ಶ್ರೀನಗರ[ಆ.05]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ಹಾಗೂ 35 (ಎ) ಪರಿಚ್ಛೇದಗಳನ್ನು ರದ್ದುಗೊಳಿಸುವ ಮತ್ತು ಕಣಿವೆ ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಆ ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಚಿತ್ರಣವೇ ಬದಲಾಗುವುದು ಖಚಿತವಾಗಿದೆ. ಸರ್ಕಾರದ ನಿರ್ಧಾರದಿಂದ ಪ್ರಮುಖವಾಗಿ 9 ಮಹಾ ಬದಲಾವಣೆಗಳನ್ನು ಕಾಣಬಹುದಾಗಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಐತಿಹಾಸಿಕ ನಿರ್ಣಯ

1. ಕಾಶ್ಮೀರದಲ್ಲಿ ನೀವೂ ಆಸ್ತಿ ಖರೀದಿಸಬಹುದು

ಜಮ್ಮು-ಕಾಶ್ಮೀರದಿಂದ ಹೊರಗಿರುವ ವ್ಯಕ್ತಿಗಳು ಕಣಿವೆ ರಾಜ್ಯದಲ್ಲಿ ಆಸ್ತಿ ಖರೀದಿಸುವುದಕ್ಕೆ ಹಾಗೂ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಪಡೆಯುವುದಕ್ಕೆ ಸಂವಿಧಾನದ ಪರಿಚ್ಛೇದ 35 (ಎ) ನಿರ್ಬಂಧ ಹೇರುತ್ತಿತ್ತು. ಅದನ್ನೇ ಈಗ ಸರ್ಕಾರ ರದ್ದುಗೊಳಿಸಿದೆ. ಹೀಗಾಗಿ ಇನ್ನು ಮುಂದೆ ಭಾರತದ ಯಾವುದೇ ನಾಗರಿಕರು ಕೂಡ ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಬಹುದು. ಹಣ ಹೂಡಿಕೆ ಮಾಡಿ ಕಾರ್ಖಾನೆ, ಕಂಪನಿಗಳನ್ನು ಸ್ಥಾಪಿಸಬಹುದು. ಅಲ್ಲಿ ಸರ್ಕಾರಿ ಉದ್ಯೋಗ ಖಾಲಿ ಇದ್ದರೆ ಅರ್ಜಿ ಹಾಕಿ, ಸಿಕ್ಕರೆ ಸೇರಿಕೊಳ್ಳಬಹುದು. ಕಾಶ್ಮೀರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಬಹುದು. 35 (ಎ) ತೆರವಿನಿಂದಾಗಿ ಕಾಶ್ಮೀರದಲ್ಲಿನ ಜನಸಂಖ್ಯಾ ಚಿತ್ರಣವೇ ಬದಲಾಗುವ ನಿರೀಕ್ಷೆ ಇದೆ. ಜಮ್ಮು- ಕಾಶ್ಮೀರದ ಜಮ್ಮು ಭಾಗದಲ್ಲಿ ಹಿಂದುಗಳು ಹೆಚ್ಚಿದ್ದರೆ, ಕಾಶ್ಮೀರ ಮುಸ್ಲಿಂ ಬಾಹುಳ್ಯದ ಪ್ರದೇಶ. 35 (ಎ) ರದ್ದತಿಯಿಂದಾಗಿ ಬೇರೆ ಬೇರೆ ರಾಜ್ಯದ ಜನರು ಅಲ್ಲಿ ಹೋಗಿ ನೆಲೆಸಿದರೆ ಒಂದು ಸಮುದಾಯದ ಬಾಹುಳ್ಯ ಕೊನೆಗಾಣುವ ಸಾಧ್ಯತೆ ಇದೆ. ಇದರಿಂದ ಕಾಶ್ಮೀರದ ಸಂಪೂರ್ಣ ಚಹರೆಯೇ ಬದಲಾಗುವ ನಿರೀಕ್ಷೆ ಇದೆ.

2. ಎಲ್ಲ ಕಾಯ್ದೆ, ಕಾನೂನು ಅನ್ವಯ

ಸಂವಿಧಾನದ 370ನೇ ವಿಧಿಯಿಂದಾಗಿ ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಹಾಗೂ ಸಂಪರ್ಕ ಹೊರತುಪಡಿಸಿ ಉಳಿದ ಕಾನೂನುಗಳು ಜಮ್ಮು-ಕಾಶ್ಮೀರದಲ್ಲಿ ನೇರವಾಗಿ ಜಾರಿಯಾಗುತ್ತಿರಲಿಲ್ಲ. ಇದಲ್ಲದೆ ಆ ರಾಜ್ಯದಲ್ಲಿ ಪೌರತ್ವ, ಆಸ್ತಿ ಮಾಲೀಕತ್ವ ಹಾಗೂ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನುಗಳೇ ಇದ್ದವು. ದೇಶ ವ್ಯಾಪಿ ಜಾರಿಗೆಂದು ಕೇಂದ್ರ ಸರ್ಕಾರ ರೂಪಿಸಿ, ಸಂಸತ್ತಿನಲ್ಲಿ ಅಂಗೀಕರಿಸಿದ ಮಸೂದೆ ಯಥಾವತ್‌ ಜಾರಿಗೆ ಬರುತ್ತಿರಲಿಲ್ಲ. ಜಮ್ಮು-ಕಾಶ್ಮೀರ ಸರ್ಕಾರ ಅದನ್ನು ಹೊಸದಾಗಿ ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಬೇಕಾಗಿತ್ತು. ಇನ್ನು ಮುಂದೆ ಅದಕ್ಕೆಲ್ಲಾ ತೆರೆ ಬೀಳಲಿದೆ. ಜಮ್ಮು-ಕಾಶ್ಮೀರದ ದೇಶದ ಇತರೆ ರಾಜ್ಯಗಳಂತೆ ಆಗಲಿದೆ. ದೇಶದಲ್ಲಿರುವ ಎಲ್ಲ ಕಾನೂನುಗಳು ಅಲ್ಲಿಯೂ ಅನ್ವಯವಾಗುತ್ತವೆ.

3. ಕಾಶ್ಮೀರ ಇನ್ನು ದಿಲ್ಲಿ/ಪುದುಚೇರಿ ರೀತಿ ರಾಜ್ಯ

ಜಮ್ಮು-ಕಾಶ್ಮೀರ ರಾಜ್ಯವನ್ನು ವಿಭಜಿಸಿ, ಲಡಾಕ್‌ ಪ್ರಾಂತ್ಯವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರವು ವಿಧಾನಸಭೆ ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಅಂದರೆ ದೆಹಲಿ ಹಾಗೂ ಪುದುಚೇರಿ ಸಾಲಿಗೆ ಇದು ಕೂಡ ಸೇರ್ಪಡೆಯಾಗಲಿದೆ. ದಿಯು- ದಮನ್‌ನಂತೆ ಮತ್ತೊಂದು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಲಡಾಕ್‌ಗೆ ಲಭ್ಯವಾಗಲಿದೆ. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಲಡಾಕ್‌ ಅತಿದೊಡ್ಡ ಪ್ರಾಂತ್ಯವಾಗಿದ್ದರೂ ಜನಸಂಖ್ಯೆ ತೀರಾ ಕಡಿಮೆ. ಹಿಂದುಳಿದಿದೆ. ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡುವುದರಿಂದ ಆ ಪ್ರಾಂತ್ಯದ ನಿಯಂತ್ರಣ ಕೇಂದ್ರದ ಸುಪರ್ದಿಗೆ ಬರುತ್ತದೆ. ರಾಜ್ಯ ಸರ್ಕಾರದ ಹಂಗು ಇಲ್ಲದೇ ನೇರವಾಗಿ ಕೇಂದ್ರ ಸರ್ಕಾರವೇ ಅಭಿವೃದ್ಧಿ ಮಾಡಬಹುದು. ಇನ್ನು ಜಮ್ಮು-ಕಾಶ್ಮೀರದಲ್ಲಿ ಜನರಿಂದ ಮುಖ್ಯಮಂತ್ರಿ ಆಯ್ಕೆಯಾದರೂ ಲೆಫ್ಟಿನಂಟ್‌ ಗವರ್ನರ್‌ ಬಳಿ ಹೆಚ್ಚಿನ ಅಧಿಕಾರವಿರುತ್ತದೆ. ದೆಹಲಿ ಹಾಗೂ ಪುದುಚೇರಿ ರೀತಿ ಅಲ್ಲೂ ಉಪರಾಜ್ಯಪಾಲ- ಮುಖ್ಯಮಂತ್ರಿ ನಡುವೆ ಮುಂದಿನ ದಿನಗಳಲ್ಲಿ ಸಂಘರ್ಷ ಏರ್ಪಟ್ಟರೂ ಏರ್ಪಡಬಹುದು.

4. ರಾಜಕೀಯ ಚಿತ್ರಣವೇ ಬದಲು

ವಿಶೇಷ ಸ್ಥಾನಮಾನವನ್ನು ಜಮ್ಮು-ಕಾಶ್ಮೀರ ಕಳೆದುಕೊಂಡಿರುವುದರಿಂದ ದೇಶದ ಎಲ್ಲ ಕಾನೂನುಗಳು ಅಲ್ಲಿಗೂ ಅನ್ವಯವಾಗಲಿವೆ. ಹೀಗಾಗಿ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿಗೊಳಿಸಬೇಕಾಗುತ್ತದೆ. ಮುಸ್ಲಿಂ ಬಾಹುಳ್ಯದ ಕಾಶ್ಮೀರದಲ್ಲೂ ಎಸ್ಸಿ, ಎಸ್ಟಿಮೀಸಲು ಕ್ಷೇತ್ರಗಳನ್ನು ಘೋಷಿಸಲಾಗುತ್ತದೆ. ಹೀಗಾದಲ್ಲಿ ರಾಜಕೀಯ ಲೆಕ್ಕಾಚಾರಗಳು ಏರುಪೇರಾಗುತ್ತವೆ. ಸರ್ಕಾರ ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಕಾಶ್ಮೀರಕ್ಕಿಂತ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳು ಜಮ್ಮುವಿನಲ್ಲೇ ಇರುವಂತೆ ನೋಡಿಕೊಂಡರೆ ಕಣಿವೆ ರಾಜ್ಯ ಮೊದಲ ಹಿಂದು ಹಾಗೂ ಕಾಶ್ಮೀರೇತರ ಮುಖ್ಯಮಂತ್ರಿಯನ್ನು ಕಾಣುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

5. ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆ

ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ದೇಶದಲ್ಲಿ ಸದ್ಯ ಇರುವ ರಾಜ್ಯಗಳ ಸಂಖ್ಯೆ 29ರಿಂದ 28ಕ್ಕೆ ಇಳಿಕೆಯಾಗಲಿದೆ. ಹಾಲಿ 7 ಕೇಂದ್ರಾಡಳಿತ ಪ್ರದೇಶಗಳಿದ್ದು, ಅವುಗಳ ಸಂಖ್ಯೆ 9ಕ್ಕೇರಲಿದೆ. ಈ ಪೈಕಿ ವಿಧಾನಸಭೆ ಹೊಂದಿದ ಕೇಂದ್ರಾಡಳಿತ ಪ್ರದೇಶಗಳೆಂದರೆ ದೆಹಲಿ ಹಾಗೂ ಪುದುಚೇರಿ ಮಾತ್ರ. ಆ ಸಾಲಿಗೆ ಕಾಶ್ಮೀರ ಕೂಡ ಸೇರ್ಪಡೆಯಾಗಲಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ, ದಮನ್‌ ಮತ್ತು ದಿಯು ಹಾಗೂ ಲಕ್ಷದ್ವೀಪ ಕೂಡ ಕೇಂದ್ರಾಡಳಿತ ಪ್ರದೇಶಗಳೇ. ಅಲ್ಲಿ ವಿಧಾನಸಭೆ ಇಲ್ಲ.

6. ವಿಧಾನಸಭೆ ಅವಧಿ 6 ಅಲ್ಲ, ಇನ್ನು ಐದೇ ವರ್ಷ

ವಿಶೇಷ ಸ್ಥಾನಮಾನ ಹೊಂದಿದ್ದ ಕಾರಣಕ್ಕಾಗಿ ಜಮ್ಮು-ಕಾಶ್ಮೀರದ ವಿಧಾನಸಭೆ ಅವಧಿ 6 ವರ್ಷಗಳನ್ನು ಹೊಂದಿರುತ್ತಿತ್ತು. ಭಾರತೀಯ ಸಂವಿಧಾನ ವಿಸ್ತರಣೆಯಾಗಿರುವ ಕಾರಣ ಅಲ್ಲಿನ ವಿಧಾನಸಭೆ ಅವಧಿ ದೇಶದ ಇತರೆ ರಾಜ್ಯಗಳ ವಿಧಾನಸಭೆಗಳಂತೆ 5 ವರ್ಷಕ್ಕೇ ಅಂತ್ಯವಾಗಲಿದೆ. ರಾಜ್ಯಪಾಲರ ಬದಲಾಗಿ ಉಪರಾಜ್ಯಪಾಲರು ನೇಮಕಗೊಳ್ಳಲಿದ್ದಾರೆ.

7. ಕಾಶ್ಮೀರೇತರರನ್ನು ವಿವಾಹವಾದ ಹೆಣ್ಮಕ್ಕಳಿಗೂ ಆಸ್ತಿ ಹಕ್ಕು

ಕಾಶ್ಮೀರೇತರ ವ್ಯಕ್ತಿಗಳನ್ನು ವಿವಾಹವಾದ ಮಹಿಳೆಯರಿಗೆ ಕಾಶ್ಮೀರದಲ್ಲಿನ ಆಸ್ತಿ ಹಕ್ಕನ್ನು ಪರಿಚ್ಛೇದ 35 (ಎ) ನಿರಾಕರಿಸುತ್ತಿತ್ತು. ಅದು ಈಗ ರದ್ದಾಗಿರುವುದರಿಂದ ದೇಶದ ಉಳಿದ ಹೆಣ್ಣುಮಕ್ಕಳಂತೆ ಕಾಶ್ಮೀರಿ ಮಹಿಳೆಯರಿಗೂ ತಮ್ಮ ಪೋಷಕರ ಆಸ್ತಿಯಲ್ಲಿ ಹಕ್ಕು ಲಭಿಸಲಿದೆ. ಜತೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ)ಗೆ ಪರಾರ‍ಯಯವಾಗಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ರಣಬೀರ್‌ ದಂಡ ಸಂಹಿತೆ ಅಸ್ತಿತ್ವ ಕಳೆದುಕೊಳ್ಳಲಿದೆ.

8. ಪ್ರತ್ಯೇಕ ಧ್ವಜ, ಸಂವಿಧಾನ ರದ್ದು

ವಿಶೇಷ ಸ್ಥಾನಮಾನ ಹೊಂದಿರುವ ಕಾರಣಕ್ಕೆ ರಾಷ್ಟ್ರ ಧ್ವಜದ ಜತೆಗೆ ಜಮ್ಮು-ಕಾಶ್ಮೀರ ತನ್ನದೇ ಆದ ಪ್ರತ್ಯೇಕ ಧ್ವಜವನ್ನೂ ಹೊಂದಿದೆ. ಇದರ ಜತೆಗೆ ಪ್ರತ್ಯೇಕ ಸಂವಿಧಾನವೂ ಇದೆ. ಇನ್ನು ಮುಂದೆ ಅವುಗಳ ಅಸ್ತಿತ್ವ ರದ್ದಾಗಲಿದೆ.

9. ಕಾನೂನು- ಸುವ್ಯವಸ್ಥೆ ಕೇಂದ್ರ ಸರ್ಕಾರ ಕೈಗೆ

ಕಾನೂನು- ಸುವ್ಯವಸ್ಥೆ ಎಂಬುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಆದ ಕಾರಣ ಈವರೆಗೆ ಜಮ್ಮು-ಕಾಶ್ಮೀರ ಪೊಲೀಸರು ಅಲ್ಲಿನ ರಾಜ್ಯ ಸರ್ಕಾರದ ಆದೇಶದ ಅನುಸಾರ ನಡೆದುಕೊಳ್ಳುತ್ತಿದ್ದರು. ವಿಧಾನಸಭೆ ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು-ಕಾಶ್ಮೀರ ರೂಪುಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾನೂನು- ಸುವ್ಯವಸ್ಥೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ನಿರ್ವಹಿಸುವ ಸಾಧ್ಯತೆ ಇದೆ. ಪುದುಚೇರಿಯಲ್ಲಿ ಕಾನೂನು- ಸುವ್ಯವಸ್ಥೆಯನ್ನು ಅಲ್ಲಿನ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದ್ದರೆ, ದೆಹಲಿಯಲ್ಲಿ ಕೇಂದ್ರ ಸರ್ಕಾರ ಅದರ ಹೊಣೆ ಹೊತ್ತಿದೆ. ಜಮ್ಮು-ಕಾಶ್ಮೀರ ಸೂಕ್ಷ್ಮ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮಾದರಿಯನ್ನೇ ಅನುಸರಿಸುವ ಸಾಧ್ಯತೆ ಇದೆ.

ಕಾಶ್ಮೀರದಲ್ಲಿ ಅಲ್ಲೋಲ ಕಲ್ಲೋಲ; ಮೋದಿ ಶಾ ತಂತ್ರವೇನು?

ಏನಿದು 35ಎ?

ಜಮ್ಮು-ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವ ಕಲಂ ಇದಾಗಿದೆ. 35-ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ ರಾಜ್ಯದ ಹೊರಗಿನವರನ್ನು ವಿವಾಹವಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ.

ಆದರೆ ಅಲ್ಲಿನ ಪುರುಷ ಹೊರರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕಿಗೆ ಯಾವುದೇ ಧಕ್ಕೆ ಬರುವುದಿಲ್ಲ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತವೆ. ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ.

ಕಾಶ್ಮೀರದಲ್ಲಿ ಮಧ್ಯರಾತ್ರಿ ನಿಷೇಧಾಜ್ಞೆ, ಇಂಟರ್ನೆಟ್ ಸ್ಥಗಿತ, ಒಮರ್, ಮುಫ್ತಿಗೆ ದಿಗ್ಭಂಧನ!

ಆದರೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಜಮ್ಮು ಕಾಶ್ಮೀರದಲ್ಲಿ ಭಾರತಕ್ಕೆ ಅನ್ವಯವಾಗುವ ಕಾನೂನೇ ಜಾರಿಯಾಗಲಿದೆ. ಸುಗ್ರೀವಾಜ್ಞೆಯಿಂದ ಯಾವುದೇ ಹಿಂಸಾಚಾರ ನಡೆಯಬಾರದೆಂಬ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಕಣಿವೆ ರಾಜ್ಯದಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ.