ನಾಟಕಕ್ಕಾಗಿ ಮೊದಲ ಬಾರಿಗೆ ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಎಲ್ಲಾ ಸುಟ್ಟುಕೊಂಡು ಪಡಬಾರದ ಪಾಡುಪಟ್ಟ ಬಗ್ಗೆ ನಟ ವಿನಯ್ ಕಶ್ಯಪ್ ಹೇಳಿದ್ದಾರೆ ಕೇಳಿ...
ಬೆಳ್ಳಿತೆರೆ ಮಾತ್ರವಲ್ಲದೇ, ಹಲವಾರು ಸೀರಿಯಲ್ಗಳಲ್ಲಿ ಮಿಂಚುತ್ತಿರುವ ನಟ ವಿನಯ್ ಕಶ್ಯಪ್ ಅವರು ಬೀಡಿ ಸೇಯಲು ಹೋಗಿ ತುಟಿ, ರೆಪ್ಪೆ ಎಲ್ಲಾ ಸುಟ್ಟುಕೊಂಡಿರುವ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಅಶ್ವವೇಗ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ, ವಿನಯ್ ಅವರು ಹಿಂದೊಮ್ಮೆ ನಾಟಕದ ಸಮಯದಲ್ಲಿ ಅನಿವಾರ್ಯವಾಗಿ ಬೀಡಿ ಸೇದುವಂತಾಗಿದ್ದ ಬಗ್ಗೆ ವಿವರಿಸಿದ್ದಾರೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ನಟ, ತರಂಗ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ನಾಟಕ ಮಾಡುವ ಸಮಯದಲ್ಲಿ ಆದ ಆವಾಂತರದ ಬಗ್ಗೆ ಈಗ ವಿವರಿಸಿದ್ದಾರೆ. ಡ್ರಾಮಾ ಎಂದ ಮೇಲೆ ಆ ಪಾತ್ರ ಮಾಡಲೇಬೇಕಿತ್ತು. ಬೀಡಿ ಸೇದಲೇಬೇಕಿತ್ತು. ನಾನು ಎಂದಿಗೂ ಸ್ಮೋಕ್ ಮಾಡಿದವನಲ್ಲ. ಮೊದಲ ಬಾರಿಗೆ ಬೀಡಿ ಸೇದಲು ಪ್ರಯತ್ನಿಸಿದಾಗ ತುಟಿ, ರೆಪ್ಪೆ ಎಲ್ಲಾ ಸುಟ್ಟುಹೋಯಿತು. ಕೆಲವು ದಿನಗಳವರೆಗೆ ಮನೆಯವರ ಜೊತೆಯೂ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.
ಇನ್ನು ವಿನಯ್ ಕಶ್ಯಪ್ ಕುರಿತು ಹೇಳುವುದಾದರೆ, ಕೋಟಿಗೊಬ್ಬಳು, ಟ್ರೈನ್ ಟು ಪಾಕಿಸ್ತಾನ್ ಎಂಬ ನಾಟಕಗಳಲ್ಲಿ ನಟಿಸಿರುವ ಇವರು, ಬೀದಿ ನಾಟಕಗಳಲ್ಲಿಯೂ ತರಬೇತಿ ಪಡೆದುಕೊಂಡಿದ್ದಾರೆ. ರಂಗಭೂಮಿ, ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸೇವಂತಿ ಧಾರಾವಾಹಿಯಲ್ಲಿ ಅಶ್ವಿನ್ ಪಾತ್ರದಲ್ಲಿ ಮತ್ತು ಸ್ಟಾರ್ ಸುವರ್ಣ ವಾಹಿನಿಯ ಅರಮನೆ ಧಾರಾವಾಹಿಯಲ್ಲಿ ಅರುಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಬೆಳ್ಳಿಪರದೆಯಲ್ಲಿಯೂ ಮಿಂಚಿದ್ದ ಅವರು, ಗದಾಯುದ್ಧ ಸಿನಿಮಾದಲ್ಲಿಯೂ ಬಣ್ಣಹಚ್ಚಿದ್ದಾರೆ. ಆ ಕಡೆ ಸಿನಿಮಾ ಇಂಡಸ್ಟ್ರಿಗೂ ಕಾಲಿರುವ ವಿನಯ್ ಕಶ್ಯಪ್ 'ಮೃಗಶಿರಾ' ಖ್ಯಾತಿಯ ನಿರ್ದೇಶಕ ಶ್ರೀವತ್ಸ ಅವರ 'ಗದಾಯುದ್ಧ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ.
ಧಾರಾವಾಹಿ ಹಾಗೂ ಸಿನಿಮಾ ಹೊರತು ಪಡಿಸಿ ಕೆಲವು ಸ್ಟೇಜ್ ಕಾರ್ಯಕ್ರಮಗಳು ಹಾಗೂ ಅವಾರ್ಡ್ ಕಾರ್ಯಕ್ರಮಗಳಲ್ಲೂ ಮಿಂಚಿದ್ದಾರೆ. 2018ರ ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಒಂದು ಸ್ಟ್ರಾಂಗ್ ಕಾಫಿ ಕಿರುಚಿತ್ರದ ಅಭಿನಯಕ್ಕೆ ಉತ್ತಮ ಪ್ರಶಂಸೆ ಪಡೆದುಕೊಂಡಿದ್ದರು.
