ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕೆಡವುತ್ತೇವೆ ಎಂದರೆ ನಾವು ಕೈಬಳೆ ತೊಟ್ಟು ಕುಳಿತಿದ್ದೀವಾ? ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಸವಾಲು ಹಾಕಿದರು.

ಮಂಡ್ಯ (ಡಿ. 05): ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿಯನ್ನು ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹೊರಗಿನವರು ಬಂದು ಸುಳ್ಳು ಹೇಳಿದ್ದಾರೆ. ಇವರು ಡಿಸೆಂಬರ್ 6 ಗೊತ್ತಾ, ಮಸೀದಿ ಕೆಡವಿಬಿಡುತ್ತೇವೆ ಎಂದರೆ, ನಾವು ಕೈಗೆ ಬಳೆ ಹಾಕಿಕೊಂಡು ಕೂತಿದ್ದೀವಾ? ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಖಾನ್ ಸವಾಲು ಹಾಕಿದ್ದಾರೆ. ಜೊತೆಗೆ, ಸಂಕೀರ್ತನ ಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಹಾಕುವಂತೆ ಪಟ್ಟು ಹಿಡಿದಿದ್ದಾರೆ.

ಶುಕ್ರವಾರದ ನಮಾಜ್‌ಗಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಅಬ್ದುಲ್ ರಜಾಕ್, ಜನದಟ್ಟಣೆ ಹೆಚ್ಚಾದ ಕಾರಣ ಪೊಲೀಸರ ಸೂಚನೆಯಂತೆ ನೇರವಾಗಿ ಠಾಣೆಗೆ ಆಗಮಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಕೀರ್ತನ ಯಾತ್ರೆ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಆಗಬೇಕು. ಅಲ್ಲಿವರೆಗೆ ನಾನು ಹೋಗುವುದಿಲ್ಲ. ಈವರೆಗೆ ಪ್ರಚೋದನೆ ಮಾಡಿದವರ ಮೇಲೆ ಎಫ್‌ಐಆರ್ ಯಾಕೆ ಹಾಕಿಲ್ಲ. ಇದರ ಬಗ್ಗೆ ನಾನು ಈಗಾಗಲೇ ದೂರು ಕೊಟ್ಟಿದ್ದೇನೆ. ಇಂದು ಶುಕ್ರವಾರ ನಮಾಜ್ ಇಲ್ಲಿಯೇ ಮಾಡಲು ಬಂದಿದ್ದೆ. ಅಲ್ಲಿ ಜನ ಜಾಸ್ತಿ ಇದ್ದರು ಅಂತ ನನ್ನನ್ನ ಠಾಣೆಗೆ ಬರಲು ಹೇಳಿದರು. ಈಗ ಠಾಣೆಗೆ ಬಂದಿದ್ದೇನೆ ಎಫ್‌ಐಆರ್ ಆಗಬೇಕು. ನಾನು ಶಾಂತಿ ಭಂಗ ಮಾಡಲು ಬಂದಿಲ್ಲ. ಇವರು ಎಫ್‌ಐಆರ್ ಮಾಡದಿದ್ದರೆ ಕೋರ್ಟ್ ಮೂಲಕ ಎಫ್‌ಐಆರ್ ಮಾಡಿಸುತ್ತೇನೆ ಎಂದು ತಿಳಿಸಿದರು.

ನಾವು ಕೈಗೆ ಬಳೆ ಹಾಕೊಂಡು ಕೂತಿದ್ದೀವಾ?

ನಾವು ಶ್ರೀರಂಗಪಟ್ಟಣಕ್ಕೆ ಬೆಂಕಿ‌ ಹಚ್ಚಲು ಬಂದಿಲ್ಲ. ಬೆಂಕಿ ಹಾರಿಸಲು ಬಂದಿದ್ದೇವೆ. ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಅವರ ಧಾರ್ಮಿಕ ಆಚರಣೆ. ಅದನ್ನು ಮಾಡಿಕೊಂಡರೆ ನಮ್ಮದೇನು ಅಭ್ಯಂತರ ಇಲ್ಲ. ಸ್ಥಳೀಯರು ಏನೂ ಮಾತಾಡಿಲ್ಲ, ಹೊರಗಿದ್ದ ಬಂದವರು ಪ್ರಚೋದನ ಭಾಷಣ ಮಾಡಿದ್ದಾರೆ. ಇದು ರಾಜಕಾರಣಕ್ಕಾಗಿ ನಡೆಯುತ್ತಿದೆ. ಇಲ್ಲಿ ಸಂಕೀರ್ತನಾ ಯಾತ್ರೆ ಮಾಡಿಕೊಂಡು ಹೋಗುವುದನ್ನು ಬಿಟ್ಟು, ಡಿಸೆಂಬರ್ 6 ಗೊತ್ತಾ, ಮಸೀದಿ ಕೆಡವಿ ಬಿಡುತ್ತೇವೆ ಎಂದರೆ ನಾವು ಕೈಗೆ ಬಳೆ ಹಾಕೊಂಡು ಕೂತಿದ್ದೀವಾ? ಎಂದು ಸವಾಲು ಹಾಕಿದರು.

ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಆಗಲೇಬೇಕು. ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಕೇಸ್ ಹಾಕಬೇಕಿತ್ತು. ಆದರೆ, ಅವರು ಹಾಕಿಲ್ಲ. ಕಳೆದ 250 ವರ್ಷಗಳಿಂದ ಶ್ರೀರಂಗಪಟ್ಟಣ ದಲ್ಲಿ ಜಾಮಿಯಾ ಮಸೀದಿ ಇದೆ. ನಾವು ದಸರಾ ವೇಳೆಯಲ್ಲಿ ಇಲ್ಲಿಗೆ ಬಂದು ಹೋಗುತ್ತಿದ್ದೆವು. ಇನ್ನು ಮೈಸೂರು ದಸರಾಕ್ಕೆ 400 ವರ್ಷದ ಇತಿಹಾಸ ಇದೆ. ಆದರೆ, ಇಲ್ಲಿ ದೇವಸ್ಥಾನ ಇತ್ತು ಎಂಬ ಇತಿಹಾಸ ದಾಖಲೆ ಇಲ್ಲ. ಬ್ರಿಟಿಷರಾಗಲಿ, ಮೈಸೂರು ಮಹಾರಾಜರಾಗಲಿ ಇದರ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ಮಾಹಿತಿ ನೀಡಿದರು.

ಹೈದರಾಲಿ ಜಾಮಿಯಾ ಮಸೀದಿ ಕಟ್ಟಿಸಿದ್ದು, ಟಿಪ್ಪು ಪೂರ್ಣಗೊಳಿಸಿದರು:

ಇದೇ ಶ್ರೀರಂಗಪಟ್ಟಣದಲ್ಲಿರುವ ಇನ್ನೊಂದು ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಆದರೆ, ಇದರ ಇತಿಹಾಸ ಯಾಕೆ‌ ಇಲ್ಲ. ಹಾಗಾಗಿ, ದೇವಸ್ಥಾನ ಹೊಡೆದು ಜಾಮಿಯಾ ಮಸೀದಿ ಕಟ್ಟಿದ್ದಾರೆ ಎಂಬುದು ಸುಳ್ಳು. ಜೊತೆಗೆ, ಟಿಪ್ಪು ಸುಲ್ತಾನ್ ಹಿಂದೂ ದೇವರ ಮಂದಿರ ಹೊಡೆದುಹಾಕಿ ಮಸೀದಿ ಕಟ್ಟಿಸಿದ್ದ ಎಂಬುದು ಸುಳ್ಳು. ಜಾಮಿಯಾ ಮಸೀದಿಯನ್ನು ಕಟ್ಟಿಸಲು ಆರಂಭಿಸಿದರು ಹೈದರ್ ಅಲಿ, ಆದರೆ ಅದನ್ನು ಪೂರ್ಣ ಮಾಡಿದ್ದು ಟಿಪ್ಪು ಸುಲ್ತಾನ್. ಒಂದು ವೇಳೆ ಮಸೀದಿ ಜಾಗದಲ್ಲೇನಾದರೂ ಮಂದಿರ ಇದ್ದಿದ್ದರೆ ಮೈಸೂರಿನ ಒಡೆಯರ್ ಅವರು ಸುಮ್ಮನೆ ಇರುತ್ತಿದ್ದರಾ? ಎಂದು ಪ್ರಶ್ನಿಸಿದರು. ಇನ್ನು ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ನಾನು ಇಲ್ಲಿಂದ ಹೋಗುತ್ತೇನೆ ಎಂದು ಅಬ್ದುಲ್ ರಜಾಕ್ ಹೇಳಿದರು.