ಶೂನ್ಯ ಸಾಲ, ಅತಿಯಾದ ಅಲಂಕಾರ ಇದ್ಯಾವುದೂ ಇಲ್ಲದೆ ಇಂಡಿಗೋ ಇಲ್ಲಿಯವರೆಗೂ ಲಾಭದತ್ತ ಮುಖ ಮಾಡಿತ್ತು. ಆದರೆ ಹೊಸ FDTL ನಿಯಮಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳು ಅದರ ಹಿಂದಿನ ಶಕ್ತಿಯನ್ನು ಪ್ರಶ್ನಿಸುತ್ತಿವೆ. ಟಾಟಾ ಏರ್ ಇಂಡಿಯಾಕ್ಕೆ ಹೊಸ ಜೀವ ನೀಡಿದೆ, ಆದರೆ ಅದು ಇನ್ನೂ ಬಹಳ ದೂರ ಸಾಗಬೇಕಾಗಿದೆ.
ಬೆಂಗಳೂರು (ಡಿ.5): ಭಾರತೀಯ ವಾಯುಯಾನ ಕ್ಷೇತ್ರದಲ್ಲಿನ ಅತ್ಯಂತ ಹಳೆಯ ಜೋಕ್ ಈಗಲೂ ಕೂಡ ಪ್ರಸ್ತುತ. "ನೀವು ಬೇಗನೆ ಸಣ್ಣ ಸಂಪತ್ತನ್ನು ಗಳಿಸಲು ಬಯಸಿದರೆ, ದೊಡ್ಡ ವಿಮಾನಗಳೊಂದಿಗೆ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಿ." ಇದಕ್ಕೆ ಒಂದು ಕಾರಣವಿದೆ. 1991 ರಲ್ಲಿ ಉದಾರೀಕರಣದ ನಂತರ, ಭಾರತವು ಕನಿಷ್ಠ ಎರಡು ಡಜನ್ ವಿಮಾನಯಾನ ಸಂಸ್ಥೆಗಳನ್ನು ಸಮಾಧಿ ಮಾಡಿದೆ. ಈಸ್ಟ್-ವೆಸ್ಟ್‌ನಿಂದ ಗೋಫರ್ಸ್ಟ್ ವರೆಗೆ, ಪ್ರತಿಯೊಂದು ಕಂಪನಿಗಳ ದೊಡ್ಡ ಕನಸು, ಸಾಲ, ಕಾನೂನು ಹೋರಾಟಗಳು ಮತ್ತು ಅಂತಿಮವಾಗಿ ಭಾರೀ ಮೊತ್ತದಲ್ಲಿ ಖರೀದಿ ಮಾಡಿದ ವಿಮಾನಗಳು ನೆಲದಲ್ಲಿ ನಿಂತುಕೊಳ್ಳುವುದರೊಂದಿಗೆ ಕೊನೆಗೊಂಡಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಯಾಗಿದ್ದರೂ, ಭಾರತವು ವಿಮಾನಯಾನ ಸಂಸ್ಥೆಗಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಮಶಾನ ಅನ್ನೋದಂತೂ ಅಷ್ಟೇ ಸತ್ಯ.
1990ರಲ್ಲಿ ಎದುರಾದ ಮೊದಲ ಶಾಕ್
1991 ಕ್ಕಿಂತ ಮೊದಲು, ಆಕಾಶವು "ಸರ್ಕಾರದ" ನಿಯಂತ್ರಣದಲ್ಲಿತ್ತು. ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ನೀಡುತ್ತಿದ್ದರೆ, ಇಂಡಿಯನ್ ಏರ್ಲೈನ್ಸ್ ದೇಶೀಯ ಮಾರ್ಗಗಳಲ್ಲಿ ಪ್ರಾಬಲ್ಯ ಸಾಧಿಸಿತು. ಖಾಸಗಿ ಕಂಪನಿಗಳಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ನಂತರ 1991 ರ ಆರ್ಥಿಕ ಬಿಕ್ಕಟ್ಟು ಮತ್ತು ಉದಾರೀಕರಣದ ಯುಗ ಬಂದಿತು. ಹೊಸ ಬಾಗಿಲುಗಳು ತೆರೆದಂತೆ, ಹೊಸ ವಿಮಾನಯಾನ ಸಂಸ್ಥೆಗಳ ಪ್ರವಾಹ ಹೊರಹೊಮ್ಮಿತು.
ವೇಗದ ವಿಮಾನ, ಅತ್ಯಂತ ವೇಗದ ಸಾವು
ಖಾಸಗಿ ವಿಮಾನ ಕಂಪನಿಗಳ ಪೈಕಿ ಭಾರತದಲ್ಲಿ ಮೊದಲು ಟೇಕ್‌ಆಫ್ ಆಗಿದ್ದು ಈಸ್ಟ್-ವೆಸ್ಟ್. ಮೊದಲು ಸಮಾಧಿ ಆಗಿದ್ದು ಕೂಡ ಇದೇ ಕಂಪನಿ. ಕೇರಳದ ಗುತ್ತಿಗೆದಾರ ತಕಿಯುದ್ದೀನ್ ವಾಹಿದ್ ಅವರ ಕಂಪನಿಯು ಇಂಡಿಯನ್ ಏರ್ಲೈನ್ಸ್ ಗಿಂತ ಅಗ್ಗದ ದರದಲ್ಲಿ ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತು. ಫಲಿತಾಂಶ? 1995 ರ ಹೊತ್ತಿಗೆ, ಬ್ಯಾಂಕುಗಳು ಸಾಲಗಳನ್ನು ರದ್ದುಗೊಳಿಸಿದವು, ವಿಮಾನಗಳನ್ನು ಹಾರಾಟ ಮಾಡಲು ಸಾಧ್ಯವಾಗಲಿಲ್ಲ, ಕೊನೆಗೆ ಕಂಪನಿಯು ದಿವಾಳಿಯಾಯಿತು. ಇನ್ನು ವಾಹಿದ್ ಅವರನ್ನು 1995 ನವೆಂಬರ್ 13ರಂದು ಗುಂಡಿಕ್ಕಿ ಕೊಲ್ಲಲಾಯಿತು. ಈ ಕೊಲೆಯಲ್ಲಿ ಭೂಗತ ಲೋಕದ ಲಿಂಕ್ ಇದೆ ಎನ್ನುವ ಅನುಮಾನ ಈಗಲೂ ಇದೆ. ಆಗಸ್ಟ್ 1996 ರ ಹೊತ್ತಿಗೆ, ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಮುಚ್ಚಲಾಯಿತು.
ಭಿನ್ನ ದಾರಿ ಹಿಡಿದ ದಮಾನಿಯಾ
ಇದರ ನಡುವೆ ಬಂದಿದ್ದ ದಮಾನಿಯಾ ಏರ್‌ಲೈನ್ಸ್ ಬೇರೆಯದೇ ದಾರಿ ಹಿಡಿಯಿತು. ಬಾಂಬೆ-ಗೋವಾ ಮತ್ತು ಬಾಂಬೆ-ಪುಣೆಯಂತಹ ಸಣ್ಣ ಮಾರ್ಗಗಳಲ್ಲಿ ಪ್ರೀಮಿಯಂ ಸೇವೆ, ಬಿಸಿಯಾದ ಊಟ ಮತ್ತು ಹೆಚ್ಚಿನ ಲೆಗ್‌ರೂಮ್ ಅನ್ನು ನೀಡಿತು.ಆದರೆ ದರಗಳು ವೆಚ್ಚವನ್ನು ಭರಿಸಲು ಸಾಧ್ಯವಾಗಲಿಲ್ಲ. ಕಂಪನಿ ನಾಲ್ಕು ವರ್ಷ ಕೂಡ ವ್ಯವಹಾರ ಮಾಡಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಇದ್ದ NEPC ಹಾಗೂ ಮೊಡಿಲುಫ್ಟ್ ಏರ್‌ಲೈನ್ಸ್‌ಗಳು ವಿಮಾನದ ದರವನ್ನು ಹಾಸ್ಯಾಸ್ಪದ ಎನ್ನುವಷ್ಟರ ಮಟ್ಟಿಗೆ ಕೆಳಕ್ಕೆ ಇಳಿಸಿದವು. ದಮಾನಿಯಾ ಪ್ರತಿ ತಿಂಗಳೂ ನಷ್ಟವನ್ನೇ ಎದುರಿಸುತ್ತಿತ್ತು. 1997ರ ಹೊತ್ತಿಗೆ ತನ್ನಲ್ಲಿದ್ದ ಎರಡೂ ವಿಮಾನಗಳನ್ನೂ ಸಹಾರಕ್ಕೆ ಮಾರಾಟ ಮಾಡಿ ಸದ್ದು ಗದ್ದಲವಿಲ್ಲದೆ ಮುಚ್ಚಿಕೊಂಡು ಹೋಯಿತು.
ಸಹಾರಾ: ದೊಡ್ಡ ಕನಸು, ಕೆಟ್ಟ ಹೊಡೆತ
1993 ರಲ್ಲಿ ಪ್ರಾರಂಭವಾದ ಏರ್ ಸಹಾರಾ (ನಂತರ ಸರಳವಾಗಿ ಸಹಾರಾ ಎಂದು ಬದಲಾಯಿತು) ಆ ಕಾಲದ ಅತ್ಯಂತ ಮಹತ್ವಾಕಾಂಕ್ಷೆಯ ವಿಮಾನಯಾನ ಸಂಸ್ಥೆಯಾಗಿತ್ತು. ಇಂಡಿಯನ್ ಏರ್ಲೈನ್ಸ್ 6,000 ರೂಪಾಯಿಗಳಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದಾಗ, ಅದು ಬಾಂಬೆ-ದೆಹಲಿ ವಿಮಾನಗಳಿಗೆ ಕೇವಲ 2,999 ರೂಪಾಯಿಗಳಿಗೆ ಏಕಮುಖ ವಿಮಾನ ದರವನ್ನು ನಿಗದಿಪಡಿಸಿತು. ಇದು ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಅಸ್ತವ್ಯಸ್ತ ಮಾಡಿತು. ನಾಲ್ಕು ಹೊಚ್ಚ ಹೊಸ ಬೋಯಿಂಗ್ 737-400 ವಿಮಾನಗಳನ್ನು 100% ಗುತ್ತಿಗೆಗೆ ಸ್ವಾಧೀನಪಡಿಸಿಕೊಳ್ಳಲಾಯಿತು.
ನಂತರ 1997-98ರ ಪೂರ್ವ ಏಷ್ಯಾದ ಆರ್ಥಿಕ ಬಿಕ್ಕಟ್ಟು ಬಂದಿತು. ಡಾಲರ್ ವಿರುದ್ಧ ರೂಪಾಯಿ ರಾತ್ರೋರಾತ್ರಿ ಕುಸಿಯಿತು. ಗುತ್ತಿಗೆ ಬಾಡಿಗೆಗಳು 20% ರಷ್ಟು ಜಿಗಿದವು. ಮಾಸಿಕ ನಷ್ಟಗಳು ಹೆಚ್ಚಾದವು. ತನ್ನ ಜೀವ ಉಳಿಸಿಕೊಳ್ಳಲು, ಸಹಾರಾ 1998 ರಲ್ಲಿ ಜೆಟ್ ಏರ್‌ವೇಸ್‌ನಲ್ಲಿ 49% ಪಾಲನ್ನು ಮಾರಾಟ ಮಾಡಿತು, ನಂತರ 2007 ರಲ್ಲಿ ಸಂಪೂರ್ಣ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಿ, ಅದಕ್ಕೆ ಜೆಟ್‌ಲೈಟ್ ಎಂದು ಮರುನಾಮಕರಣ ಮಾಡಿತು. ಮತ್ತು 2019 ರಲ್ಲಿ ಜೆಟ್ ಏರ್‌ವೇಸ್ ಕುಸಿದಾಗ, ಜೆಟ್‌ಲೈಟ್ ಕೂಡ ಅದರೊಂದಿಗೆ ಕುಸಿಯಿತು. ಇದರೊಂದಿಗೆ ಸಹಾರಾ ಏರ್‌ಲೈನ್ಸ್ ಎರಡು ಕುಸಿತ ಕಂಡ ಏರ್‌ಲೈನ್ಸ್ ಅನ್ನೋ ಕುಖ್ಯಾತಿ ಪಡೆದುಕೊಂಡಿತು.
ಮೋದಿಲುಫ್ಟ್: ಕಾರ್ಪೋರೇಟ್ ಡ್ರಾಮಾಗೆ ಬಲಿಯಾದ ಕಂಪನಿ
1993 ರಲ್ಲಿ, ಮೋದಿ ರಬ್ಬರ್‌ನ ಮಾಲೀಕರಾದ ಮೋದಿ ಕುಟುಂಬ ಮತ್ತು ಜರ್ಮನ್ ದೈತ್ಯ ಲುಫ್ಥಾನ್ಸ ಜಂಟಿಯಾಗಿ "ಮೋದಿಲುಫ್ಟ್" ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಿದವು. ಆದರೆ, ಕಂಪನಿಗೆ ಮೂರು ವರ್ಷಗಳಾಗುವ ಹೊತ್ತಿನಲ್ಲಿ ಹಣದ ಬಳಕೆಯ ಬಗ್ಗೆ ಎರಡೂ ವಿಮಾನಯಾನ ಸಂಸ್ಥೆಗಳ ನಡುವೆ ವಿವಾದ ಭುಗಿಲೆದ್ದಿತು. 1996 ರಲ್ಲಿ, ಲುಫ್ಥಾನ್ಸ ತನ್ನ ಎಲ್ಲಾ ವಿಮಾನಗಳನ್ನು ರಾತ್ರೋರಾತ್ರಿ ಹಿಂತೆಗೆದುಕೊಂಡಿತು. ಅದರ ಮರುವಾರವೇ ಡಿಜಿಸಿಎ ತನ್ನ ಲೈಸೆನ್ಸ್‌ಅನ್ನು ಸಸ್ಪೆಂಡ್ ಮಾಡಿತು.
ಈಸ್ಟ್-ವೆಸ್ಟ್, ದಮಾನಿಯಾ, ಮೋದಿಲುಫ್ಟ್ ಮತ್ತು ಸಹಾರಾ ಎಲ್ಲವೂ ಅಂತ್ಯಕ್ಕೆ ಒಂದೇ ಸೂತ್ರವನ್ನು ಅನುಸರಿಸಿದವು: 100% ಗುತ್ತಿಗೆ ಪಡೆದ ವಿಮಾನಗಳು, ಬಂಡವಾಳ ಶೂನ್ಯಸ್ಥಿತಿ, ರೂಪಾಯಿ ಕುಸಿದಂತೆ ಗಗನಕ್ಕೇರುತ್ತಿರುವ ಡಾಲರ್ ಪೇಮೆಂಟ್‌ಗಳು, ಪ್ರಮೋಟರ್‌ಗಳ ದುರಾಸೆ-ದುರಹಂಕಾರ, ದರಗಳ ಏರಿಳಿತ ಇವುಗಳ ಅಂತ್ಯಕ್ಕೆ ಕಾರಣವಾದವು. ನಗದು ಖಾಲಿಯಾದ ತಕ್ಷಣ, ವಿಮಾನ ಗುತ್ತಿಗೆ ನೀಡಿದ ಕಂಪನಿಗಳು ತಮ್ಮ ವಿಮಾನಗಳನ್ನು ತೆಗೆದುಕೊಂಡು ಹೋದರು. ಅವುಗಳಲ್ಲಿ, ಬದುಕುಳಿದಿದ್ದು ಜೆಟ್ ಏರ್‌ವೇಸ್ ಮಾತ್ರ. ಪ್ರೀಮಿಯಂ ಸೇವೆ ನೀಡಿ ಬಲವಾದ ಬ್ರ್ಯಾಂಡ್ ಆಗಿ ರೂಪಿಸಿಕೊಂಡಿದ್ದ ಅದು ಭಾರತದ ವಾಯುಯಾನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸುವ ವಿಶ್ವಾಸ ಮೂಡಿಸಿತ್ತು.
2000 ಇಸವಿಯಲ್ಲಿ ಬಂದ ಕಡಿಮೆ ಬೆಲೆಯ ವಿಮಾನಯಾನ
2003 ರಲ್ಲಿ, ಏರ್ ಡೆಕ್ಕನ್ ರೈಲು ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ವಿಮಾನ ದರ ನಿಗದಿ ಮಾಡಿತು. 'ಚಪ್ಪಲಿ ಧರಿಸಿದವರೂ ವಿಮಾನ ಪ್ರಯಾಣ ಮಾಡಬಹುದು..' ಎನ್ನುವ ಅವರ ಘೋಷಣೆ ಜನಪ್ರಿಯವಾಯಿತು. ಸ್ಪೈಸ್ ಜೆಟ್ ಮತ್ತು ಇಂಡಿಗೋ ನಂತರ ಬಂದವು. ವಿಲಾಸಿ ಪ್ರಪಂಚದಲ್ಲೇ ಮುಳುಗಿದ್ದ ವಿಜಯ್ ಮಲ್ಯ, ಡೆಕ್ಕನ್ ಅನ್ನು ಖರೀದಿಸಿ ಕಿಂಗ್‌ಫಿಷರ್ ಏರ್‌ಲೈನ್ ಅನ್ನೋ ಬ್ರ್ಯಾಂಡ್‌ಮಾಡಿದರು. ಆದರೆ, 2012ರಲ್ಲಿ 8 ಸಾವಿರ ಕೋಟಿ ಸಾಲದೊಂದಿಗೆ ಇದು ಮುಚ್ಚಿಹೋಯಿತು. ಇದರ ನಡುವೆ ಪ್ಯಾರಾಮೌಂಟ್, ಏರ್ ಕೋಸ್ಟಾ, ಏರ್ ಪೆಗಾಸಸ್, ಏರ್ ಒಡಿಶಾ ಮತ್ತು ಡೆಕ್ಕನ್ 360 ನಂತಹ ಪ್ರಾದೇಶಿಕ ಕಂಪನಿಗಳು ಸಹ ಬಂದು ಹೋದವು. 1990 ರ ದಶಕದ ಹೀರೋ ಆಗಿದ್ದ ಜೆಟ್ ಏರ್‌ವೇಸ್ 2019 ರಲ್ಲಿ ಕುಸಿಯಿತು. ಗೋಫಸ್ಟ್ 2023 ರಲ್ಲಿ ದಿವಾಳಿತನವನ್ನು ಘೋಷಿಸಿತು.
ಇದು ಎಂದೂ ಮುರಿಯದ ಬಲೆ
ತಜ್ಞರು ಇಂದಿಗೂ ಕೂಡ ಹೇಳೋದು ಒಂದು ಮಾತು. ಏರ್‌ಲೈನ್ಸ್ ಅನ್ನೋದೇ ಟ್ರ್ಯಾಪ್ ಇದು ಎಂದೂ ಮುರಿಯದ ಬಲೆ ಎನ್ನುತ್ತಾರೆ. ಜೆಟ್ ಇಂಧನ (ATF) ಭಾರತೀಯ ವಿಮಾನಯಾನ ಸಂಸ್ಥೆಗಳ ವೆಚ್ಚದ 40-45% ಅನ್ನು ಬಳಸುತ್ತದೆ. ವಿಶ್ವದ ಎಲ್ಲೂ ಇಷ್ಟು ಪ್ರಮಾಣದ ಬೆಲೆ ಇಲ್ಲ. ಅದರ ಜೊತೆಗೆ, ದರಗಳ ವಿಷಯದಲ್ಲಿ ತೀವ್ರ ಸ್ಪರ್ಧೆ ಇದೆ, ಬೆಲೆಗಳು ಹೆಚ್ಚಿದ್ದರೆ ಪ್ರಯಾಣಿಕರು ಬರೋದಿಲ್ಲ ಅನ್ನೋ ಮಾತು ಏರ್‌ಲೈನ್ಸ್ ಕಂಪನಿಯ ಮೀಟಿಂಗ್ ಚೇಂಬರ್‌ನಲ್ಲಿ ಕೇಳಿಬರುತ್ತದೆ. ಇದರ ನಡುವೆ, ಇಂಧನ, ಗುತ್ತಿಗೆಗಳು ಮತ್ತು ನಿರ್ವಹಣೆ - ಈ ವೆಚ್ಚಗಳಲ್ಲಿ ಹೆಚ್ಚಿನವು ಡಾಲರ್‌ಗಳಲ್ಲಿವೆ. ಆದರೆ, ಇದರಲ್ಲಿ ಆಗುವ ಸಣ್ಣ ಬದಲಾವಣೆ ಇಡೀ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡುತ್ತದೆ. ಸಾಲ ಹೆಚ್ಚಾಗುತ್ತದೆ, ಸ್ವತ್ತುಗಳು ಸ್ಥಗಿತಗೊಳ್ಳುತ್ತವೆ, ಅವರ ಆಟ ಮುಗಿದುಹೋಗುತ್ತದೆ ಮತ್ತು ಸಾಲದಾತರು ಕಂಪನಿಯನ್ನು ವಹಿಸಿಕೊಳ್ಳುತ್ತಾರೆ.
ಇಷ್ಟೆಲ್ಲದರ ನಡುವೆ ಹಲವು ವರ್ಷಗಳಿಂದ ಇಂಡಿಗೋ ಕಾರ್ಯನಿರ್ವಹಿಸುತ್ತಿದೆ. ವಿಮಾನಗಳಿಗೆ ಯಾವುದೇ ಅಲಂಕಾರ ಇರೋದಿಲ್ಲ, ಇಡೀ ಕಂಪನಿ ಶೂನ್ಯ ಸಾಲದಲ್ಲಿದೆ, ವಿವಿಧ ಮಾದರಿಯ ವಿಮಾನಗಳನ್ನು ಇದು ಓಡಿಸೋದಿಲ್ಲ. ಬಹುತೇಕ ಎಲ್ಲಾ ವಿಮಾನಗಳು ಆಕಾಶದಲ್ಲಿಯೇ ಇರುವ ಮೂಲಕ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡುತ್ತಿದೆ. ಆದರೆ, ಸರ್ಕಾರದ ಹೊಸ ಎಫ್‌ಡಿಟಿಎಲ್ ನಿಯಮಗಳು ಹಾಗೂ ದುಬಾರಿ ವೆಚ್ಚ ಕಂಪನಿಯ ಶಕ್ತಿಯನ್ನು ಪ್ರದರರ್ಶನ ಮಾಡಿದೆ. ಟಾಟಾ ಏರ್ ಇಂಡಿಯಾಗೆ ಹೊಸ ಜೀವನ ನೀಡಿದ್ದರೂ, ಲಾಭವಾಗುವ ಹಾದಿಯಲ್ಲಿ ತುಂಬಾ ದೀರ್ಘ ಸಾಗಬೇಕಿದೆ. ಸ್ಪೈಸ್ ಜೆಟ್ ಕುಂಟುತ್ತಾ ಸಾಗುತ್ತಿದೆ. ಅಕ್ಸಾ ಇನ್ನೂ ಹೊಸ ಕಂಪನಿ.
ಹಾಗಾಗಿ ಭಾರತದ ಆಕಾಶವು ಎಷ್ಟು ಪ್ರಕಾಶಮಾನವಾಗಿ ಕಾಣುತ್ತಿದ್ದರೂ, ವಿಮಾನಯಾನ ಕಂಪನಿಗಳಿಗೆ ಅಷ್ಟೇ ಅಪಾಯಕಾರಿ. ಆದ್ದರಿಂದ, ಇತಿಹಾಸದಿಂದ ಕಲಿಯದವರು ಅದನ್ನು ಪುನರಾವರ್ತಿಸಬೇಕಾಗುತ್ತದೆ. ಅದಕ್ಕಾಗಿಯೇ ವಾಯುಯಾನದ ಅತ್ಯಂತ ಹಳೆಯ ಹಾಸ್ಯ ಇನ್ನೂ ಚಾಲ್ತಿಯಲ್ಲಿದೆ.


