ಶ್ರೀನಗರ[ಆ.05]: ಜಮ್ಮು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿದ್ದವು. ಆದರೀಗ ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಈ ಹಿಂದೆ ಕಾಶ್ಮೀರಕ್ಕೆ ಸಂವಿಧಾನದಲ್ಲಿ ಆರ್ಟಿಕಲ್ 35(A), 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ್ದಾರೆ. ಸದ್ಯ ಈ ಪ್ರಸ್ತಾವನೆಗೆ ರಾಷ್ಟ್ರಪತಿ ಸಹಿ ಹಾಕಿದ್ದು, ಬೆಂಬಲವ್ಲಿಲದೆ ಈ ಮಸೂದೆ ಜಾರಿಯಾಗಲಿದೆ.

ಕಾಶ್ಮೀರದಲ್ಲಿ ಅಲ್ಲೋಲ ಕಲ್ಲೋಲ; ಮೋದಿ ಶಾ ತಂತ್ರವೇನು?

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್  ಜಮ್ಮು ಕಾಶ್ಮೀರ ಪ್ರವಾಸದಿಂದ ಮರಳಿದ ಬಳಿಕ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಕಾಶ್ಮೀರಕ್ಕೆ ಹೆಚ್ಚುವರಿ ಸೈನಿಕರನ್ನು ರವಾನೆಯಾದ ಬೆನ್ನಲ್ಲೇ ಸೋಮವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇಷ್ಟೇ ಅಲ್ಲದೇ ಇಂಟರ್ನೆಟ್ ಕೂಡಾ ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರ ಈ ಮಹತ್ತರ ಮಸೂದೆ ಮಂಡಿಸಿದೆ. ಈ ಮಸೂದೆ ಮಂಡಿಸುತ್ತಿದ್ದಂತೆಯೇ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ನಡೆದಿತ್ತು. ಆದರೆ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿರುವುದರಿಂದ ಬೆಂಬಲವಿಲ್ಲದೇ ಜಾರಿಯಾಗಲಿದೆ.

ಐತಿಹಾಸಿಕ ನಿರ್ಣಯದಿಂದ ಏನಾಗುತ್ತೆ?

ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮಸೂದೆಯಿಂದ, ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಇನ್ಮುಂದೆ ರಾಜ್ಯವಾಗಿ ಉಳಿಯುವುದಿಲ್ಲ. ಇದೊಂದು ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಳ್ಳಲಿದೆ. ಜಮ್ಮು ಕಾಶ್ಮೀರದಿಂದ ಲಡಾಕ್‌ನ್ನು ಪ್ರತ್ಯೇಕಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರ ವಿಧಾನಸಭೆ ಹೊಂದಿರುವ ಪ್ರದೇಶವಾದರೆ, ಲಡಾಕ್ ವಿಧಾನಸಭೆ ಇಲ್ಲ ಕೇಂದ್ರಾಡಳಿತ ಪ್ರದೆಶವಾಗಲಿದೆ. 

ಕಾಶ್ಮೀರದಲ್ಲಿ ಮಧ್ಯರಾತ್ರಿ ನಿಷೇಧಾಜ್ಞೆ, ಇಂಟರ್ನೆಟ್ ಸ್ಥಗಿತ, ಒಮರ್, ಮುಫ್ತಿಗೆ ದಿಗ್ಭಂಧನ!

ಏನಿದು 370ನೇ ವಿಧಿ? 

370 ಭಾರತ ಸಂವಿಧಾನದ ಒಂದು ವಿಧಿ. ಇದು ಕಾಶ್ಮೀರಕ್ಕೆ ತಾತ್ಕಾಲಿಕ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿದೆ. ಇದರಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಹೊರತುಪಡಿಸಿ ದೇಶದ ಬೇರೆಲ್ಲಾ ರಾಜ್ಯಗಳಿಗೆ ಅನ್ವಯಿಸುವ ಕಾನೂನುಗಳು, ನಿಯಮಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಈ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ಜಮ್ಮು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಅತ್ಯಂತ ಹಿಂದುಳಿದಿದೆ. ಇದಕ್ಕೆ 370ನೇ ವಿಧಿಯೇ ಕಾರಣ. ಅಲ್ಲದೆ ಭಾರತೀಯ ಸಂವಿಧಾನದಲ್ಲಿ ಕಲಂ-370ಯನ್ನು ತಾತ್ಕಾಲಿಕ ವಿಶೇಷಾಧಿಕಾರ ಎಂದು ಸೇರಿಸಲಾಗಿದೆ. ಸ್ವಾತಂತ್ರ್ಯಾನಂತರದ 60 ವರ್ಷಗಳ ಕಾಲ ಜಮ್ಮು-ಕಾಶ್ಮೀರ ಈ ವಿಶೇಷಾಧಿಕಾರವನ್ನು ಬಳಸಿಕೊಂಡಿದೆ. ಹಾಗಾಗಿ ಇದನ್ನು ರದ್ದು ಮಾಡಬೇಕೆಂಬ ಕೂಗು ಕೆಲ ವರ್ಷಗಳಿಂದ ಇದೆ. ಈಗ ಇದು ಮತ್ತೊಮ್ಮೆ ಕೇಳಿಬರುತ್ತಿದೆ. ಇನ್ನೊಂದೆಡೆ ಒಂದು ವೇಳೆ 370ನೇ ವಿಧಿಯನ್ನು ರದ್ದುಪಡಿಸಿದರೆ ಕಣಿವೆ ರಾಜ್ಯದ ಜನರು ತಮ್ಮ ಗುರುತು ಕಳೆದುಕೊಳ್ಳುತ್ತಾರೆ. ಇದರಿಂದ ಜನರು ತಮ್ಮ ಸ್ವಾತಂತ್ರ್ಯವೇ ಕಳೆದುಹೋಗಿದೆ ಎಂದು ತಿಳಿಯುತ್ತಾರೆ ಎಂದು ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷವಾದ ನ್ಯಾಶನಲ್ ಕಾನ್ಫರೆನ್ಸ್‌ ವಾದಿಸುತ್ತಿದೆ. ಜೊತೆಗೆ ಇದನ್ನು ರದ್ದುಪಡಿಸುವ ಅಧಿಕಾರ ಭಾರತದ ಸಂಸತ್ತಿಗೆ ಇಲ್ಲ ಎಂದು ಜಮ್ಮು ಕಾಶ್ಮೀರದ ರಾಜಕಾರಣಿಗಳು ವಾದಿಸುತ್ತಾರೆ.

ಏಕೆಂದರೆ ಜಮ್ಮು ಕಾಶ್ಮೀರಕ್ಕೆ ಭಾರತದ ಸಂವಿಧಾನಕ್ಕೆ ಹೊರತಾದ ಪ್ರತ್ಯೇಕ ಸಂವಿಧಾನವಿದೆ. ಇದನ್ನು ರಚಿಸಿದ್ದು ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಮಿತಿ. ಈ ಸಮಿತಿ ಮತ್ತೊಮ್ಮೆ ಸಭೆ ನಡೆಸಿ ವಿಶೇಷ ಸ್ಥಾನಮಾನ ಕೈಬಿಡುವ ನಿರ್ಧಾರವನ್ನು ತಾನೇ ಅಂಗೀಕರಿಸಬೇಕು. ಆದರೆ, ಈಗ ಜಮ್ಮು ಕಾಶ್ಮೀರದ ಕೆಲ ಭಾಗ ಪಾಕ್‌ ಆಕ್ರಮಿತ ಕಾಶ್ಮೀರವಾಗಿರುವುದರಿಂದ ಸಮಗ್ರ ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಮಿತಿ ಸಭೆಯನ್ನೇ ನಡೆಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ವಿಶೇಷ ಸವಲತ್ತನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಕೆಲ ತಜ್ಞರು ಹೇಳುತ್ತಾರೆ.

ಏನಿದು 35ಎ?

ಜಮ್ಮು-ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವ ಕಲಂ ಇದಾಗಿದೆ. 35-ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ ರಾಜ್ಯದ ಹೊರಗಿನವರನ್ನು ವಿವಾಹವಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ.

ಆದರೆ ಅಲ್ಲಿನ ಪುರುಷ ಹೊರರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕಿಗೆ ಯಾವುದೇ ಧಕ್ಕೆ ಬರುವುದಿಲ್ಲ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತವೆ. ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ.

ಆದ್ದರಿಂದ, ಕಲಂ 35-ಎ ಸಿಂಧುತ್ವ ಪ್ರಶ್ನಿಸಿ, ಕಲಂ 35-ಎ ಅನ್ವಯ ಕಣಿವೆ ರಾಜ್ಯದಲ್ಲಿನ ಕೆಲವು ಜನರಿಗೆ ಆ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಕಲಂನಿಂದಲೂ ಕಾಶ್ಮೀರ ಅಭಿವೃದ್ಧಿಯಾಗುತ್ತಿಲ್ಲ, ಉದ್ಯಮಕ್ಕೆ ಈ ಕಲಂ ಅವಕಾಶ ನೀಡುವುದಿಲ್ಲ. ಹಾಗಾಗಿ ಇದನ್ನು ರದ್ದು ಪಡಿಸಬೇಕು ಎಂದು ಹೇಳಲಾಗುತ್ತಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿತ್ತು ಭರವಸೆ

2014ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಹಾಗಾಗಿ ಅಶಾಂತಿಗೆ ಎಡೆಮಾಡಿಕೊಡದಂತೆ ಸೂಕ್ತ ಭದ್ರತೆ ನೀಡಿ, ಈ ಸ್ಥಾನಮಾನವನ್ನು ರದ್ದುಪಡಿಸುವುದಾಗಿ ಭರವಸೆ ನೀಡಿತ್ತು ಎಮಬುವುದು ಉಲ್ಲೇಖನೀಯ.