ಇನಫ್ ಇಸ್ ಇನಫ್ ಎಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್| ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣ| ಪ್ರಕರಣದ ಪ್ರತಿದಿನದ ವಿಚಾರಣೆ ಅಂತ್ಯಗೊಳಿಸಿದ ಸುಪ್ರೀಂಕೋರ್ಟ್| ಇಂದು ಸಂಜೆ ಐದು ಗಂಟೆಗೆ ಅಯೋಧ್ಯೆ ಪ್ರಕರಣದ ಪ್ರತಿದಿನದ ವಿಚಾರಣೆ ಅಂತ್ಯ| ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ ಹಿಂದೂ ಮಹಾಸಭಾ ಅರ್ಜಿ ತಿರಸ್ಕರಿಸಿದ ಸಿಜೆಐ| ಪ್ರಕರಣವನ್ನು ಮತ್ತಷ್ಟು ದಿನಗಳ ಕಾಲ ಜೀವಂತವಾಗಿಡಲು ಸಾಧ್ಯವಿಲ್ಲ ಎಂದ ರಂಜನ್ ಗಗೋಯ್|
ನವದೆಹಲಿ(ಅ.16): 'Enough IS Enough..' ಹೀಗೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಉದ್ಗರಿಸಿದ್ದೇ ತಡ, ಇಡೀ ಸುಪ್ರೀಂಕೋರ್ಟ್ ಅಂಗಳದಲ್ಲಿ ದಿವ್ಯ ಮೌನ ಆವರಿಸಿತು.
ಹೌದು, ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಪ್ರತಿ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಸಂಜೆ 5 ಗಂಟೆಗೆ ಕೊನೆಗೊಳಿಸಲಿದೆ. ಇಂದು 40ನೇ ಹಾಗೂ ಅಂತಿಮ ದಿನದ ವಿಚಾರಣೆ ವೇಳೆ ಸಿಜೆಐ ರಂಜನ್ ಗಗೋಯ್, 'ಇಲ್ಲಿಗೆ ಸಾಕು..' ಎಂದು ಹೇಳುವ ಮೂಲಕ ಪ್ರತಿದಿನದ ವಿಚಾರಣೆಗೆ ತೆರೆ ಎಳೆದಿದ್ದಾರೆ.
ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೋರಿ ಹಿಂದೂ ಮಹಾಸಭಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿರುವ ಗಗೋಯ್, ಇನ್ನಷ್ಟು ದಿನಗಳ ಕಾಲ ಈ ಪ್ರಕರಣವನ್ನು ಜೀವಂತವಾಗಿಡಲು ಸುಪ್ರೀಂಕೋರ್ಟ್ ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, 2010ರ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಇದೇ ನವೆಂಬರ್ 4 ಅಥವಾ 5ರಂದು ಪ್ರಕಟವಾಗುವ ನಿರೀಕ್ಷೆಯಿದೆ.
ಇಲ್ಲಿಗೆ ಸಾಕು ಎಂಬ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ಮಾತು, ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ ಶೀಘ್ರ ಇತ್ಯರ್ಥದ ಆಶಾವಾದ ಮೂಡಿಸಿದೆ.
