ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಅಲ್ಲು ಅವರಿಗೆ ನ್ಯಾಯಾಲಯವು ಶಾಕ್ ಕೊಟ್ಟಿದೆ. "ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ.

ಪುಷ್ಪಾ ನಟ ಅಲ್ಲು ಅರ್ಜುನ್‌ಗೆ ಶಾಕ್ ಕೊಟ್ಟ ಕೋರ್ಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆಲುಗು ಚಿತ್ರರಂಗದ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ (Allu Arjun) ಅವರಿಗೆ ಸದ್ಯ ಕಾಲ ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸುತ್ತಿದೆ. ಒಂದೆಡೆ 'ಪುಷ್ಪ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಇನ್ನೊಂದೆಡೆ ನಿಜ ಜೀವನದಲ್ಲಿ 'ಬನ್ನಿ' ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರಿಗೆ ಈಗ ಸುಪ್ರೀಂ ಶಾಕ್ ಸಿಕ್ಕಿದೆ!

ಏನಿದು 'ಪುಷ್ಪ'ನಿಗೆ ಎದುರಾದ ವಿಘ್ನ?

2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್ ರಸ್ತೆಯ ಸಂಧ್ಯಾ ಥಿಯೇಟರ್‌ನಲ್ಲಿ 'ಪುಷ್ಪ 2' ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ನೂಕುನುಗ್ಗಲಿನಲ್ಲಿ ರೇವತಿ ಎಂಬ 39 ವರ್ಷದ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದರೆ, ಅವರ ಎಂಟು ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದನು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರು ತನಿಖೆ ನಡೆಸಿ ಅಲ್ಲು ಅರ್ಜುನ್ ಅವರನ್ನು ಎ-11 (A11) ಆರೋಪಿಯನ್ನಾಗಿ ಮಾಡಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಕೋರ್ಟ್‌ನಲ್ಲಿ ನಡೆದಿದ್ದೇನು?

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯವು ಅಲ್ಲು ಅರ್ಜುನ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಸದ್ಯ ಮುಂಬೈನಲ್ಲಿ ನಿರ್ದೇಶಕ ಅಟ್ಲಿ ಅವರ 'ರಾಕಾ' ಎಂಬ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ, ಅವರ ಪರ ವಕೀಲರು "ಶೂಟಿಂಗ್ ಇರುವುದರಿಂದ ಕೋರ್ಟ್‌ಗೆ ಬರಲು ಸಾಧ್ಯವಾಗುತ್ತಿಲ್ಲ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ನೀಡಿ" ಎಂದು ಮನವಿ ಮಾಡಿದ್ದರು.

ಆದರೆ, ನ್ಯಾಯಾಧೀಶರು ಈ ಮನವಿಯನ್ನು ಕಡ್ಡಿ ಮುರಿದಂತೆ ತಿರಸ್ಕರಿಸಿದ್ದಾರೆ! "ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ. ಇದು ನಟ ಅಲ್ಲು ಅರ್ಜುನ್ ಮತ್ತು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿದೆ.

ಜುಲೈ 6ಕ್ಕೆ ಡೇಟ್ ಫಿಕ್ಸ್!

ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ. ಅಂದು ಅಲ್ಲು ಅರ್ಜುನ್ ಯಾವುದೇ ಕಾರಣಕ್ಕೂ ಗೈರಾಗುವಂತಿಲ್ಲ. ಶೂಟಿಂಗ್ ಎಷ್ಟೇ ಇರಲಿ, ಅದನ್ನು ಬದಿಗಿಟ್ಟು ಕೋರ್ಟ್ ಮೆಟ್ಟಿಲು ಏರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದು ಮತ್ತು ಪೊಲೀಸ್ ಎಚ್ಚರಿಕೆಗಳನ್ನು ನಿರ್ಲಕ್ಷಿಸಿರುವುದು ಅಲ್ಲು ಅರ್ಜುನ್ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ, "ಪುಷ್ಪಾ ಅಂದ್ರೆ ಫ್ಲವರ್ ಅನ್ಕೊಂಡ್ರಾ.. ಫೈಯರ್" ಅಂತ ಡೈಲಾಗ್ ಹೊಡೆಯುತ್ತಿದ್ದ ನಟನಿಗೆ ಈಗ ಕಾನೂನಿನ ಕಿಚ್ಚು ತಗುಲಿದೆ. ಜುಲೈ 6ರಂದು ಅಲ್ಲು ಅರ್ಜುನ್ ಕೋರ್ಟ್‌ನಲ್ಲಿ ಏನು ಹೇಳಲಿದ್ದಾರೆ? ಈ ಕೇಸ್‌ನಿಂದ ಅವರು ಪಾರಾಗ್ತಾರಾ? ಕಾದು ನೋಡಬೇಕು.