ನೀವು ಕರೆ ಮಾಡಿದ ಚಂದಾದಾರರು... ದಿನನಿತ್ಯವೂ ನೀವು ಕೇಳುವ ದನಿ ಯಾರದ್ದು ಗೊತ್ತಾ? ಪ್ರತಿದಿನ ನಿಮ್ಮ ಮನೆಯ ಟಿವಿಯಲ್ಲಿ ಬರ್ತಾರೆ ಇವರು. ಅವರೇ ಅಣ್ಣಯ್ಯ ಸೀರಿಯಲ್ ಸುಮತಿ!
ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ... ಚಂದಾದಾರರು ವ್ಯಾಪ್ತಿಪ್ರದೇಶದಿಂದ ದೂರವಿದ್ದಾರೆ, ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ... ಹೀಗೆ ಎಷ್ಟೋ ಬಾರಿ ನೀವು ಫೋನ್ನಲ್ಲಿ ಕೇಳಿಯೇ ಇರುತ್ತೀರಿ. ಫೋನ್ ಮಾಡಿದಾಗ ಈ ದನಿ ಬಂತು ಎಂದರೆ, 'ಅಯ್ಯಯ್ಯೋ' ಎಂದು ಅದೆಷ್ಟೋ ಬಾರಿ ಹೇಳಿರುತ್ತೀರಿ. ಯಾರಿಗೆ ಫೋನ್ ಮಾಡುತ್ತಿರೋ ಅವರು ಬಿಜಿಯಾಗಿದ್ದರೆ ಅಥ್ವಾ ನೆಟ್ವರ್ಕ್ ಪ್ರದೇಶದಿಂದ ದೂರವಿದ್ದರೆ, ಸ್ವಿಚ್ ಆಫ್ ಆಗಿದ್ದರೆ ಈ ದನಿ ಬಂದ ತಕ್ಷಣ ಅರೆಕ್ಷಣ ಸಿಟ್ಟು ಬರುವುದು ಇದ್ದೇ ಇದೆ. ಆದರೆ ಈ ಸುಮಧುರ ದನಿ ಯಾರದ್ದು ಎನ್ನುವುದು ನಿಮಗೆ ಗೊತ್ತಾ? ಅವರೇ ಅಣ್ಣಯ್ಯ ಸೀರಿಯಲ್ನ ಸುಮತಿ!
ಹೌದು. ಜೀ ಕನ್ನಡದ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ನಲ್ಲಿ ಸುಮತಿ ಪಾತ್ರದಲ್ಲಿ ನಟಿಸ್ತಿರೋ ನಟಿಯೇ ಈ ದನಿ ನೀಡಿದವರು. ಇವರ ಹೆಸರು ಕುಮುದವಲ್ಲಿ ಅರುಣ್ ಮೂರ್ತಿ. ಇವರು ನಟಿ ಮಾತ್ರವಲ್ಲದೇ ರೇಡಿಯೋ ಜಾಕಿ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ರಂಗಭೂಮಿಯ ಕಲಾವಿದೆ ಕೂಡ. ಡಬ್ಬಿಂಗ್ ಕಲಾವಿದೆಯಾಗಿರುವ ಇವರಿಗೆ ಇದಾಗಲೇ EFFATHA ಎಕ್ಸಲೆನ್ಸ್ ಅವಾರ್ಡ್ ಸೇರಿ ಕೆಲವು ಪ್ರಶಸ್ತಿ, ಸನ್ಮಾನಗಳೂ ಸಂದಿವೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುಮುದವಲ್ಲಿ ಅವರು ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಕಲೆ ಎನ್ನುವುದು ಇವರಿಗೆ ಬಾಲ್ಯದಲ್ಲಿಯೇ ಒಲಿದಿದೆ. ಶಾಲೆಯಲ್ಲಿ ಇರುವಾಗಲೇ ನಾಟಕ ಬರೆದು ಅಭಿನಯಿಸಿದ್ದರು. ಅಲ್ಲಿಂದಲೇ ನಟಿಯಾಗುವ ಹಂಬಲವೂ ಬೆಳೆದಿತ್ತು. ಬಳಿಕ ಅವರು ದನಿ ಕಲಾವಿದೆ (Voice Over Artist) ಆಗಿ ಗುರುತಿಸಿಕೊಂಡರು. ಹಿನ್ನೆಲೆ ದನಿ ಕೂಡ ನೀಡಿದ್ದಾರೆ ಕುಮುದವಲ್ಲಿ. ಇವರಲ್ಲಿ ಪ್ರಮುಖರು ಎಂದರೆ ನಟಿ ಪ್ರಿಯಾಂಕಾ ಉಪೇಂದ್ರ. ಇವರಿಗೆ ರಿಯಾಲಿಟಿ ಷೋ ಒಂದರಲ್ಲಿ ಹಿನ್ನೆಲೆ ದನಿ ನೀಡಿರುವುದಾಗಿ ಹೇಳಿದ್ದಾರೆ.
ಅಂದಹಾಗೆ ಕುಮುದವಲ್ಲಿ ಅರುಣ್ ಮೂರ್ತಿ ಅವರು ಸಿನಿಮಾದಲ್ಲಿಯೂ ನಟಿಸಿದ್ದಾರೆ. ʻಮುಗುಳುನಗೆʼ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅಮ್ಮನ ಪಾತ್ರದಲ್ಲಿ ಇವರು ನಟಿಸಿದ್ದರು.
ಮೊದಲಿಗೆ ಪ್ರಿಯಾಂಕಾ ಉಪೇಂದ್ರ ಅವರಿಗೆ ದನಿ ನೀಡಿದ ಬಳಿಕ, ಆಕಾಶವಾಣಿಯಲ್ಲಿಯೂ ಇವರಿಗೆ ಅವಕಾಶ ಸಿಕ್ಕಿತು. ಕ್ರಾಂತಿ ನಾಟಕದಿಂದ ರಂಗಭೂಮಿಯಲ್ಲಿಯೂ ಗುರುತಿಸಿಕೊಂಡರು. ಅವರ ನಟನೆಯನ್ನು ನೋಡಿ ಕಿರುಚಿತ್ರದಲ್ಲಿಯೂ ಅವಕಾಶ ಸಿಕ್ಕಿತು. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬೆಂಗಳೂರಿನವರೆಗೆ ಇವರ ಪಯಣ ಬಹುದೊಡ್ಡದಾಗಿದೆ. ಗ್ರಾಮೀಣ ಪ್ರತಿಭೆಯಾಗಿರುವ ಇವರು ಇಂದು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
