ಕೇವಲ ನಾಲ್ಕು ದಿನಗಳಲ್ಲಿ ₹500 ಕೋಟಿ ಗಡಿಯ ಸಮೀಪ ಬಂದಿರುವ ‘ರಾಮಾಯಣ’, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆ ಮೂಡಿಸಿದೆ. 'ರಾಮಾಯಣ' ಚಿತ್ರದ ರಾವಣ-ಜಟಾಯು ಕಾಳಗ ದೃಶ್ಯಕ್ಕೆ 6 ವರ್ಷ ಹಾಗೂ ಪುಷ್ಪಕ ವಿಮಾನ ವಿನ್ಯಾಸಕ್ಕೆ 2 ವರ್ಷ ಶ್ರಮಿಸಲಾಗಿದೆ.

ರಾವಣ-ಜಟಾಯು ಕಾಳಗಕ್ಕೆ ಆರು ವರ್ಷಗಳ ಪರಿಶ್ರಮ! ಪುಷ್ಪಕ ವಿಮಾನದ ವಿನ್ಯಾಸದಲ್ಲೂ ಭಾರೀ ಬದಲಾವಣೆ!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಒಂದಲ್ಲ ಒಂದು ವಿಶೇಷ ಕಾರಣಕ್ಕೆ ಸುದ್ದಿಯಾಗುತ್ತಿದೆ. ಅದ್ಧೂರಿ ಮೇಕಿಂಗ್, ಅದ್ಭುತ ದೃಶ್ಯ ವೈಭವ ಹಾಗೂ ತಂತ್ರಜ್ಞಾನದ ಬಳಕೆಯಿಂದ ಗಮನ ಸೆಳೆಯುತ್ತಿರುವ ಈ ಚಿತ್ರದ ಬಗ್ಗೆ ಇದೀಗ ಮತ್ತೊಂದು ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ಸಿನಿಮಾದಲ್ಲಿ ರಾವಣ ಮತ್ತು ಜಟಾಯು ನಡುವೆ ನಡೆಯುವ ರೋಚಕ ಯುದ್ಧದ ದೃಶ್ಯವನ್ನು ಸಿದ್ಧಪಡಿಸಲು ಚಿತ್ರತಂಡ ಬರೋಬ್ಬರಿ ಆರು ವರ್ಷಗಳ ಕಾಲ ಶ್ರಮಿಸಿದೆಯಂತೆ!

ಸ್ವತಃ ನಿರ್ದೇಶಕ ನಿತೇಶ್ ತಿವಾರಿ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ

ಈ ಕುರಿತು ಸ್ವತಃ ನಿರ್ದೇಶಕ ನಿತೇಶ್ ತಿವಾರಿ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ಆಕ್ಷನ್ ದೃಶ್ಯವನ್ನು ಕಲ್ಪನೆಯ ಹಂತದಿಂದ ತೆರೆಮೇಲೆ ನೋಡುವ ಹಂತದವರೆಗೆ ತಲುಪಿಸಲು ಆರು ವರ್ಷಗಳು ಬೇಕಾಗಿವೆ ಎಂದು ಅವರು ತಿಳಿಸಿದ್ದಾರೆ. ಈ ದೃಶ್ಯದ ಹಿಂದೆ ನೂರಾರು ಕಲಾವಿದರು ಮಾತ್ರವಲ್ಲದೆ, ಸಾವಿರಾರು ತಂತ್ರಜ್ಞರ ಪರಿಶ್ರಮವೂ ಅಡಗಿದೆ. ಇಂತಹ ಸನ್ನಿವೇಶವನ್ನು ರೂಪಿಸಲು ತಂಡ ಪಟ್ಟಿರುವ ಶ್ರಮದ ಬಗ್ಗೆ ಗಂಟೆಗಟ್ಟಲೆ ವಿವರಿಸಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.

ಇನ್ನು ರಾವಣನ ಪುಷ್ಪಕ ವಿಮಾನದ ವಿನ್ಯಾಸವೂ ಅಷ್ಟೇ ವಿಶೇಷವಾಗಿದೆ. ಈ ವಿಮಾನಕ್ಕೆ ಅಂತಿಮ ರೂಪ ನೀಡಲು ಚಿತ್ರತಂಡ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದೆ. ವಿನ್ಯಾಸ ಕಲಾವಿದರು ಬರೋಬ್ಬರಿ 40ರಿಂದ 50 ವಿಭಿನ್ನ ಮಾದರಿಗಳನ್ನು ಸಿದ್ಧಪಡಿಸಿದ್ದರು. ಅವುಗಳನ್ನು ಪರಿಶೀಲಿಸಿದ ಬಳಿಕ ಅಂತಿಮವಾಗಿ ಸೂಕ್ತ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಆದರೆ, ಪುಷ್ಪಕ ವಿಮಾನದ ವಿನ್ಯಾಸ ಬದಲಾದಾಗ ಅದರ ಪರಿಣಾಮ ರಾವಣ ಮತ್ತು ಜಟಾಯು ನಡುವಿನ ಯುದ್ಧದ ದೃಶ್ಯದ ಮೇಲೂ ಬೀರಿದೆ. ವಿಮಾನದ ಹೊಸ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ಇಡೀ ಸಾಹಸ ಸನ್ನಿವೇಶವನ್ನು ಮರುರೂಪಿಸಬೇಕಾಯಿತು ಎಂದು ನಿತೇಶ್ ತಿಳಿಸಿದ್ದಾರೆ. ವಿಮಾನ ಕೇವಲ ಆಕಾಶದಲ್ಲಿ ಹಾರುವ ವಸ್ತುವಾಗಿ ಕಾಣಬಾರದು. ಅದರ ವಿನ್ಯಾಸದ ಹಿಂದೆ ವೈಜ್ಞಾನಿಕ ಹಾಗೂ ತಾರ್ಕಿಕ ಆಧಾರವೂ ಇರಬೇಕು ಎಂಬುದು ತಂಡದ ಉದ್ದೇಶವಾಗಿತ್ತು.

ಹೀಗಾಗಿ ‘ರಾಮಾಯಣ’ ಚಿತ್ರದ ಪ್ರತಿಯೊಂದು ಪ್ರಮುಖ ದೃಶ್ಯದ ಹಿಂದೆಯೂ ವರ್ಷಗಳ ಪರಿಶ್ರಮ ಅಡಗಿದೆ. ಪೌರಾಣಿಕ ಕಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ಅನುಭವವಾಗಿ ಕಟ್ಟಿಕೊಡಲು ಚಿತ್ರತಂಡ ನಡೆಸಿರುವ ಪ್ರಯತ್ನ ಇದೀಗ ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಜಗತ್ತಿನಾದ್ಯಂತ ಹೌಸ್‌ಫುಲ್ ಪ್ರದರ್ಶನ

ಅಂದಹಾಗೆ, ರಾಮಾಯಣ ಸಿನಿಮಾ ಜಗತ್ತಿನಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಮೊದಲ ನಾಲ್ಕು ದಿನಗಳ ಗಳಿಕೆಯೂ ಗಮನ ಸೆಳೆಯುತ್ತಿದೆ. ಗುರುವಾರ ಮೊದಲ ದಿನ ₹64.85 ಕೋಟಿ ನೆಟ್, ಶುಕ್ರವಾರ ₹48.05 ಕೋಟಿ ಹಾಗೂ ಶನಿವಾರ ₹69.80 ಕೋಟಿ ಗಳಿಸಿತ್ತು. ಭಾನುವಾರ ₹56.15 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ನಾಲ್ಕು ದಿನಗಳ ಭಾರತದಲ್ಲಿನ ಒಟ್ಟು ನೆಟ್ ಗಳಿಕೆಯನ್ನು ₹238.85 ಕೋಟಿಗೆ ತಲುಪಿಸಿದೆ. ದೇಶೀಯ ಗ್ರೋಸ್ ಕಲೆಕ್ಷನ್ ₹285.20 ಕೋಟಿ ಆಗಿದೆ.

ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ದ ನಾಗಾಲೋಟ ಮುಂದುವರಿದಿದೆ. ನಾಲ್ಕನೇ ದಿನ ಓವರ್‌ಸೀಸ್‌ನಲ್ಲಿ ₹45 ಕೋಟಿ ಗಳಿಸಿರುವ ಚಿತ್ರ, ಒಟ್ಟು ವಿದೇಶಿ ಗ್ರೋಸ್ ಕಲೆಕ್ಷನ್ ಅನ್ನು ₹214 ಕೋಟಿಗೆ ಹೆಚ್ಚಿಸಿಕೊಂಡಿದೆ. ಭಾರತ ಮತ್ತು ವಿದೇಶಗಳ ಗಳಿಕೆ ಸೇರಿ ವಿಶ್ವಾದ್ಯಂತ ಚಿತ್ರದ ಒಟ್ಟು ಗ್ರೋಸ್ ಸಂಗ್ರಹ ₹499.20 ಕೋಟಿ ತಲುಪಿದೆ.

ಹೀಗೆ ಕೇವಲ ನಾಲ್ಕು ದಿನಗಳಲ್ಲಿ ₹500 ಕೋಟಿ ಗಡಿಯ ಸಮೀಪ ಬಂದಿರುವ ‘ರಾಮಾಯಣ’, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆ ಮೂಡಿಸಿದೆ. ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಚಿತ್ರದ ಬಾಕ್ಸ್ ಆಫೀಸ್ ಓಟ ಮುಂದುವರಿದಿದ್ದು, ಈಗ ಎಲ್ಲರ ಕಣ್ಣು ₹500 ಕೋಟಿ ಕ್ಲಬ್ ಪ್ರವೇಶದ ಮೇಲೆ ನೆಟ್ಟಿದೆ.