ಲಿಂಗರಾಜು ಕೋರಾ

ಬೆಂಗಳೂರು [ನ.06]:  ಅದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗವಾಗಲಿ ಅಥವಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿಯೇ ಆಗಿರಲಿ. ಸದಾ ಅಲ್ಲಿ ಉತ್ತರ ಭಾರತೀಯರ ಪ್ರಾಬಲ್ಯವೇ ಹೆಚ್ಚು. ಇದರ ಪರಿಣಾಮ- ಗುಣಮಟ್ಟದ ಕನ್ನಡ ಚಿತ್ರಗಳಿದ್ದರೂ ಅವು ಪನೋರಮಾದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುವುದಿಲ್ಲ. ಅಷ್ಟೆಅಲ್ಲ, ಕನ್ನಡದ ತಾರೆಯರು ಗಣನೀಯ ಸೇವೆ ಸಲ್ಲಿಸಿದ್ದರೂ ಪ್ರಶಸ್ತಿಗಳು ಮಾತ್ರ ಗಗನ ಕುಸುಮವಾಗುತ್ತವೆ.

ಅಷ್ಟೇ ಅಲ್ಲ, ಹಿಂದಿ ಚಿತ್ರಗಳಿಗೆ ಸಿಗುವಷ್ಟುಸಲೀಸಲಾಗಿ ಕನ್ನಡ ಸೇರಿದಂತೆ ಪ್ರಾದೇಶಿಕ ಚಿತ್ರಗಳಿಗೆ ಸೆನ್ಸಾರ್‌ ಮಂಡಳಿಯ ಒಪ್ಪಿಗೆಯೂ ದೊರೆಯುವುದಿಲ್ಲ. ಭಾರತೀಯ ಚಿತ್ರಗಳೆಂದರೆ ಕೇವಲ ಹಿಂದಿ ಚಿತ್ರಗಳೆನ್ನುವ ಸಂಕುಚಿತ ಮನಸ್ಥಿತಿಯ ಪರಿಣಾಮವಾಗಿ ಭಾರತೀಯ ಚಿತ್ರೋದ್ಯಮವೇ ಹಿಂದಿವಾಲಾಗಳ ಕಪಿಮುಷ್ಟಿಯಲ್ಲಿದೆ.

ಇನ್ನು, ರಂಗಭೂಮಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಲ್ಲಿ ಸಾಕಷ್ಟುಅನುದಾನಗಳನ್ನು ಪಡೆಯಬಹುದಾದ ಸೌಲಭ್ಯಗಳಿದ್ದರೂ, ಅವುಗಳ ಬಗ್ಗೆ ನಮ್ಮ ಆಡಳಿತ ವರ್ಗ, ಸಂಸದರು, ಅಧಿಕಾರಿ ವರ್ಗ ಸಾಕಷ್ಟುಪ್ರಚಾರ ಅಥವಾ ಮಾಹಿತಿ ನೀಡದೆ ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ಸಿಗಬೇಕಾದ ಸೌಲಭ್ಯಗಳು, ಅನುದಾನಗಳ ಬಳಕೆಯೇ ಆಗುತ್ತಿಲ್ಲ ಎಂದು ಕನ್ನಡ ರಂಗಭೂಮಿ ತಜ್ಞರು ಆರೋಪಿಸುತ್ತಾರೆ.

ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸಿನಿಮಾಗಳು ನಿರ್ಮಾಣವಾಗಿದ್ದು ಕನ್ನಡದಲ್ಲಿ. 2018ರಲ್ಲಿ 248 ಚನಲಚಿತ್ರಗಳು, 2017ರಲ್ಲಿ ಸುಮಾರು 205 ಚಲನಚಿತ್ರಗಳು ಬಿಡುಗಡೆಯಾಗಿವೆ. ಇನ್ನು, ಪ್ರಸಕ್ತ ವರ್ಷವೂ ಈಗಾಗಲೇ 175ಕ್ಕೂ ಹೆಚ್ಚು ಚಿತ್ರಗಳ ನಿರ್ಮಾಣವಾಗಿದ್ದು, ವರ್ಷಾಂತ್ಯದ ವೇಳೆಗೆ ಈ ಸಂಖ್ಯೆ 200ರ ಗಡಿ ದಾಟುವ ಸಾಧ್ಯತೆಗಳಿವೆ.

ಛೀ..ಛೀ.. ಆಂಟಿ ಅಂದವನಿಗೆ 'ಆ' ಪದ ಬಳಸಿದ ಸ್ವರಾಗೆ ಮಂಗಳಾರತಿ!...

ಕೇವಲ ಸಂಖ್ಯೆಯಲ್ಲಿ ಮಾತ್ರವಲ್ಲದೆ, ಗುಣಮಟ್ಟದಲ್ಲೂ ಕನ್ನಡದ ಸಿನಿಮಾಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರ ಗಮನ ಸೆಳೆದಿದೆ. ಆದಾಗ್ಯೂ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಕನ್ನಡದ ಸಿನಿಮಾಗಳು ಆಯ್ಕೆಯಾಗುವುದಿಲ್ಲ. 2018ರಲ್ಲಿ ಕನ್ನಡದ ಒಂದು ಸಿನೆಮಾ ಕೂಡ ಆಯ್ಕೆಯಾಗಲಿಲ್ಲ. ಇನ್ನು, ಈ ಬಾರಿ ಪನೋರಮಾಗೆ ಕನ್ನಡದ ‘ರಂಗನಾಯಕಿ’ ಸಿನಿಮಾ ಮಾತ್ರ ಆಯ್ಕೆಯಾಗಿದೆ. ಗಂಟು ಮೂಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂತಹ ಇನ್ನೂ ಹಲವು ಚಲನಚಿತ್ರಗಳು ಅರ್ಹತೆ ಇದ್ದರೂ ಆಯ್ಕೆಯಾಗಿಲ್ಲ. ಇದಕ್ಕೆ ಕನ್ನಡದ ಪರ ಲಾಬಿ ಹಿಂದಿವಾಲಾಗಳ ನಾಡಾದ ದೆಹಲಿಯಲ್ಲಿ ಪ್ರಬಲವಾಗಿಲ್ಲ ಎಂಬುದೇ ಕಾರಣ.

ದಕ್ಷಿಣದವರಿಗೆ ಪ್ರಶಸ್ತಿ ನೀಡಿಕೆಯಲ್ಲೂ ಅನ್ಯಾಯ:

ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಭಾರತದ ಅತ್ಯುತ್ತಮ ನಾಯಕ ನಟ, ನಟಿಯರಿಗೆ ಶ್ರೇಷ್ಠ ನಟ, ನಟಿ ಪ್ರಶಸ್ತಿ ಸಿಕ್ಕಿಲ್ಲ. ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ, ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿ ಸಿಗುವುದೂ ತಡವಾಯಿತು ಎಂದು ಚಿತ್ರ ವಿಮರ್ಶಕ ಪುಟ್ಟಸ್ವಾಮಿ ಅವರು ಹೇಳುತ್ತಾರೆ.

ಪ್ರೋತ್ಸಾಹಧನದಲ್ಲಿ ವಿಳಂಬ ಧೋರಣೆ:

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಪ್ರಾದೇಶಿಕ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿ ಸುಮಾರು 10 ಲಕ್ಷ ರು. ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಆದರೆ, ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದರೆ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಅನುಮೋದನೆ ದೊರೆಯುವುದು ತೀರಾ ವಿಳಂಬವಾಗಿ.

ಇನ್ನು ದೂರದರ್ಶನದಲ್ಲಿ ಧಾರಾವಾಹಿ, ಕೆಲ ಸಂಚಿಕೆಗಳ ಆಯ್ಕೆ, ಪ್ರಸಾರಕ್ಕೆ ತೀವ್ರ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಬೆಂಗಳೂರು ದೂರದರ್ಶನದಲ್ಲಿ ಎರಡು ವರ್ಷದ ಹಿಂದೆ ಆಯ್ಕೆಯಾಗಿರುವ ಧಾರಾವಾಹಿಗಳ ಚಿತ್ರೀಕರಣಕ್ಕೆ ಇನ್ನೂ ಕೂಡ ಅವಕಾಶ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಪ್ರಾದೇಶಿಕ ದೂರದರ್ಶನ ಕೇಂದ್ರಗಳಿಗೆ ಹೆಚ್ಚಿನ ಅನುದಾನ ನೀಡಿ ಈ ವಿಳಂಬ ನೀತಿ ಸರಿಪಡಿಸಬೇಕು. ಇಲ್ಲದಿದ್ದರೆ ಆ ಯೋಜನೆಗಳೇ ನಿಂತುಹೋಗುವ ಸ್ಥಿತಿ ತಲುಪುತ್ತವೆ ಎಂದು ಚಿತ್ರ ನಿರ್ದೇಶಕರೂ ಆದ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳುತ್ತಾರೆ.

200ಕ್ಕೂ ಹೆಚ್ಚು ಸಿನೆಮಾ

ಸೆನ್ಸಾರ್‌ಗೆ ಒಬ್ಬರೇ ಅಧಿಕಾರಿ:  ಇನ್ನು, ಸೆನ್ಸಾರ್‌ ಮಂಡಳಿ ವಿಚಾರಕ್ಕೆ ಬಂದರೆ ಕನ್ನಡ ಚಿತ್ರರಂಗದಲ್ಲಿ ಪ್ರತಿ ವರ್ಷ ಬಿಡುಗಡೆಯಾಗುತ್ತಿರುವ 200ಕ್ಕೂ ಹೆಚ್ಚು ಚಿತ್ರಗಳ ಸೆನ್ಸಾರ್‌ ಮಾಡಿ ಪ್ರಮಾಣ ಪತ್ರ ನೀಡಲು ಇರುವುದು ಒಬ್ಬರೇ ಅಧಿಕಾರಿ. ಅವರ ಅಡಿ ಕೆಲ ಸದಸ್ಯರು ಇದ್ದಾರೆ. ಇನ್ನು, ಚಲನಚಿತ್ರಗಳಿಗೆ ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ಸಮಿತಿಯ ಅನುಮತಿ ಪಡೆಯುವುದು ಇನ್ನೂ ದೊಡ್ಡ ಸಮಸ್ಯೆ. ಏಕೆಂದರೆ, ಇಡೀ ದೇಶದಲ್ಲಿ ಪ್ರತಿ ವರ್ಷ ಬಿಡುಗಡೆಯಾಗುವ 1500 ಚಿತ್ರಗಳಿಗೆ ಪ್ರಮಾಣ ಪತ್ರ ಕೊಡಲು ಚಂಡೀಗಢದಲ್ಲಿ ಒಂದೇ ಕಚೇರಿ ಇದೆ. ಹೀಗಾಗಿ ಈ ಅನುಮತಿಗಳು ದೊರೆಯುವುದು ತೀರಾ ವಿಳಂಬವಾಗುತ್ತಿದೆ. ಹಾಗಾಗಿ ದಕ್ಷಿಣ ಭಾಗವೂ ಸೇರಿದಂತೆ ದೇಶದ ನಾಲ್ಕು ಭಾಗಗಳಲ್ಲೂ ಒಂದೊಂದು ವಿಭಾಗೀಯ ಸೆನ್ಸಾರ್‌ ಮಂಡಳಿಯನ್ನು ಆರಂಭಿಸಬೇಕು ಎಂದು ದಶಕಗಳಿಂದ ಕೇಳುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಕಿಮ್ಮತ್ತೇ ನೀಡುತ್ತಿಲ್ಲ ಎನ್ನುತ್ತಾರೆ ನಿರ್ದೇಶಕ ಬಿ. ಸುರೇಶ್‌.

ರಂಗಭೂಮಿಗೆ ಸಿಗುತ್ತಿಲ್ಲ ಅನುದಾನ

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಲ್ಲಿ ರಂಗಭೂಮಿ ಹಾಗೂ ಜನಪದ ತಂಡಗಳಿಗೆ ವಾರ್ಷಿಕ ಅನುದಾನ ನೀಡುವ ಪದ್ಧತಿಗಳಿವೆ. ಅನುದಾನ ಹಂಚಿಕೆಗೆ ತಂಡಗಳ ಆಯ್ಕೆ ಮಾಡುವ ಸಮಿತಿಯಲ್ಲಿ ನಮ್ಮ ರಾಜ್ಯದ ಸದಸ್ಯರೂ ಇರುತ್ತಾರೆ. ಆದರೆ, ಇಲ್ಲಿಯೂ ಕೂಡ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದವರಿಗೆ ಪ್ರಾತಿನಿಧ್ಯ ಕಡಿಮೆ ಇದೆ. ಇದರ ಪರಿಣಾಮವಾಗಿ ಪ್ರಾದೇಶಿಕ ರಂಗಭೂಮಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಇದು ತಪ್ಪಬೇಕಾದರೆ ಇಂತಹ ಸಮಿತಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಾಗಿದೆ. ಜತೆಗೆ, ಇಂತಹ ಸೌಲಭ್ಯವಿದೆ ಎಂಬ ಮಾಹಿತಿಯನ್ನು ಪ್ರಾದೇಶಿಕ ರಂಗ ಭೂಮಿಗೆ ತಲುಪಿಸಬೇಕಿದೆ. ಇದರಲ್ಲಿ ರಾಜ್ಯದ ಸಂಸದರ ಪಾತ್ರ ದೊಡ್ಡದು. ಪ್ರಾದೇಶಿಕ ರಂಗಭೂಮಿಗೆ ಹೆಚ್ಚಿನ ಅನುದಾನ ಒದಗುವಂತೆ ಮಾಡಲು ಸಂಸದರು ಸಂಸತ್ತಿನಲ್ಲಿ ಧ್ವನಿಯೆತ್ತಬೇಕು ಎಂದು ಬರಗೂರು ರಾಮಚಂದ್ರಪ್ಪ ಹೇಳುತ್ತಾರೆ.

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಸಿನೆಮಾಗಳ ಆಯ್ಕೆ ಮಾಡುವ ಸಮಿತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಸಮಿತಿಗಳಲ್ಲಿ ಉತ್ತರ ಭಾರತೀಯ ಅಥವಾ ಹಿಂದಿ ಚಿತ್ರೋದ್ಯಮದ ಸದಸ್ಯರ ಪ್ರಾಬಲ್ಯ ಹೆಚ್ಚು. ಇದರಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಈ ಅಸಮಾನತೆ ಸರಿಯಾಗಬೇಕಿದೆ. ಇದಕ್ಕೆ ನಮ್ಮ ಸಂಸದರು ಸಂಸತ್ತಿನಲ್ಲಿ ಧ್ವನಿಯೆತ್ತಬೇಕು.

- ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

ಒಕ್ಕೂಟ ವ್ಯವಸ್ಥೆಯಲ್ಲಿದ್ದರೂ ಚಲನಚಿತ್ರ, ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ದಕ್ಷಿಣದ ರಾಜ್ಯಗಳಿಗೆ ಮೊದಲಿಂದಲೂ ಅನ್ಯಾಯ ನಡೆಯುತ್ತಲೇ ಬಂದಿದೆ. ಈ ಅನ್ಯಾಯ ಸರಿಪಡಿಸುವ ಕೆಲಸ ಕೇಂದ್ರದಿಂದ ಆಗಬೇಕು. ಅದು ನಮ್ಮ ಸಂಸದರ ಮೂಲಕ ಆಗಬೇಕಿರುವ ಕೆಲಸ. ಆದರೆ, ತಾವು ಪ್ರತಿನಿಧಿಸುವ ರಾಜ್ಯ, ಜನರ ಪರ ಮಾತನಾಡುವ ಶಕ್ತಿಯನ್ನೇ ಇಂದಿನ ಸಂಸದರು ಕಳೆದುಕೊಂಡು ಯಾರದ್ದೋ ಮರ್ಜಿಗೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ ಎನಿಸುತ್ತದೆ.

- ಬಿ.ಸುರೇಶ್‌, ಚಿತ್ರ ನಿರ್ದೇಶಕ