ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 5 ದಿನಗಳ ಜರ್ಮನಿ ಪ್ರವಾಸದಲ್ಲಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಅವರ ಐದನೇ ವಿದೇಶಿ ಪ್ರವಾಸವಾಗಿದ್ದು, ಸಂಸತ್ ಅಧಿವೇಶನದ ನಡುವೆ ಈ ಪ್ರವಾಸ ಕೈಗೊಂಡಿರುವುದು ಟೀಕೆಗೆ ಕಾರಣವಾಗಿದೆ. 

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕನೂ ಆಗಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ 5 ದಿನಗಳ ಪ್ರವಾಸಕ್ಕಾಗಿ ಜರ್ಮನಿಗೆ ತೆರಳಿದ್ದು, ಈ ಮೂಲಕ ಅವರು ಕಳೆದ ಆರು ತಿಂಗಳಲ್ಲಿ 5ನೇ ಬಾರಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಡಿಸೆಂಬರ್ 15 ರಿಂದ ಅಂದರೆ ಇಂದಿನಿಂದ ಡಿಸೆಂಬರ್‌ 20 ರವರೆಗೆ ಅವರು ಜರ್ಮನಿಯಲ್ಲಿ ಇರಲಿದ್ದು, ಈ ಭೇಟಿ ಸಮಯದಲ್ಲಿ ಅವರು ಜರ್ಮನಿಯ ಸರ್ಕಾರಿ ಅಧಿಕಾರಿಗಳು ಮತ್ತು ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ಕಳೆದ ಆರು ತಿಂಗಳಲ್ಲಿ ರಾಹುಲ್ ಗಾಂಧಿ ಅವರ ಐದನೇ ವಿದೇಶ ಪ್ರವಾಸ ಇದಾಗಿದೆ. ಇದಕ್ಕೂ ಮೊದಲು, ಜುಲೈ ಮತ್ತು ಸೆಪ್ಟೆಂಬರ್ ನಡುವೆ, ಅವರು ಲಂಡನ್, ಮಲೇಷ್ಯಾ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಪ್ರಸ್ತುತ ಡಿಸೆಂಬರ್ 1 ರಿಂದ 19 ರವರೆಗೆ ಭಾರತದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇದೇ ಸಮಯದಲ್ಲಿ ಅವರು ವಿದೇಶಿ ಪ್ರವಾಸ ಮಾಡುತ್ತಿದ್ದಾರೆ. ಸದನಕ್ಕೆ ಗೈರಾಗಿ ರಾಹುಲ್ ವಿದೇಶಕ್ಕೆ ಹೋಗುತ್ತಿರುವುದಕ್ಕೆ ಬಿಜೆಪಿ ಅವರನ್ನು ಟೀಕಿಸಿದೆ.

ಇದನ್ನೂ ಓದಿ: ಮೋದಿ ತೇರಿ ಖಬರ್ ಖುದೇಗಿ: ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರಿಂದ ಆಕ್ಷೇಪಾರ್ಹ ಘೋಷಣೆ

ಕಳೆದ 6 ತಿಂಗಳಲ್ಲಿ ರಾಹುಲ್ ಗಾಂಧಿ ಮಾಡಿದ ವಿದೇಶ ಪ್ರವಾಸಗಳು

  • ಮೊದಲನೇಯದಾಗಿ ಷ`ರಾಹುಲ್ ಗಾಂಧಿಯವರಿಗೆ ವಿದೇಶಿ ಪ್ರವಾಸ ಸರ್ವೇಸಾಮಾನ್ಯ ಎನಿಸಿ ಬಿಟ್ಟಿದೆ. ಕಳೆದ ಜೂನ್ 25 ರಿಂದ ಜುಲೈ 6ರವರೆಗೆ ರಾಹುಲ್ ಗಾಂಧಿ ಲಂಡನ್ (ಯುಕೆ) ಪ್ರವಾಸ ಮಾಡಿದ್ದರು. ಭದ್ರತಾ ಸಂಸ್ಥೆಗಳಿಂದ ಬಂದ ಪತ್ರದ ಮೂಲಕ ಈ ಮಾಹಿತಿ ಬೆಳಕಿಗೆ ಬಂದಿತು.
  • 2ನೇಯದಾಗಿ ಇದಾದ ನಂತರ ಸೆಪ್ಟೆಂಬರ್ 4 ರಿಂದ 8 ರವರೆಗೆ ರಾಹುಲ್ ಗಾಂಧಿ ಮಲೇಷ್ಯಾ ಪ್ರವಾಸ ಹೋಗಿದ್ದರು. ರಾಹುಲ್ ಅವರ ಈ ಪ್ರವಾಸವು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಯಿತು.
  • 3ನೇಯದಾಗಿ ಇದೇ ಸೆಪ್ಟೆಂಬರ್‌ನಲ್ಲಿ ಅವರು ದಕ್ಷಿಣ ಅಮೆರಿಕಾ ಪ್ರವಾಸ ಮಾಡಿದ್ದಾರೆ. ತಮ್ಮ ದಕ್ಷಿಣ ಅಮೆರಿಕಾ ಪ್ರವಾಸದ ಸಮಯದಲ್ಲಿ, ರಾಹುಲ್ ಗಾಂಧಿ ಬ್ರೆಜಿಲ್ ಮತ್ತು ಕೊಲಂಬಿಯಾ ಸೇರಿದಂತೆ ನಾಲ್ಕು ದೇಶಗಳ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ನಾಯಕರೊಂದಿಗೆ ಸಂವಾದ ನಡೆಸಿದ್ದರು. 

ರಾಹುಲ್ ಗಾಂಧಿಯವರ ಸರಣಿ ವಿದೇಶಿ ಭೇಟಿಯ ಹಿನ್ನೆಲೆ ಬಿಜೆಪಿ ಅವರನ್ನು ಪ್ರವಾಸೋದ್ಯಮದ ನಾಯಕ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿಯವರ ಜರ್ಮನಿ ಭೇಟಿ ವೇಳಾಪಟ್ಟಿ

ಜರ್ಮನಿಗೆ ತೆರಳಿರುವ ರಾಹುಲ್ ಗಾಂಧಿಯವರು ಡಿಸೆಂಬರ್ 17 ರಂದು ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನಡೆಯಲಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಅವರು ವಿವಿಧ ಯುರೋಪಿಯನ್ ರಾಷ್ಟ್ರಗಳ ಐಒಸಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಪಕ್ಷದ ಜಾಗತಿಕ ಸಂವಾದವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಐಒಸಿ ಬಣ್ಣಿಸಿದೆ.

ಇದಾದ ನಂತರ ರಾಹುಲ್ ಗಾಂಧಿ ಬರ್ಲಿನ್‌ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಐಒಸಿ ತಿಳಿಸಿದೆ. ಯುರೋಪಿನಾದ್ಯಂತ ಐಒಸಿಯ ಸ್ಥಳೀಯ ಘಟಕಗಳ ನಾಯಕರು, ಅನಿವಾಸಿ ಭಾರತೀಯರ ಸಮಸ್ಯೆಗಳು ಹಾಗೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮತ್ತು ಅದರ ಸಿದ್ಧಾಂತವನ್ನು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ರಾಮಕಥಾ ವಾಚಿಸುತ್ತಲೇ ಕೊನೆಯುಸಿರು: ಅಯೋಧ್ಯೆ ರಾಮಮಂದಿರ ಚಳುವಳಿಯ ಹಿರಿಯ ಸಂತ ಡಾ ರಾಮವಿಲಾಸ್ ದಾಸ್ ನಿಧನ

ರಾಹುಲ್ ಗಾಂಧಿ ಅವರಿಗೆ ಆತಿಥ್ಯ ನೀಡಲು ಹೆಮ್ಮೆಯೆನಿಸುತ್ತಿದೆ ಎಂದು ಐಒಸಿ ಆಸ್ಟ್ರಿಯಾದ ಅಧ್ಯಕ್ಷ ಔಸಾಫ್ ಖಾನ್ ಹೇಳಿದ್ದಾರೆ. ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸೇರಿದಂತೆ ಹಿರಿಯ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ರಾಹುಲ್ ಗಾಂಧಿಯ ವಿವಾದಾತ್ಮಕ ವಿದೇಶ ಪ್ರವಾಸಗಳು

  • ಕಳೆದ ಸೆಪ್ಟೆಂಬರ್‌ನಲ್ಲಿ ಬೋಸ್ಟನ್‌ನಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ, ಭಾರತೀಯ ಚುನಾವಣಾ ಆಯೋಗವೂ ರಾಜಕೀಯ ಪಕ್ಷದೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಮಹಾರಾಷ್ಟ್ರದಲ್ಲಿ ವಯಸ್ಕರ ಸಂಖ್ಯೆಗಿಂತ ಹೆಚ್ಚಿನ ಮತಗಳು ಚಲಾವಣೆಯಾಗಿವೆ ಎಂದ ಅವರು ಆಯೋಗ ಬಿಡುಗಡೆ ಮಾಡಿದ ಮತದಾನದ ಅಂಕಿ ಅಂಶಗಳನ್ನು ಪ್ರಶ್ನೆ ಮಾಡಿದ್ದರು.
  • ಅದಕ್ಕೂ ಮೊದಲು ಮೇ 2022 ರಲ್ಲಿ ಬ್ರಿಟನ್ ಪ್ರವಾಸದ ವೇಳೆ ರಾಹುಲ್ ಗಾಂಧಿ ಸಿಬಿಐ ಮತ್ತು ಇಡಿ ಬಗ್ಗೆ ಉಲ್ಲೇಖಿಸುತ್ತಾ ಭಾರತ ಸರ್ಕಾರವನ್ನು ಪಾಕಿಸ್ತಾನ ಸರ್ಕಾರಕ್ಕೆ ಹೋಲಿಸಿದರು. ಇದರಿಂಆಗಿ ವಿದೇಶದಲ್ಲಿ ರಾಹುಲ್ ಗಾಂಧಿ ಭಾರತದ ಮರ್ಯಾದೆ ಕಳೆದಿದ್ದಾರೆ ಎಂದು ಬಿಜೆಪಿ ಆರೋಪಿಸಿತು.
  • ಹಾಗೆಯೇ 2020ರ ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಅಜ್ಜಿಯನ್ನು ಭೇಟಿಯಾಗಲು ಇಟಲಿಗೆ ಪ್ರಯಾಣ ಬೆಳೆಸಿದರು ಮತ್ತು ಡಿಸೆಂಬರ್ 28 ರಂದು ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಭಾಗವಹಿಸಲಿಲ್ಲ. ಇದು ಕೂಡ ವಿವಾದಕ್ಕೆ ಕಾರಣವಾಯಿತು. ನಂತರ, ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಕೆಲವು ಕಾಂಗ್ರೆಸ್ ನಾಯಕರೇ ಈ ಸೋಲು ಅವರ ವಿದೇಶಿ ಪ್ರವಾಸದ ಫಲಿತಾಂಶ ಎಂದಿದ್ದರು. ಇಟಲಿಗೆ ಹೋಗಲು ಪಂಜಾಬ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶವನ್ನು ರದ್ದುಗೊಳಿಸಿದ ಆರೋಪವೂ ಅವರ ಮೇಲೆ ಕೇಳಿ ಬಂದಿತ್ತು.
  • 2019ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಸಿಎಎ ವಿರುದ್ಧ ಪ್ರಮುಖ ಪ್ರತಿಭಟನೆಗಳು ನಡೆಯುತ್ತಿದ್ದ ಸಮಯದಲ್ಲಿಯೇ ರಾಹುಲ್ ಗಾಂಧಿ ದಕ್ಷಿಣ ಕೊರಿಯಾಕ್ಕೆ ಪ್ರಯಾಣ ಬೆಳೆಸಿದರು, ಇದು ಕೂಡ ಕಾಂಗ್ರೆಸ್ಸಿನೊಳಗೆಯೇ ತೀವ್ರ ಟೀಕೆಗೆ ಕಾರಣವಾಯ್ತು.
  • ಇದಕ್ಕೂ ಮೊದಲು ಅಕ್ಟೋಬರ್ 2019ರಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಿಗೆ ಸುಮಾರು 15 ದಿನಗಳಿರುವಾಗ, ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದರು. ಇದು ಬ್ಯಾಂಕಾಕ್‌ಗೆ ವೈಯಕ್ತಿಕ ಪ್ರವಾಸ ಎಂದು ಬಿಜೆಪಿ ಟೀಕಿಸಿದರೆ ಅವರು ಧ್ಯಾನಕ್ಕಾಗಿ ಕಾಂಬೋಡಿಯಾಗೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಹೇಳಿತು.