ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಹಿಂಸಾತ್ಮಕ ಕೃತ್ಯ ಎಸಗಿದ್ದಾರೆ. ಜೈಲು ಅಧೀಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿ, ಸರ್ಕಾರಿ ಆಸ್ತಿಗೆ ಹಾನಿ ಮಾಡಿ, ಹಾಸಿಗೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾತ್ಮಕ ಘಟನೆ ಆತಂಕಕ್ಕೆ ಕಾರಣವಾಗಿದ್ದು, ವಿಚಾರಣಾಧೀನ ಕೈದಿಗಳು ಅವ್ಯವಸ್ಥೆ ಸೃಷ್ಟಿಸಿ ಜೈಲು ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿ ಹಾಗೂ ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಜೈಲು ಅಧೀಕ್ಷಕರಾದ ಶರಣಬಸಪ್ಪ ಅವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ವಿಚಾರಣಾಧೀನ ಕೈದಿ ಮೊಹಮ್ಮದ್ ಇಕ್ಬಾಲ್ ಅವರ ಕಚೇರಿಗೆ ಬಂದು ಆಕ್ರಮಣಕಾರಿ ಧೋರಣೆಯಲ್ಲಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೊಸದಾಗಿ ಜೈಲಿಗೆ ಬಂದ ಕೈದಿಗಳನ್ನು ತನ್ನ ಕೋಣೆಯಲ್ಲಿ ಇರಿಸಬೇಕು ಎಂದು ಅವನು ಒತ್ತಾಯಿಸಿದ್ದು, ಈ ಸಂಬಂಧ ಅವಾಚ್ಯ ಶಬ್ದಗಳನ್ನು ಬಳಸಿ ಅಧೀಕ್ಷಕರಿಗೆ ಬೆದರಿಕೆ ಹಾಕಿದ್ದಾನೆ. ತನ್ನ ಮಾತು ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿ ವಾರ್ನ್ ಮಾಡಿ ಆತಂಕ ಮೂಡಿಸಿದ್ದಾನೆ.

ಆಕ್ರಮಣಕಾರಿ ವರ್ತನೆ

ಅಧೀಕ್ಷಕರು ಹಾಗೂ ಸಿಬ್ಬಂದಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ಇಕ್ಬಾಲ್ ತನ್ನ ಆಕ್ರಮಣಕಾರಿ ವರ್ತನೆಯನ್ನು ಮುಂದುವರಿಸಿ, ದೂರುದಾರರ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಇದೇ ವೇಳೆ ಮತ್ತೊಬ್ಬ ವಿಚಾರಣಾಧೀನ ಕೈದಿ ಮೊಹಮ್ಮದ್ ಅಫ್ರೀದ್ ಕೂಡ ಅವನಿಗೆ ಕೈಜೋಡಿಸಿ, ಇಬ್ಬರೂ ಸೇರಿ ಜೈಲು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯನ್ನು ಬಳಸಿ ಹಲ್ಲೆಗೆ ಮುಂದಾಗಿದ್ದಾರೆ. ನಂತರ, ಆರ್‌ಒ ವಾಟರ್ ಫಿಲ್ಟರ್ ಯಂತ್ರ ಮತ್ತು ಪೈಪ್‌ಗಳಿಗೆ ಹಾನಿ ಮಾಡಿದ್ದು, ಸುಮಾರು ₹12,000 ಮೌಲ್ಯದ ಸರ್ಕಾರಿ ಆಸ್ತಿಗೆ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಹಾಸಿಗೆ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ ಆರೋಪಿ

ಇದರಿಂದ ಘಟನೆ ಇನ್ನಷ್ಟು ಗಂಭೀರ ಸ್ವರೂಪ ಪಡೆದಿದ್ದು, ‘ಎ’ ಬ್ಲಾಕ್‌ನ ಸೆಲ್ ಸಂಖ್ಯೆ 3ರಲ್ಲಿ ಇದ್ದ ಮತ್ತೊಬ್ಬ ವಿಚಾರಣಾಧೀನ ಕೈದಿ ಶೆಹರಾಜ್ ಅಲಿಯಾಸ್ ಶಾರುಖ್ ಸೆಲ್ ಒಳಗಿನ ಹಾಸಿಗೆ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಕಾರಂ ಬೋರ್ಡ್ ಅನ್ನು ಒಡೆದು ಅದರ ತುಂಡುಗಳನ್ನು ಇತರ ಕೈದಿಗಳಿಗೆ ನೀಡಿ, ಜೈಲು ಅಧಿಕಾರಿಗಳ ಮೇಲೆ ದಾಳಿ ಮಾಡಲು ಪ್ರಚೋದಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಒಟ್ಟಾರೆ, ಕೈದಿಗಳು ಸಮೂಹವಾಗಿ ಕಾರ್ಯನಿರ್ವಹಿಸಿ ಜೈಲು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು ಮಾತ್ರವಲ್ಲದೆ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಜೈಲು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.