ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಾಮೆಂಟ್‌ಗಳು ಬಂದಿವೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ನಟಿ ರಮ್ಯಾ ಅವರಿಗೂ ಇದೇ ರೀತಿಯ ಅವಮಾನ ಮಾಡಲಾಗಿತ್ತು.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್‌ಗಳ ಪ್ರಕರಣಗಳು ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್‌ ಮಾಡಿದನೆಂದು ಚಿತ್ರ ದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ದರ್ಶನ್ ಸಹಿತ ಡಿ ಗ್ಯಾಂಗ್ ಈಗ ಜೈಲು ಸೇರಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ನಟಿ ರಮ್ಯಾಗೂ ದರ್ಶನ್ ಅಭಿಮಾನಿಗಳು ಕೆಟ್ಟ ಕಮೆಂಟ್ ಮಾಡಿ ಕೇಸು ಹಾಕಿಸಿಕೊಂಡರು. ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಅಸಭ್ಯ ಕಮೆಂಟ್‌ ಮಾಡಲಾಗಿದೆ. ಇದೀಗ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಶ್ಲೀಲ ಕಾಮೆಂಟ್‌ ಮಾಡಿದ ಖಾತೆಗಳ ವಿರುದ್ಧ ಪಿ.ಎಸ್.ಐ ಲೋಕೇಶ್ ರಿಂದ ದೂರು ದಾಖಲಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಟ್ವಿಟರ್ ನಲ್ಲಿ ಅಸಭ್ಯ ಪದ ಬಳಸಿ ನಿಂದನೆ ಮಾಡಲಾಗಿದೆ. ಈ ಫೋಸ್ಟ್ ಮಾಡಿದ್ದನ್ನ ಗಮನಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲಾಗಿದೆ. 4-5 ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸದ್ಯ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 75, 79 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ (IT Act) ಸೆಕ್ಷನ್ 66 ಮತ್ತು 67 ಅಡಿಯಲ್ಲಿ ದಾಖಲಿಸಲಾಗಿದೆ. ಈಗಾಗಲೇ ಮಹಿಳೆ ಆಯೋಗಕ್ಕೆ ಕೂಡ ದೂರು ನೀಡಲಾಗಿದೆ. ದೂರಿನ ಅನ್ವಯ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕೂಡ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಭಾಸ್ಕರ್ ಪ್ರಸಾದ್ ಎಂಬುವವರು ವಿಜಯಲಕ್ಷ್ಮಿ ಪರ ದೂರು ನೀಡಿದ್ರು ಎಂದು ಹೇಳಿಕೆ ನೀಡಿದ್ದರು. ವಿಜಯಲಕ್ಷ್ಮಿ ,ರಮ್ಯಾ ಅಂತಲ್ಲ ಯಾವುದೇ ಹೆಣ್ಣು ಮಕ್ಕಳ ಘನತೆಗೆ ಚ್ಯುತಿ ಬರೋತರ ಮಾಡಿದ್ರೆ ಕ್ರಮ ತೆಗೆದುಕೊಳ್ಳಲಾಗಿವುದು. ಈಗಾಗಲೇ ಎಂಟು ಜನ ಅರೆಷ್ಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾತಾಡೊದಕ್ಕೆ ಮುಂಚೆ ಎಚ್ಚರ ಇರಬೇಕು. ಆರೋಗ್ಯಕರ ಚರ್ಚೆ ಆದ್ರೆ ಒಕೆ ಚ್ಯುತಿ ಬರೋತರ ಮಾಡಿದ್ರೆ ಜೈಲು ಆಗುತ್ತೆ ಮೂರು ವರ್ಷ ಜೈಲು ಕೂಡ ಕಾಣ್ಬೇಕಾಗುತ್ತೆ ಎಂದು ಹೇಳಿದ್ದರು.

ಇತ್ತೀಚೆಗೆ ನಟಿ ರಮ್ಯಾ (ದಿವ್ಯಾ ಸ್ಪಂದನಾ) ಅವರಿಗೂ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್ ಮಾಡಲಾಗಿತ್ತು. ಆ ಪ್ರಕರಣ ಇನ್ನೂ ಜನರ ಗಮನ ಸೆಳೆದಿರುವ ಹೊತ್ತಿಗೇ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರಿಗೂ ಇದೇ ರೀತಿಯ ಅವಮಾನ ನಡೆದಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ನಡವಳಿಕೆಯ ಗಂಭೀರತೆಯನ್ನು ತೋರಿಸುತ್ತದೆ.