ನವದೆಹಲಿ(ಆ.05): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ 370ನೇ ವಿಧಿ ಹಾಗೂ 35ಎ ಕಲಂನ್ನು ರದ್ದುಗೊಳಿಸುತ್ತಿರುವುದಾಗಿ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸುತ್ತಿದ್ದಂತೇ ಭಾರತದ ಮುಂದಿನ ಭವಿಷ್ಯಕ್ಕೆ ಇತಿಹಾಸ ಬರೆದಾಗಿತ್ತು.

ದೇಶವೊಂದರ ಇತಿಹಾಸದಲ್ಲಿ 70 ವರ್ಷಗಳ ಅವಧಿ ತುಂಬ ದೊಡ್ಡದೇನಲ್ಲ. ಆದರೆ ಒಂದು ನಿರ್ದಿಷ್ಟ ಕಾನೂನಿನಡಿಯಲ್ಲಿ ಬೆಳೆದ ಪೀಳಿಗೆಗೆ ಈ ಅವಧಿ ನಿಜಕ್ಕೂ ದೊಡ್ಡದು. ಕಾರಣ ಸಮಾಜದ ರೀತಿ ರಿವಾಜುಗಳನ್ನು ಒಪ್ಪಿಕೊಂಡು ಬೆಳೆದ ಮನಸ್ಸು ಅದನ್ನು ಒಪ್ಪಿಕೊಂಡಿರುತ್ತದೆ, ಅಪ್ಪಿಕೊಂಡಿರುತ್ತದೆ.

ಅದರಂತೆ ಸ್ವಾತಂತ್ರ್ಯಾನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ಆ ರಾಜ್ಯವನ್ನು ದೇಶದ ಇತರ ರಾಜ್ಯಗಳಿಂದ ಬೇರ್ಪಡಿಸಿದ ರೀತಿ ಹಾಗೂ ಅದನ್ನು ಒಪ್ಪಿಕೊಂಡೇ ಬೆಳೆದ ಒಂದು ಪೀಳಿಗೆಗೆ ಕೇಂದ್ರ ಸರ್ಕಾರದ ಇಂದಿನ ನಿರ್ಧಾರ ಕ್ರಾಂತಿಕಾರಕ ಎಂದು ಅನಿಸಿರಲಿಕ್ಕೆ ಸಾಕು.

ಸ್ವಾತಂತ್ರ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾದ ಕೆಂಡವಾಗಿ ಪರಿಣಮಿಸಿದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಭಾರತ ಮಾತೆಯ ಭೂಶಿಖರವನ್ನು ಭಾರತದಲ್ಲೇ ಉಳಿಯುವಂತೆ ಮಾಡಲಾಯಿತು.

ಆಗಿನ ಸಂದರ್ಭಕ್ಕೆ ವಿಶೇಷ ಸ್ಥಾನಮಾನ ಸರಿಯಾದ ಕ್ರಮ ಎಂದೆನಿಸಿದರೂ, ತದನಂತರ ಅದು ಸೃಷ್ಟಿಸಿದ ಅವಾಂತರ ಭಾರತದ ಇತರ ಭೂಭಾಗದಲ್ಲಿ ವಿಶೇಷ ಸ್ಥಾನಮಾನದ ಕುರಿತು ಅಸಮಾಧಾನ ಮೂಡುವಂತೆ ಮಾಡಿತು.

ವಿಶೇಷ ಸ್ಥಾನಮಾನವನ್ನೇ ದಾಳವನ್ನಾಗಿ ಮಾಡಿಕೊಂಡ ಅಲ್ಲಿನ ರಾಜಕೀಯ ಪಕ್ಷಗಳು, ಇದನ್ನು ಬಳಸಿಕೊಂಡೇ ಕೇಂದ್ರ ಸರ್ಕಾರವನ್ನು ಹೆದರಿಸಲು ಆರಂಭಿಸಿದವು. ಒಂದು ಕಡೆ ಪಾಕಿಸ್ತಾನದ ಹಸ್ತಕ್ಷೇಪ, ಮತ್ತೊಂದು ಕಡೆ ಪ್ರತ್ಯೇಕತಾವಾದಿಗಳ ದುಷ್ಟ ಯೋಜನೆಗಳು ಹಾಗೂ ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ ಒತ್ತಡಗಳಿಂದಾಗಿ ಕಾಶ್ಮೀರವನ್ನು ಸಂಭಾಳಿಸುವುದು ಕೇಂದ್ರ ಸರ್ಕಾರಗಳಿಗೆ ದುಸ್ತರವಾಗುತ್ತಾ ಹೋಗಿತು.

ಎಲ್ಲಾ ಕೇಂದ್ರ ಸರ್ಕಾರಗಳು ಸೂಕ್ಷ್ಮ ರಾಜ್ಯ ಎಂಬ ಆತಂಕದಲ್ಲಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾ ಎಲ್ಲದಕ್ಕೂ ತಲೆಯಾಡಿಸುತ್ತಾ ಬಹುಪರಾಕ್ ಹಾಕಲಾರಂಭಿಸಿದವು. ಇದರ ನೆರಳಲ್ಲೇ ಬೆಳೆಯುತ್ತಿದ್ದ ಉಗ್ರವಾದ ಕಣಿವೆ ರಾಜ್ಯವನ್ನು ಅಕ್ಷರಶಃ ರಕ್ತದ ಮಡುವಿನಲ್ಲಿ ತೇಲಿಸಿತು.

370 ಹಠಾವೋ ಕಾಶ್ಮೀರ್ ಬಚಾವೋ:

ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವಾಗಿದ್ದು, ಅದನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಅದನ್ನು ಭಾರತದ ಇತರ ರಾಜ್ಯಗಳಂತೆ ಪರಿಗಣಿಸಬೇಕು ಎಂದು ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ದೇಶದ ಎಲ್ಲಾ ಹಿಂದೂ ಪರ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು. 

ಅದರಂತೆ ಬಿಜೆಪಿ ಕೂಡ ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ದಶಕಗಳಿಂದ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡುತ್ತಲೇ ಬಂದಿತ್ತು.

ಅದರಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಹೊಸ ಇತಿಹಾಸ ಬರೆದಿದೆ. ವಿಶೇಷ ಸ್ಥಾನಮಾನ ರದ್ದುಗೊಳಿಸಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಧೈರ್ಯಕ್ಕೆ ಸದ್ಯ ಸಮನಾದುದು ಯಾವುದೂ ಇಲ್ಲ.

ಕೇಂದ್ರ ಸರ್ಕಾರದ ಈ ನಡೆ ಏನಿಲ್ಲವೆಂದರೂ ದೇಶದ ಸುಮಾರು  200  ವರ್ಷಗಳ ಭವಿಷ್ಯಕ್ಕೆ ಇತಿಹಾಸ ಬರೆದಿದೆ. ಮುಂದೆ ಬರಲಿರುವ ಹೊಸ ಪೀಳಿಗೆ ಕಾಶ್ಮೀರವನ್ನೂ ದೇಶದ ಇತರ ರಾಜ್ಯಗಳಂತೆ ಸಮನಾಗಿ ಕಾಣುವ ಮನೋಭಾವನೆ ಬೆಳೆಸಿಕೊಳ್ಳಲಿದೆ. ಈ ಮನೋಭಾವ ಅಖಂಡ ಭಾರತದ ಪರಿಕಲ್ಪನೆಗೆ ಮತ್ತು ಭಾರತದ ಸದೃಢ ಭವಿಷ್ಯಕ್ಕೆ ಉತ್ತಮ ಎಂದು ಹೇಳಬಹುದಾಗಿದೆ.