ನಟಿ ರಶ್ಮಿಕಾ ಮಂದಣ್ಣ ಅವರು 'ರಣಬಾಲಿ' ಅಥವಾ 'ಮೈಸಾ' ಚಿತ್ರದ ಶೂಟಿಂಗ್ ವೇಳೆ ನೃತ್ಯ ಮತ್ತು ಸಾಹಸ ದೃಶ್ಯ ಚಿತ್ರೀಕರಿಸುವಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಂಟಕ್ಕೆ ಪೆಟ್ಟು ಬಿದ್ದಿರುವ ಕಾರಣ ವೈದ್ಯರು ಅವರಿಗೆ ಕನಿಷ್ಠ 6 ವಾರಗಳ ಸಂಪೂರ್ಣ ವಿಶ್ರಾಂತಿ ಮತ್ತು ಪುನರ್ವಸತಿ ಚಿಕಿತ್ಸೆಯನ್ನು ಸೂಚಿಸಿದ್ದು, ಅವರ ಎಲ್ಲಾ ಚಿತ್ರೀಕರಣಗಳನ್ನು ಮುಂದೂಡಲಾಗಿದೆ.

ನಟಿ ರಶ್ಮಿಕಾ ಮಂದಣ್ಣ ನೃತ್ಯ ಮತ್ತು ಸಾಹಸ ದೃಶ್ಯ ಚಿತ್ರೀಕರಿಸುವ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ ಕೆಳಗೆ ಬಿದ್ದ ರಭಸಕ್ಕೆ ಅವರ ಸೊಂಟಕ್ಕೆ ಪೆಟ್ಟು ಬಿದ್ದಿದೆ.

ಸೆಟ್‌ನಲ್ಲಿ ನಡೆದಿದ್ದೇನು?

ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರಗಳಾದ ‘ರಣಬಾಲಿ’ (Ranabaali) ಅಥವಾ ‘ಮೈಸಾ’ (Mysaa) ಸಿನಿಮಾದ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಠಿಣವಾದ ನೃತ್ಯ ಮತ್ತು ಸಾಹಸ ದೃಶ್ಯಗಳ ಶೂಟಿಂಗ್ ಸಮಯದಲ್ಲಿ ರಶ್ಮಿಕಾ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಿತ್ರತಂಡದ ಸದಸ್ಯರು ಶೂಟಿಂಗ್ ಅನ್ನು ಸ್ಥಗಿತಗೊಳಿಸಿ, ರಶ್ಮಿಕಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಶ್ಮಿಕಾ ಅವರ ದೇಹಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು ತುರ್ತು ಚಿಕಿತ್ಸೆಗೆ ಮುಂದಾಗಿದ್ದಾರೆ. ನಟ-ನಟಿಯರಲ್ಲಿ ತೀವ್ರವಾದ ಸ್ನಾಯುರಜ್ಜು ಹಾನಿ ಕಂಡುಬರುವುದು ಬಹಳ ಅಪರೂಪ. ಸಾಮಾನ್ಯವಾಗಿ ದಿನವಿಡೀ ಕಠಿಣ ದೈಹಿಕ ಕಸರತ್ತು ನಡೆಸುವ ವೃತ್ತಿಪರ ಅಥ್ಲೀಟ್‌ಗಳಲ್ಲಿ ಇಂತಹ ಗಾಯಗಳು ಕಂಡುಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರಿಗೆ ಕನಿಷ್ಠ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ರಶ್ಮಿಕಾ ಮೊದಲಿನಂತಾಗಲು ವಿಶೇಷ ಪುನರ್ವಸತಿ (Rehabilitation) ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರ ಎಲ್ಲಾ ಸಿನಿಮಾಗಳ ಚಿತ್ರೀಕರಣ ಹಾಗೂ ಜಾಹೀರಾತು ಶೂಟಿಂಗ್‌ಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮದುವೆಯ ನಂತರ ಶೂಟಿಂಗ್‌ಗೆ ಮರಳಿದ್ದರು

ಖ್ಯಾತ ನಟ ವಿಜಯ್ ದೇವರಕೊಂಡ ಅವರನ್ನು ವಿವಾಹವಾದ ನಂತರ ರಶ್ಮಿಕಾ ಇತ್ತೀಚೆಗಷ್ಟೇ ‘ಮೈಸಾ’ ಸಿನಿಮಾದ ಚಿತ್ರೀಕರಣಕ್ಕೆ ಮರಳಿದ್ದರು. ಈ ಅಪಘಾತದಿಂದಾಗಿ ಅವರ ಮುಂದಿನ ಯೋಜನೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ರವೀಂದ್ರ ಪುಲ್ಲೆ ನಿರ್ದೇಶನದ, ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ Mysaa ಸಿನಿಮಾವು ಗೋಂಡಾ ಬುಡಕಟ್ಟು ಜನಾಂಗದ ಹಿನ್ನೆಲೆಯುಳ್ಳ ಭಾವನಾತ್ಮಕ ಸಾಹಸ ಚಿತ್ರವಾಗಿದೆ. ಇದರಲ್ಲಿ ರಶ್ಮಿಕಾ ಗೋಂಡಾ ಮಹಿಳೆಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ ಗಾಯದ ತೀವ್ರತೆಯ ಸುದ್ದಿ ಕೇಳಿ ಅವರ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.