ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಮೂರ್ತಿ ಹಾಗು ಪಧಾದಿಕಾರಿಗಳು ಭಾಗಿಯಾಗಿರುವ ಸಭೆಯಲ್ಲಿ ಇದೀಗ ಈ ನಟ ತಾವು ಆಡಿರುವ ಮಾತಿಗೆ ಸ್ಪಷ್ಟನೆ ಕೊಡಬೇಕಾಗಿದೆ. ಈ ವಿವಾದ ಇಲ್ಲಿಗೇ ತಣ್ಣಗಾಗುತ್ತದೆಯಾ? ಅಥವಾ, ಇನ್ನೇನೋ ಆಗಿ ಬೆಂಕಿ ಹೊತ್ತಿಕೊಳ್ಳಲಿದೆಯಾ? ಮುಂದೇನಾಗಲಿದೆ ಎಂಬ ಕುತೂಹಲವಂತೂ ಸೃಷ್ಟಿಯಾಗಿದೆ.
ಸತೀಶ್ ನೀನಾಸಂ 'ಅಯೋಗ್ಯ 2' ಸ್ಟೇಟ್‌ಮೆಂಟ್; ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾದ 'ಡ್ರಾಮಾ' ನಟ!
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸತೀಶ್ ನೀನಾಸಂ (Sathish Ninasam) ಸದಾ ಸುದ್ದಿಯಲ್ಲಿರುವ ಕಲಾವಿದ. ತಮ್ಮ ವಿಭಿನ್ನ ಮ್ಯಾನರಿಸಂ ಮತ್ತು ಮಣ್ಣಿನ ಸೊಗಡಿನ ಮಾತಿನಿಂದಲೇ ಅಭಿಮಾನಿಗಳನ್ನು ಸೆಳೆದಿರುವ ಸತೀಶ್, ಇತ್ತೀಚೆಗೆ ತಮ್ಮ 'ಅಯೋಗ್ಯ-2' ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ನೀಡಿದ ಒಂದು ಹೇಳಿಕೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಿರ್ಮಾಪಕರ ಬಗ್ಗೆ ಅವರು ಆಡಿದ ಮಾತುಗಳು ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದವು. ಆದರೆ, ಖಾರವಾಗಿ ಮಾತನಾಡಿದ್ದ ಸತೀಶ್ ಬಳಿಕ ನಿರ್ಮಾಪಕರ ಕ್ಷಮೆ ಕೇಳಿದ್ದಾರೆ. ಆದರೆ, ಈಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಹಾಡು ಬಿಡುಗಡೆ ವೇದಿಕೆಯಲ್ಲಿ ಸತೀಶ್ ಕೆಂಡಾಮಂಡಲ!
ಸಿನಿಮಾ ರಂಗ ಮುಳುಗುತ್ತಿದೆ, ಕನ್ನಡ ಚಿತ್ರಗಳು ಓಡುತ್ತಿಲ್ಲ ಎಂದು ಹಲುಬುವವರಿಗೆ ಸತೀಶ್ ನೀನಾಸಂ ವೇದಿಕೆಯಲ್ಲೇ ಚಾಟಿ ಏಟು ಕೊಟ್ಟಿದ್ದರು. "ಕನ್ನಡ ಚಿತ್ರರಂಗ ಅಣ್ಣವ್ರ ಕಾಲದಿಂದಲೂ ನಮಗೆ ಅನ್ನ ಕೊಟ್ಟಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಅದ್ಭುತ ಸಿನಿಮಾಗಳಿವೆ. ಅಯೋಗ್ಯ-2 ಇದೆ, ಕರಾವಳಿ ಇದೆ, ಡಾಲಿ ಅವರ ಮದರ್ ಪ್ರಾಮಿಸ್ ಇದೆ. ಈ ಸಿನಿಮಾಗಳು ಬಂದ ಮೇಲೆ ನೀವೇ ಭೇಷ್ ಅಂತೀರಾ" ಎಂದು ಸವಾಲು ಹಾಕಿದ್ದರು. ಆದರೆ, ಮಾತಿನ ಭರದಲ್ಲಿ ಅವರು ನಿರ್ಮಾಪಕರಿಗೂ ಒಂದು ಸಲಹೆ ನೀಡಿದ್ದರು. ಅದೇ ಅವರಿಗೆ ಮುಳುವಾಯಿತು.
‘ನಿರ್ಮಾಪಕರಿಗೆ ಶಿಕ್ಷಣ ಬೇಕು’ ಎಂದಿದ್ದೇಕೆ?
ಸತೀಶ್ ನೀನಾಸಂ ಅಂದು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ: "ಕೇವಲ ಸಿನಿಮಾ ಮಾಡುವುದು ಅಂದರೆ ದುಡ್ಡು ಹಾಕುವುದಲ್ಲ. ನಿರ್ಮಾಪಕರಿಗೆ ಸಿನಿಮಾದ ಮೇಕಿಂಗ್ ಬಗ್ಗೆ ಜ್ಞಾನವಿರಬೇಕು. ಸರಿಯಾದ ಶಿಕ್ಷಣ ಪಡೆದು, ಚಿತ್ರರಂಗವನ್ನು ಸ್ಟಡಿ ಮಾಡಿ ಆನಂತರ ಬನ್ನಿ. ಏನು ಗೊತ್ತಿಲ್ಲದೆ ಸಿನಿಮಾ ಮಾಡುವುದರಿಂದ ನಿರ್ಮಾಪಕರು ಸೋಲುತ್ತಿದ್ದಾರೆ, ಇದರಿಂದ ಹತ್ತು ಜನ ಹೊಸಬರು ಚಿತ್ರರಂಗಕ್ಕೆ ಬರಲು ಹೆದರುತ್ತಿದ್ದಾರೆ."
ಫಿಲ್ಮ್ ಚೇಂಬರ್ ಎಂಟ್ರಿ ಮತ್ತು ನಿರ್ಮಾಪಕರ ಸಂಘದ ಆಕ್ರೋಶ:
ಈ ಮಾತುಗಳು ನಿರ್ಮಾಪಕರ ವಲಯದಲ್ಲಿ ಕಿಚ್ಚು ಹಚ್ಚಿದವು. "ನಿರ್ಮಾಪಕರಿಗೆ ಬುದ್ಧಿ ಹೇಳಲು ಈತ ಯಾರು?" ಎಂಬ ಪ್ರಶ್ನೆಗಳು ಕೇಳಿಬಂದವು. ಸತೀಶ್ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಮೂರ್ತಿ ಮತ್ತು ಪದಾಧಿಕಾರಿಗಳು ತಕ್ಷಣವೇ ಸಭೆ ನಡೆಸಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಇದೀಗ ನಟ ನೀನಾಸಂ ನಟ ಸತೀಶ್ ನೀನಾಸಂ ಅವರನ್ನು ಫಿಲ್ಮ್ ಚೇಂಬರ್‌ಗೆ ಕರೆಸಿ ಸ್ಪಷ್ಟನೆ ಕೇಳಲಾಗಿದೆ. 'ನಿರ್ಮಾಪಕರು ಎಂದರೆ ಚಿತ್ರರಂಗದ ಬೆನ್ನೆಲುಬು, ಅವರಿಗೆ ಶಿಕ್ಷಣದ ಪಾಠ ಮಾಡುವುದು ಸರಿಯಲ್ಲ' ಎಂದು ನಿರ್ಮಾಪಕರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.
ಕೊನೆಗೂ ಕ್ಷಮೆ ಕೇಳಿದ 'ಅಯೋಗ್ಯ 2' ನಾಯಕ:
ಜೂನ್ 21 ರಂದು ಆಕ್ರೋಶದಿಂದ ಮಾತನಾಡಿದ್ದ ಸತೀಶ್, ಜೂನ್ 22 ರ ವೇಳೆಗೆ ತಣ್ಣಗಾಗಿದ್ದಾರೆ. 'ನನ್ನ ಹೇಳಿಕೆಯಿಂದ ನಿರ್ಮಾಪಕರಿಗೆ ನೋವಾಗಿದ್ದರೆ ಕ್ಷಮಿಸಿ' ಎಂದು ಅವರು ಬಹಿರಂಗವಾಗಿಯೇ ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ. "ನಾನು ಒಬ್ಬ ನಿರ್ಮಾಪಕನಾಗಿ ಸೋತಿದ್ದೇನೆ, ಸಾಕಷ್ಟು ಹಣ ಕಳೆದುಕೊಂಡು ಪಾಠ ಕಲಿತಿದ್ದೇನೆ. ನನ್ನ ಉದ್ದೇಶ ಹೊಸ ನಿರ್ಮಾಪಕರು ಮೋಸ ಹೋಗಬಾರದು ಮತ್ತು ಸಿನಿಮಾ ವಿಭಾಗಗಳ ಬಗ್ಗೆ ತಿಳಿದುಕೊಂಡಿರಲಿ ಎನ್ನುವುದಾಗಿತ್ತು. ಇದು ಸಿನಿಮಾ ಪ್ರೀತಿಯಿಂದ ಆಡಿದ ಮಾತೇ ಹೊರತು ಯಾರನ್ನೂ ಅವಮಾನಿಸುವ ಉದ್ದೇಶ ನನಗಿರಲಿಲ್ಲ" ಎಂದು ಸತೀಶ್ ಸ್ಪಷ್ಟನೆ ನೀಡಿದ್ದಾರೆ.
ಆದರೆ, ಇದೀಗ ನಿರ್ಮಾಪಕರು ನಟ ಸತೀಶ್ ನೀನಾಸಂ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ತಮ್ಮ ವಿರುದ್ಧ ಹೇಳಿಕೆ ನೀಡಿರುವ ನೀನಾಸಂ ಸತೀಶ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ.
ಮೊನ್ನೆ ನಡೆದ ಅಯೋಗ್ಯ 2 ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರ ವಿಚಾರವಾಗಿ 'ನಿರ್ಮಾಪಕರಿಗೆ ಸಿನಿಮಾ ಶಿಕ್ಷಣದ ಅಗತ್ಯವಿದೆ' ಎಂದಿದ್ದ ಸತೀಶ್ ಆ ಬಗ್ಗೆ ಕ್ಲಾರಿಟಿ ಕೊಡಬೇಕಾಗಿದೆ.
ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಮೂರ್ತಿ ಹಾಗು ಪಧಾದಿಕಾರಿಗಳು ಭಾಗಿಯಾಗಿರುವ ಸಭೆಯಲ್ಲಿ ಇದೀಗ ಈ ನಟ ತಾವು ಆಡಿರುವ ಮಾತಿಗೆ ಸ್ಪಷ್ಟನೆ ಕೊಡಬೇಕಾಗಿದೆ. ಈ ವಿವಾದ ಇಲ್ಲಿಗೇ ತಣ್ಣಗಾಗುವ ಲಕ್ಷಣ ಕಾಣುಸುತ್ತಿದ್ದರೂ ಮುಂದೇನಾಗಲಿದೆ ಎಂಬ ಕುತೂಹಲ ಸ್ಯಾಂಡಲ್‌ವುಡ್ ಹಾಗೂ ಸಿನಿಪ್ರೇಕ್ಷಕರ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

