ಬಾಲಿವುಡ್‌ನ ಪ್ಯಾನ್ ವರ್ಲ್ಡ್‌ 'ರಾಮಾಯಣ' ಚಿತ್ರದ ಬಜೆಟ್ ಬಗ್ಗೆ ಮಾತನ್ನಾಡುತ್ತ ಯಶ್ ಅವರು ‘ನಮ್ಮ ಚಿತ್ರದ ನಿರ್ಮಾಣದಲ್ಲಿ ನನ್ ಪಾರ್ಟ್ನರ್ ಆಗಿರುವ ನಮಿತ್ ಮಲ್ಹೋತ್ರಾ ಅವರು ಅಮೆರಿಕಾದಲ್ಲಿ ಪ್ರಮೋಶನ್ ಮಾಡುತ್ತಿದ್ದಾರೆ. ಇಲ್ಲಿ, ಅಂದರೆ ಭಾರತದಲ್ಲಿ ನಾನು, ಹಾಗೂ ನಾವು (ಇಡೀ ಚಿತ್ರತಂಡ) ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇವೆ..’ ಎಂದಿದ್ದಾರೆ.

ರಾಮಾಯಣ ಚಿತ್ರದ ನಿಜವಾದ ಬಜೆಟ್ ಹೇಳಿದ ಯಶ್!

ನಿನ್ನೆ, ಅಂದರೆ 15 ಅಕ್ಟೋಬರ್ 2026ರಂದು 'ರಾಮಾಯಣ' ಚಿತ್ರದ (Ramayana) ಪ್ರಚಾರಕ್ಕಾಗಿ ಚಿತ್ರತಂಡದ ಜೊತೆ ಬೆಂಗಳೂರಿಗೆ ಬಂದಿದ್ದ ನಟ ಯಶ್ (Yash) ಅವರು ತಮ್ಮ ಚಿತ್ರದ ಬಜೆಟ್ ಎಷ್ಟು ಎಂಬ ಸತ್ಯವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ. ಈ ಮೊದಲು, ರಾಮಾಯಣ ಚಿತ್ರದ ಒಟ್ಟು ಬಜೆಟ್ 6000 ಕೋಟಿ ರೂಪಾಯಿ ಎನ್ನಲಾಗಿತ್ತು. ಆದರೆ, ಅಷ್ಟು ಅಲ್ಲ, ಸತ್ಯವಾಗಿ ರಾಮಾಯಣ ಬಜೆಟ್ ಎಷ್ಟು ಎಂಬುದನ್ನು ಈ ಚಿತ್ರದ 'ರಾವಣ' ಪಾತ್ರಧಾರಿ ನಟ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್ ಕೊನೆಗೂ ಬಿಚ್ಚಿಟ್ಟಿದ್ದಾರೆ.

ಹೌದು, ಬಾಲಿವುಡ್‌ನ ಪ್ಯಾನ್ ವರ್ಲ್ಡ್‌ 'ರಾಮಾಯಣ' ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಹಾಗೂ ಯಶ್ ಈ ಇಬ್ಬರು ನಿರ್ಮಾಪಕರು. ಈ ಚಿತ್ರದ ಬಜೆಟ್ ಬಗ್ಗೆ ಮಾತನ್ನಾಡುತ್ತ ಯಶ್ ಅವರು 'ನಮ್ಮ ಚಿತ್ರದ ನಿರ್ಮಾಣದಲ್ಲಿ ನನ್ ಪಾರ್ಟ್ನರ್ ಆಗಿರುವ ನಮಿತ್ ಮಲ್ಹೋತ್ರಾ ಅವರು ಅಮೆರಿಕಾದಲ್ಲಿ ಪ್ರಮೋಶನ್ ಮಾಡುತ್ತಿದ್ದಾರೆ. ಇಲ್ಲಿ, ಅಂದರೆ ಭಾರತದಲ್ಲಿ ನಾನು, ಹಾಗೂ ನಾವು (ಇಡೀ ಚಿತ್ರತಂಡ) ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇವೆ. 'ಪ್ರಮೋಶನ್ ಸೇರಿದಂತೆ, ರಾಮಾಯಣ-1, ಹಾಗೂ ರಾಮಾಯಣ-2 ಚಿತ್ರದ ಬಜೆಟ್‌ 4000 ಕೋಟಿ ರೂಪಾಯಿಗಳು' ಎಂದಿದ್ದಾರೆ.

ಅಮೆರಿಕಾದಲ್ಲಿ ರಾಮಾಯಣ ಸಿನಿಮಾದ ಬಜೆಟ್ 6000 ಕೋಟಿ!?

ಆದರೆ, ನಮಿತ್ ಮಲ್ಹೋತ್ರಾ ಅವರು ಅಲ್ಲಿ, ಅಂದರೆ ಅಮೆರಿಕಾದಲ್ಲಿ ರಾಮಾಯಣ ಸಿನಿಮಾದ ಬಜೆಟ್ 6000 ಕೋಟಿ ಎಂದಿರುವುದಕ್ಕೆ ನಿಖರವಾದ ಕಾರಣವಿದೆ. ಅಮೆರಿಕಾದಲ್ಲಿ ಬಿಸಿನೆಸ್ ಮಾಡಬೇಕು ಎಂದರೆ ಅಲ್ಲಿ ಭಾರತದಲ್ಲಿ ಇರುವಂತೆ, ನಯ-ವಿನಯ, ಸತ್ಯವಾದ ಮಾತಿಗಿಂತ ಹೆಚ್ಚಾಗಿ ಹೆಚ್ಚಿನ ಬಜೆಟ್ ಹಾಗೂ ಕಾನ್ಫಿಡೆನ್ಸ್ (ಆತ್ಮವಿಶ್ವಾಸ) ವರ್ಕ್ ಆಗುತ್ತೆ. ಈ ಕಾರಣಕ್ಕೆ ಅಲ್ಲಿ ಮಾತನ್ನಾಡುವಾಗ ನಮ್ಮ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಜಿ ಅವರು 6000 ಕೋಟಿ ಬಜೆಟ್ ಎಂದಿದ್ದಾರೆ. ಅದು ಅಲ್ಲಿಯ ವ್ಯವಹಾರಕ್ಕೆ ಮಾತ್ರ ಸೀಮಿತ. ಆದರೆ, ರಾಮಾಯಣ ಚಿತ್ರದ ಬಜೆಟ್, ಎಲ್ಲಾ ಸೇರಿ 4000 ಕೋಟಿ ರೂಪಾಯಿ ಎಂದಿದ್ದಾರೆ.

ಹೌದು, ಜಗತ್ತಿನ ಸಿನಿಮಾ ಲೋಕದಲ್ಲಿ ವ್ಯಾಪಾರ-ವ್ಯವಹಾರದ ದೃಷ್ಟಿಯಿಂದ ಬಜೆಟ್ ಹೆಚ್ಚು-ಕಡಿಮೆ ಹೇಳಬೇಕಾಗಬಹುದು. ಆದರೆ, ಕೊನೆಗೆ ಕೆಲಸ ಮಾಡೋದು ಸಿನಿಪ್ರೇಕ್ಷಕರು ಸಿನಿಮಾವನ್ನು ಎಷ್ಟರಮಟ್ಟಿಗೆ ಒಪ್ಪಿಕೊಂಡರು ಎಂಬ ಅಂಶವೇ ಆಗಿದೆ. ಈ ನಿಟ್ಟಿನಲ್ಲಿ, ಯಶ್ ಅವರು ಸತ್ಯವಾದ ಮಾತೊಂದನ್ನು ಕನ್ನಡ ನಾಡಿನಲ್ಲಿ, ತಮ್ಮ ತಾಯ್ನಾಡಲ್ಲಿ ಬಿಚ್ಚಿಟ್ಟು ತಮ್ಮ ಹಾಗೂ ಸಿನಿಮಾತಂಡದ ಗೌರವಗಳನ್ನು ಉಳಿಸಿಕೊಂಡಿದ್ದಾರೆ ಎನ್ನಬಹುದು.

ಭಾರತೀಯ ಚಿತ್ರರಂಗದ ಶಕ್ತಿ ಅದರ ಏಕತೆಯಲ್ಲಿದೆ. ಭಾಷೆ, ಪ್ರದೇಶ ಹಾಗೂ ಅಭಿಮಾನಿಗಳ ನಡುವಿನ ಭೇದಗಳನ್ನು ಬದಿಗಿಟ್ಟು ಉತ್ತಮ ಸಿನಿಮಾಗಳನ್ನು ಬೆಂಬಲಿಸಬೇಕು ಎಂದು ರಾಕಿಂಗ್ ಸ್ಟಾರ್ ಯಶ್ (Yash) ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana: Rise of a Legend) ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂಬ ಮಹತ್ವದ ಸಂದೇಶ ನೀಡಿದ್ದಾರೆ.

ಈ ಬಹುನಿರೀಕ್ಷಿತ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್, ದೊಡ್ಡ ಸಿನಿಮಾ ನಿರ್ಮಾಣದ ಹಿಂದೆ ಅನೇಕ ಕಲಾವಿದರು ಮತ್ತು ತಂತ್ರಜ್ಞರ ಪರಿಶ್ರಮವಿರುತ್ತದೆ ಎಂದು ಹೇಳಿದರು. ಚಿತ್ರದ ವಿಎಫ್‌ಎಕ್ಸ್ (VFX), ನಟರು ಅಥವಾ ಇತರ ತಾಂತ್ರಿಕ ಅಂಶಗಳ ಬಗ್ಗೆ ಟೀಕೆ ಮಾಡುವುದಕ್ಕಿಂತ, ಚಿತ್ರತಂಡದ ಪ್ರಯತ್ನವನ್ನು ಅರ್ಥಮಾಡಿಕೊಂಡು ಪ್ರೋತ್ಸಾಹಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಒಬ್ಬರನ್ನೊಬ್ಬರು ದ್ವೇಷಿಸುವ ಬದಲು ಪ್ರೀತಿಯನ್ನು ಹಂಚಬೇಕು!

“ನಾವು ನಮ್ಮೊಳಗೇ ಜಗಳವಾಡುತ್ತಾ, ಪರಸ್ಪರರನ್ನು ವಿಭಜಿಸುತ್ತಾ ಹೋದರೆ ಜಗತ್ತನ್ನು ಎದುರಿಸಲು ಹೇಗೆ ಸಾಧ್ಯ? ಉದ್ದೇಶ ಒಳ್ಳೆಯದಾಗಿದ್ದರೆ ಎಲ್ಲರೂ ಅದಕ್ಕೆ ಬೆಂಬಲವಾಗಿ ನಿಲ್ಲಬೇಕು. ಒಬ್ಬರನ್ನೊಬ್ಬರು ದ್ವೇಷಿಸುವ ಬದಲು ಪ್ರೀತಿಯನ್ನು ಹಂಚಬೇಕು” ಎಂಬುದು ಯಶ್ ಅವರ ಮಾತುಗಳ ಸಾರವಾಗಿತ್ತು. ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಪ್ರೇಕ್ಷಕರು ಕೂಡ ‘ರಾಮಾಯಣ’ ಚಿತ್ರಕ್ಕೆ ಅವಕಾಶ ನೀಡಿ, ಅದರ ಪ್ರಯತ್ನವನ್ನು ಮೆಚ್ಚಬೇಕು ಎಂದು ಅವರು ಕರೆ ನೀಡಿದರು.

ಭಾರತೀಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ರಾಮಾಯಣ ಮಹಾಕಾವ್ಯದ ಕುರಿತು ಮಾತನಾಡಿದ ಯಶ್, ಈ ಕಥೆಯನ್ನು ಕೇಳುತ್ತಾ ಬೆಳೆದಿರುವ ಜನರು ಅದನ್ನು ಬೆಳ್ಳಿತೆರೆಯ ಮೇಲೆ ಅದ್ದೂರಿಯಾಗಿ ನೋಡುವ ಅನುಭವವನ್ನು ಪಡೆಯಬೇಕು ಎಂದರು. ಕಥೆಯ ಮಹತ್ವವನ್ನು ಹೊಸ ತಲೆಮಾರಿಗೆ ತಲುಪಿಸುವ ಇಂತಹ ಪ್ರಯತ್ನಗಳಿಗೆ ಪ್ರೇಕ್ಷಕರ ಬೆಂಬಲ ಅಗತ್ಯವೆಂದು ತಿಳಿಸಿದರು.