ಮುಂಬೈ: ಸರ್ಕಾರವನ್ನು ಟೀಕಿಸಿದವರಿಗೆ ದೇಶವಿರೋಧಿ ಅಂತ ಪಟ್ಟ ಕಟ್ಟಲಾಗ್ತಿದೆ. ಆದರೆ ಒಬ್ಬರ ತಪ್ಪುಗಳನ್ನು ಅರ್ಥೈಸಿಕೊಳ್ಳಲು ಟೀಕೆ ಅನಿವಾರ್ಯ ಅಂತ ಹಿರಿಯ ನಟಿ ಶಬನಾ ಅಜ್ಮಿ ಹೇಳಿದ್ದಾರೆ. ಪದೇ ಪದೇ ಮೋದಿ ಸರ್ಕಾರವನ್ನು ಟೀಕಿಸುತ್ತಿರುವ ಬಾಲಿವುಡ್ ನಟಿ ಶಬನಾ ಟ್ರೋಲ್‌ಗೊಳಗಾಗಿದ್ದರು. ಇದೀಗ ಪ್ರತ್ಯುತ್ತರ ನೀಡೋ ಮೂಲಕ ಟ್ರೋಲಿಗರಿಗೆ ಶಬಾನಾ ತಿರುಗೇಟು ನೀಡಿದ್ದಾರೆ.

'ದೇಶದ ಅಭಿವೃದ್ಧಿಗೆ ತಪ್ಪುಗಳನ್ನು ಕಂಡಾಗ ಟೀಕಿಸೋದು ಅನಿವಾರ್ಯ. ಟೀಕೆ ಮಾಡದಿದ್ದರೆ ನಮ್ಮ ಸ್ಥಿತಿ ಸುಧಾರಿಸುವುದು ಸಾಧ್ಯವಿಲ್ಲ. ಆದರೆ ಇಂದು ಸರ್ಕಾರವನ್ನು ಟೀಕಿಸಿದ್ರೆ ದೇಶ ವಿರೋಧಿಗಳು ಅನ್ನೋ ಪಟ್ಟ ಕಟ್ಟಲಾಗುತ್ತದೆ. ನಾವು ಹೆದರಬಾರದು. ಯಾರಿಗೂ ಸರ್ಟಿಫಿಕೇಟಿನ ಅಗತ್ಯವಿಲ್ಲ' ಎಂದು ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಬನಾ ಹೇಳಿದ್ದರು. ಇಂದೋರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದಮೋಹನ್ ಮಥುರಾ ಚಾರಿಟೆಬಲ್ ಟ್ರಸ್ಟ್‌ ನೀಡುವ 'ಕುಂತಿ ಮಥುರಾ ಅವಾರ್ಡ್' ಸ್ವೀಕರಿಸಿದ ಶಬಾನಾ ನೀಡಿದ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ನಟಿ ಶಬಾನಾ 'ತುಕ್ಡೇ ತುಕ್ಡೇ' ಹಾಗೂ 'ಪ್ರಶಸ್ತಿ ವಾಪಸಿ'ಯ ಹೊಸ ನಾಯಕಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶಬಾನಾ ಹೇಳಿಕೆಯನ್ನು ಟೀಕಿಸಿದ್ದರು.

ತಮ್ಮ ಕುರಿತಾದ ಟ್ರೋಲ್'ಗೆ ಉತ್ತರಿಸಿ ಶಬನಾ ತಮ್ಮ ತಂದೆಯವರನ್ನೂ ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ ಸಚಿವರೊಬ್ಬರು 'ಉರ್ದು ಭಾಷೆಗೆ ಎರಡನೇ ಭಾಷಾ ಸ್ಥಾನಮಾನ ನೀಡಬೇಕೆಂದು ಕೇಳುವವರ ಮುಖಕ್ಕೆ ಮಸಿ ಹಚ್ಚಿ ಕತ್ತೆ ಮೇಲೆ ಮೆರವಣಿಗೆ ಮಾಡಿಸಬೇಕು ಅಂತ ಹೇಳಿದ್ದರು. ಇದನ್ನು ಖಂಡಿಸಿ ನನ್ನ ತಂದೆಯವರು ಪದ್ಮಶ್ರೀಯನ್ನು ಹಿಂದಿರುಗಿಸಿದ್ದರು' ಅಂತ ಹೇಳಿರೋ ಶಬನಾ ತಮ್ಮ ಸಿನಿಮಾ ಸಂಬಂಧ ನಡೆದ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ. 'ದೀಪಾ ಮೆಹ್ತಾ ಅವರ 'ವಾಟರ್' ಸಿನಿಮಾದಲ್ಲಿ ಬಾಲ್ಡ್‌ ಆಗಿ ಕಾಣಿಸಿಕೊಂಡಿದ್ದಕ್ಕೆ ನನಗೆದುರಾಗಿ ಫತ್ವಾ ಹೊರಡಿಸಿದ್ದರು. ನನ್ನ ಒಂದು ಹೇಳಿಕೆಗೆ ಇಷ್ಟೊಂದು ಪ್ರತಿಕ್ರಿಯೆಯಾ..? ಬಲಪಂಥೀಯ ಮುಸ್ಲಿಂ ಮುಖಂಡರ ಪಾಲಿಗೆ ನಾನಿಷ್ಟು ಪ್ರಾಮುಖ್ಯವೇ.. ಸಿನಿಮಾಕ್ಕಾಗಿ ತಲೆ ಬೋಳಿಸಿಕೊಂಡಿದ್ದಕ್ಕಾಗಿ ಫತ್ವಾ ಹೊರಡಿಸಿದ್ದರು' ಎಂದಿದ್ದಾರೆ.

 

'ದೇಶ ಯಾವಾಗ ಬಿಡುತ್ತೀರಿ'? ಶಬನಾ ಕಾಲೆಳೆದ ನೆಟ್ಟಿಗರು!