7 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ಜೋರ್ಡಾನ್‌ಗೆ ಭೇಟಿ ನೀಡಿದ್ದು,ಈ ಭೇಟಿಯು ಭಾರತ-ಜೋರ್ಡಾನ್ ಸಂಬಂಧವನ್ನು ಬಲಪಡಿಸುವುದಲ್ಲದೆ, ಸ್ಥಗಿತಗೊಂಡಿದ್ದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಗೆ ಮರುಚಾಲನೆ ಸಿಗುವ ನಿರೀಕ್ಷೆಯಿದೆ.
7 ವರ್ಷಗಳ ನಂತರ ಜೋರ್ಡಾನ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು ಅವರಿಗೆ ಅಲ್ಲಿ ಭವ್ಯ ಸ್ವಾಗತ ಕೋರಲಾಯ್ತು. ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಜೋರ್ಡಾನ್ ಪ್ರಧಾನಿ ಜಾಫರ್ ಹಸನ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅಲ್ಲಿ ಮೋದಿ ಅವರನ್ನು ಗಾರ್ಡ್ ಆಫ್ ಆನರ್ ಮೂಲಕ ಸ್ವಾಗತಿಸಲಾಯ್ತು. ಅವರು ಕೊನೆಯ ಬಾರಿಗೆ 2018 ರಲ್ಲಿ ಜೋರ್ಡಾನ್‌ಗೆ ತೆರಳಿದ್ದರು.
ಜೋರ್ಡಾನ್ ರಾಜ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಜೋರ್ಡಾನ್ ಪ್ರವಾಸ ಹೋಗಿದ್ದು ಈ ಭೇಟಿ ಸಮಯದಲ್ಲಿ ಮೋದಿಯವರು, ಭಾರತ-ಜೋರ್ಡಾನ್ ನಡುವಣ ಸಂಬಂಧಗಳನ್ನು ಬಲಪಡಿಸುವತ್ತ ಗಮನಹರಿಸುವ ಮೂಲಕ ರಾಜ ಅಬ್ದುಲ್ಲಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ ಭೇಟಿ ನಡೆಯುತ್ತಿದೆ. ಜೋರ್ಡಾನ್‌ನಲ್ಲಿ ತಮ್ಮ ಮಾತುಕತೆಯ ನಂತರ ಪ್ರಧಾನಿ ಮೋದಿ ಡಿಸೆಂಬರ್ 16 ರಂದು ಅಂದರೆ ನಾಳೆ ಇಥಿಯೋಪಿಯಾಗೆ ಪ್ರಯಾಣಿಸಲಿದ್ದಾರೆ.
ಭಾರತವು ಜೋರ್ಡಾನ್‌ನಿಂದ 40% ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ
ಭಾರತವು ರಸಗೊಬ್ಬರಗಳಿಗೆ ಬೇಕಾಗುವ ರಾಕ್ ಫಾಸ್ಫೇಟ್ ಮತ್ತು ಇತರ ಕಚ್ಚಾ ವಸ್ತುಗಳನ್ನು ಜೋರ್ಡಾನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ.
ಪ್ರತಿಯಾಗಿ, ಜೋರ್ಡಾನ್ ಭಾರತದಿಂದ ಯಂತ್ರೋಪಕರಣಗಳು, ಪೆಟ್ರೋಲಿಯಂ ಉತ್ಪನ್ನಗಳು, ಧಾನ್ಯಗಳು, ರಾಸಾಯನಿಕಗಳು, ಮಾಂಸ, ವಾಹನ ಘಟಕಗಳು ಮತ್ತು ಕೈಗಾರಿಕಾ ಸರಕುಗಳನ್ನು ಖರೀದಿಸುತ್ತದೆ. ಭಾರತೀಯ ಕಂಪನಿಗಳು ಜೋರ್ಡಾನ್‌ನಲ್ಲಿ ಮುಖ್ಯವಾಗಿ ಫಾಸ್ಫೇಟ್ ಮತ್ತು ಜವಳಿ ಕ್ಷೇತ್ರಗಳಲ್ಲಿ 1.5 ಶತಕೋಟಿ ಡಾಲರ್‌ಗಳಿಗೂ ಹೆಚ್ಚಿನ ಹೂಡಿಕೆ ಮಾಡಿವೆ.
ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ
ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್ (IMEC)ಅನ್ನು ಮೊದಲು 2023 ರಲ್ಲಿ ಭಾರತದಲ್ಲಿ ನಡೆದ G20 ಶೃಂಗಸಭೆಯಲ್ಲಿ ಘೋಷಿಸಲಾಯಿತು. ಈ ಯೋಜನೆಯು ಭಾರತದಿಂದ ಸರಕುಗಳು ಮಧ್ಯಪ್ರಾಚ್ಯದ ಮೂಲಕ ಯುರೋಪ್ ಸಾಗಿಸಲು ಅನುಕೂಲ ಮಾಡಿಕೊಡುವ ಹೊಸ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗವನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.
ಭಾರತ ಮಾಡಲು ಬಯಸಿರುವ ಈ ಐಎಂಇಸಿಯನ್ನು ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (BRI)ಗೆ ಹೋಲಿಕೆ ಮಾಡಲಾಗುತ್ತದೆ. ಇದು 2013 ರಲ್ಲಿ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಅನ್ನು ವ್ಯಾಪಾರ ಮತ್ತು ಮೂಲ ಸೌಕರ್ಯದ ಮೂಲಕ ಸಂಪರ್ಕಿಸಲು ಪ್ರಾರಂಭಿಸಲಾದ ಚೀನಾದ ಜಾಗತಿಕ ಸಂಪರ್ಕ ಯೋಜನೆಯಾಗಿದೆ.
ಆದರೆ ಐಎಂಇಸಿ ಬಹಿರಂಗಗೊಂಡ ಕೇವಲ ಒಂದು ತಿಂಗಳ ನಂತರ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯು ಗಾಜಾ ಯುದ್ಧಕ್ಕೆ ನಾಂದಿ ಹಾಡಿತು. ಇದು ಯೋಜನೆಯ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತು. ಈಗ, ಸುಮಾರು ಎರಡು ವರ್ಷಗಳ ನಂತರ, ಗಾಜಾದಲ್ಲಿನ ಸಂಘರ್ಷವು ಅಂತ್ಯಗೊಂಡಿರುವುದರಿಂದ ಐಎಂಇಸಿ ಸುತ್ತಲಿನ ಚರ್ಚೆಗೆ ಮತ್ತೊಮ್ಮೆ ವೇಗ ಸಿಕ್ಕಿದೆ.
ಇದನ್ನೂ ಓದಿ: ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC)ಭಾರತವನ್ನು ಮಧ್ಯಪ್ರಾಚ್ಯದ ಮೂಲಕ ಯುರೋಪಿನೊಂದಿಗೆ ಸಂಪರ್ಕಿಸುತ್ತದೆ. ಇದು ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಕಾರಿಡಾರ್ ಭಾರತ, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್, ಗ್ರೀಸ್, ಇಟಲಿ, ಫ್ರಾನ್ಸ್, ಜರ್ಮನಿ, ಯುರೋಪಿಯನ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಿದೆ. ಈ ಯೋಜನೆಯಡಿಯಲ್ಲಿ, ಸರಕುಗಳು ಸಮುದ್ರ ಮಾರ್ಗಗಳು ಮತ್ತು ರೈಲು ಮಾರ್ಗಗಳ ಮಿಶ್ರಣದ ಮೂಲಕ ಚಲಿಸುತ್ತವೆ. ಈ ಯೋಜನೆಯ ಭಾಗವಾಗಿ ಸೌದಿ ಅರೇಬಿಯಾ ಈಗಾಗಲೇ 1,200 ಕಿ.ಮೀ. ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸಿದೆ. ಆದರೆ ಜೋರ್ಡಾನ್ ಮತ್ತು ಇಸ್ರೇಲ್ ನಡುವಿನ ರೈಲು ಸಂಪರ್ಕದ ನಿರ್ಮಾಣ ಇನ್ನೂ ಬಾಕಿ ಇದೆ.
ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್ (IMEC) ದಕ್ಷಿಣ ಏಷ್ಯಾವನ್ನು ನೇರವಾಗಿ ಯುರೋಪ್‌ನೊಂದಿಗೆ ಸಂಪರ್ಕಿಸುವ ಹೊಸ ಮತ್ತು ವೇಗವಾದ ವ್ಯಾಪಾರ ಮಾರ್ಗವೆಂದು ಪರಿಗಣಿಸಲಾಗುತ್ತಿದೆ. ಪ್ರಸ್ತುತ, ಭಾರತದಿಂದ ಯುರೋಪ್‌ಗೆ ಕಳುಹಿಸಲಾದ ಸರಕುಗಳು ಸೂಯೆಜ್ ಕಾಲುವೆ ಮತ್ತು ಕೆಂಪು ಸಮುದ್ರದ ಮೂಲಕ ಪ್ರಯಾಣಿಸುತ್ತವೆ. ಈ ಸಮುದ್ರ ಮಾರ್ಗವು ಉದ್ದವಾಗಿರುವುದಲ್ಲದೆ, ಹೆಚ್ಚು ದಟ್ಟಣೆಯಿಂದ ಕೂಡಿದ್ದು, ವಿಳಂಬಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: ಮೋದಿ ತೇರಿ ಖಬರ್ ಖುದೇಗಿ: ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರಿಂದ ಆಕ್ಷೇಪಾರ್ಹ ಘೋಷಣೆ
IMEC ಕಾರಿಡಾರ್‌ನ ಒಟ್ಟು ಉದ್ದ ಸುಮಾರು 6,000 ಕಿಲೋಮೀಟರ್‌ಗಳು. ಇದು ಭಾರತವನ್ನು ಯುಎಇ ಮತ್ತು ಯುರೋಪ್ ಅನ್ನು ಇಸ್ರೇಲ್‌ನೊಂದಿಗೆ ಸಂಪರ್ಕಿಸುವ 3,500 ಕಿಲೋಮೀಟರ್ ಸಮುದ್ರ ಮಾರ್ಗವನ್ನು ಒಳಗೊಂಡಿದೆ. ಯೋಜನೆಯಡಿಯಲ್ಲಿ, ಭಾರತದಿಂದ ಸರಕುಗಳನ್ನು ಮೊದಲು ಸಮುದ್ರದ ಮೂಲಕ ಯುಎಇ ಅಥವಾ ಸೌದಿ ಅರೇಬಿಯಾಕ್ಕೆ ಸಾಗಿಸಲಾಗುತ್ತದೆ. ಅಲ್ಲಿಂದ, ಸರಕುಗಳು ರೈಲಿನ ಮೂಲಕ ಜೋರ್ಡಾನ್ ಮತ್ತು ಇಸ್ರೇಲ್ ಮೂಲಕ ಸಾಗಿ ಯುರೋಪ್‌ಗೆ ತಲುಪುತ್ತದೆ.
ಅಟ್ಲಾಂಟಿಕ್ ಕೌನ್ಸಿಲ್ ವರದಿಯ ಪ್ರಕಾರ, ಈ ಕಾರಿಡಾರ್ ಕಾರ್ಯರೂಪಕ್ಕೆ ಬಂದ ನಂತರ, ಭಾರತ ಮತ್ತು ಯುರೋಪ್ ನಡುವಿನ ಸಾರಿಗೆ ಸಮಯದ ಸುಮಾರು 40% ರಷ್ಟು ಕಡಿಮೆ ಆಗಬಹುದು. ಸರಕುಗಳ ಸಾಗಣೆಯ ವೆಚ್ಚವು ಸಹ ಸುಮಾರು 30% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಜೋರ್ಡಾನ್ ರಾಜನನ್ನು ಭೇಟಿ ಮಾಡಲು ಶಿಷ್ಟಾಚಾರ ಮುರಿದಿದ್ದ ಮೋದಿ
ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಪ್ಯಾಲೆಸ್ಟೇನ್‌ಗೆ ಭೇಟಿ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ, ಭಾರತದಿಂದ ಪ್ಯಾಲೆಸ್ತೇನ್‌ಗೆ ನೇರ ವಿಮಾನ ಇರಲಿಲ್ಲ, ಆದ್ದರಿಂದ ಅವರ ವಿಮಾನ ಜೋರ್ಡಾನ್ ರಾಜಧಾನಿ ಅಮ್ಮನ್‌ನಲ್ಲಿ ಇಳಿಯಿತು. ಜೋರ್ಡಾನ್‌ನಲ್ಲಿ ಕೇವಲ ಎರಡು ಗಂಟೆಗಳ ಸಾರಿಗೆ ನಿಲುಗಡೆ ಮಾತ್ರ ಇತ್ತು. ಸಾಮಾನ್ಯವಾಗಿ, ಅಂತಹ ನಿಲುಗಡೆ ಔಪಚಾರಿಕ ಕಾರ್ಯವಿಧಾನಗಳಿಗೆ ಸೀಮಿತವಾಗಿರುತ್ತವೆ, ಆದರೆ ಜೋರ್ಡಾನ್ ರಾಜ ಅಬ್ದುಲ್ಲಾ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಸ್ವತಃ ವೈಯಕ್ತಿಕವಾಗಿ ವಿಮಾನ ನಿಲ್ದಾಣಕ್ಕೆ ಬಂದರು ಮತ್ತು ಇಬ್ಬರು ನಾಯಕರು ಅಲ್ಲಿ ಒಂದು ಸಣ್ಣ ಮಾತುಕತೆ ನಡೆಸಿದರು. ಸುಮಾರು 15 ದಿನಗಳ ನಂತರ, ಅಲ್ಲಿನ ರಾಜ ಅಬ್ದುಲ್ಲಾ ಭಾರತಕ್ಕೆ ಭೇಟಿ ನೀಡಿದರು. ಶಿಷ್ಟಾಚಾರವನ್ನು ಮುರಿದು, ಪ್ರಧಾನಿ ಮೋದಿ ಜೋರ್ಡಾನ್ ರಾಜನನ್ನು ಬರಮಾಡಿಕೊಳ್ಳಲು ಸ್ವತಃ ವಿಮಾನ ನಿಲ್ದಾಣಕ್ಕೆ ಹೋದರು ಇದು ಅವರ ಸಂಬಂಧಗಳಲ್ಲಿನ ಆತ್ಮೀಯತೆಯನ್ನು ಎತ್ತಿ ತೋರಿಸಿದೆ. ಈಗ, ಏಳು ವರ್ಷಗಳ ನಂತರ, ಪ್ರಧಾನಿ ಮೋದಿ ಮತ್ತೊಮ್ಮೆ ಜೋರ್ಡಾನ್‌ಗೆ ಭೇಟಿ ನೀಡಲಿದ್ದಾರೆ. ಇದು ಭಾರತ-ಜೋರ್ಡಾನ್ ಸಂಬಂಧಗಳಲ್ಲಿ ಮತ್ತೊಂದು ಮಹತ್ವದ ಕ್ಷಣವನ್ನು ಸೂಚಿಸುತ್ತಿದೆ.
ಜೋರ್ಡಾನ್ ರಾಜನನ್ನು ಪ್ರವಾದಿ ಮುಹಮ್ಮದ್ ವಂಶಸ್ಥರೆಂದು ನಂಬಲಾಗಿದೆ:
ಜೋರ್ಡಾನ್‌ನ ರಾಜ ಅಬ್ದುಲ್ಲಾ II ಅವರನ್ನು ಪ್ರವಾದಿ ಮುಹಮ್ಮದ್ ಅವರ ನೇರ ವಂಶಸ್ಥರೆಂದು ಪರಿಗಣಿಸಲಾಗಿದೆ. ಅವರ ಕುಟುಂಬ ವಂಶವು ಇಸ್ಲಾಮಿಕ್ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ವಂಶಗಳಲ್ಲಿ ಒಂದಾದ ಹ್ಯಾಶೆಮೈಟ್ ರಾಜವಂಶದಿಂದ ಬಂದಿದೆ. ಪ್ರವಾದಿ ಮುಹಮ್ಮದ್ ಮೆಕ್ಕಾದ ಖುರೈಶ್ ಬುಡಕಟ್ಟಿಗೆ ಸೇರಿದವರು. ಅದರ ಒಂದು ಶಾಖೆ ಬನು ಹಾಶಿಮ್, ಇದರಿಂದಲೇ ಹಶೆಮೈಟ್ ಕುಟುಂಬ ಹೊರಹೊಮ್ಮಿತು.


