲ ಜೀವಂತವಾಗಿಡಲು ಸಾಧ್ಯವಿಲ್ಲ ಎಂದ ರಂಜನ್ ಗೊಗೋಯ್| ಕೊನೆ ದಿನದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹೈ ಡ್ರಾಮಾ| ಗೊಗೊಯ್ ನಿವೃತ್ತಿಗೂ (ನವೆಂಬರ್ 17೦)ಗೂ ಮೊದಲೇ ಪ್ರಕರಣದ ತೀರ್ಪು ಹೊರಬೀಳುವುದು ಖಚಿತ|
ನವದೆಹಲಿ(ಅ.16): ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಪ್ರತಿ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೊನೆಗೊಳಿಸಿದೆ.
ಇಂದು 40ನೇ ಹಾಗೂ ಅಂತಿಮ ದಿನದ ವಿಚಾರಣೆ ವೇಳೆ ಸಿಜೆಐ ರಂಜನ್ ಗಗೋಯ್, 'ಇಲ್ಲಿಗೆ ಸಾಕು..' ಎಂದು ಹೇಳುವ ಮೂಲಕ ಪ್ರತಿದಿನದ ವಿಚಾರಣೆಗೆ ತೆರೆ ಎಳೆದಿದ್ದಾರೆ.
ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೋರಿ ಹಿಂದೂ ಮಹಾಸಭಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿರುವ ಗಗೋಯ್, ಇನ್ನಷ್ಟು ದಿನಗಳ ಕಾಲ ಈ ಪ್ರಕರಣವನ್ನು ಜೀವಂತವಾಗಿಡಲು ಸುಪ್ರೀಂಕೋರ್ಟ್ ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಅಯೋಧ್ಯೆ ಪ್ರಕರಣದ ಅಂತಿಮ ದಿನದ ವಿಚಾರಣೆ ವೇಳೆ ಭಾರೀ ನಾಟಕೀಯ ಬೆಳವಣಿಗೆಗಳು ಘಟಿಸಿದ್ದು, ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು ನ್ಯಾಯಾಲಯದಲ್ಲಿ ಪ್ರದರ್ಶಿಸಿದ ಪುಸ್ತಕ ಹಾಗೂ ನಕ್ಷೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ರಾಜೀವ್ ಧವನ್ ಹರಿದು ಹಾಕಿದರು.
ರಾಜೀವ್ ಧವನ್ ವರ್ತನೆಯಿಂದ ಕೆಂಡಾಮಂಡಲವಾದ ಸಿಜೆಐ ರಂಜನ್ ಗೊಗೊಯ್, ತಾವು ನ್ಯಾಯಪೀಠದಿಂದ ಎದ್ದು ಹೊರ ನಡೆಯುವುದಾಗಿ ಗಂಭೀರ ಎಚ್ಚರಿಕೆ ಕೂಡ ನೀಡಿದರು. ಬಳಿಕ ರಾಜೀವ್ ಧವನ್ ತಮ್ಮ ವರ್ತನೆಗೆ ಕ್ಷಮೆ ಕೇಳಿದ ಪ್ರಸಂಗ ಕೂಡ ನಡೆಯಿತು.
ಸದ್ಯ ಅಯೋಧ್ಯೆ ಪ್ರಕರಣದ ಪ್ರತಿದಿನದ ವಿಚಾರಣೆ ಮುಗಿದಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತರಾಗುವ(ನವೆಂಬರ್ 17) ಮೊದಲು ತೀರ್ಪು ಹೊರ ಬೀಳುವುದು ಖಚಿತವಾಗಿದೆ.