ನಟಿ ರಮ್ಯಾಗೆ ಕೆಟ್ಟ ಕಮೆಂಟ್ ಮಾಡಿ ಅವಹೇಳನ ಮಾಡಿದ ಕೆಲವರು ಅರೆಸ್ಟ್ ಆಗಿದ್ದಾರೆ. ಆದರೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ಅವಹೇಳನ ಮಾಡಿದವರು ಅರೆಸ್ಟ್ ಯಾಕಿಲ್ಲ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಬೆಂಗಳೂರು (ಆ.18) ಧರ್ಮಸ್ಥಳ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕೆಲ ತಿರುವು ಪಡೆದುಕೊಳ್ಳುತ್ತಿದೆ. ಇಂದು ಸದನದಲ್ಲೂ ಧರ್ಮಸ್ಥಳ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದೆ. ಎಸ್ಐಟಿ ಶವ ಶೋಧ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ ಆಯೋಜನೆಗೊಂಡ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ಮಾತನಾಡಿದ ಸಿಟಿ ರವಿ, ಧರ್ಮಸ್ಥಳ ವಿರುದ್ದ ಮಾಡುತ್ತಿರುವ ಅಪಪ್ರಚಾರದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದಿದ್ದಾರೆ. ನಟಿ ರಮ್ಯಾ ಪೋಸ್ಟ್‌ಗೆ ಕೆಟ್ಟ ಕಮೆಂಟ್ ಮಾಡಿದ, ನಟಿಯನ್ನು ಅವಹೇಳನ ಮಾಡಿದ ಕೆಲವರು ಅರೆಸ್ಟ್ ಆಗಿದ್ದಾರೆ. ಆದರೆ ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಒಂದೂ ಕೇಸ್ ಹಾಕಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

ಸ್ನೇಹಾ ಹಿರೇಮಠ್, ಲವ್ ಜಿಹಾದ್ ಬಗ್ಗೆ ಯೂಟ್ಯೂಬರ್ ಮೌನ

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕಿದೆ. ಆದರೆ ಸೌಜನ್ಯ ಹತ್ಯೆಯ ನೆಪದಲ್ಲಿ ಧರ್ಮಶ್ರದ್ಧೆಯನ್ನ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಯೂಟ್ಯೂಬರ್ ಸಮೀರ್ ಧರ್ಮಸ್ಥಳ ವಿರುದ್ಧ ಮಾತನಾಡುತ್ತಿದ್ದಾನೆ. ಆದರೆ ಸ್ನೇಹಾ ಹಿರೇಮಠ್, ಲವ್ ಜಿಹಾದ್ ಬಗ್ಗೆ ಒಂದು ಮಾತು ಆಡುತ್ತಿಲ್ಲ. ಮೌಲ್ವಿಯಿಂದ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ಕುರಿತು ಮಾತನಾಡಲಿಲ್ಲ. ಆದರೆ ಸೌಜನ್ಯ ವಿಚಾರ ತೆಗೆದುಕೊಂಡು ಧರ್ಮಸ್ಥಳ ವಿರುದ್ಧ ಮಾತನಾಡಲು ಆರಂಭಿಸಿದ್ದ. ಲಕ್ಷಾಂತರ ಭಕ್ತರ ಶ್ರದ್ಧೆಯನ್ನ ಭಂಗ ಮಾಡಲು ಈ ವಿಚಾ ಕೈಗೆತ್ತಿಕೊಂಡಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ದೂರುದಾರನ ಮಂಪರು ಪರೀಕ್ಷೆಯಾಗಲಿ

ಯಾವುದೇ ತನಿಖೆಯಾಗಲಿ ಸತ್ಯ ಹೊರಬರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹತ್ತಿರದಿಂದ ನೋಡಿದ್ದೇನೆ. ಸಿಎಂಗೆ ಧರ್ಮಶ್ರದ್ಧೆಗಿಂತ ನಕ್ಸಲರ ಮಾತು ಆಪ್ತವಾಗಿದೆ. ದೂರುದಾರನ ಹೇಳಿದ ರೀತಿ ಎಲ್ಲಾ ಕಡೆ ಗುಂಡಿ ಅಗೆದಿದ್ದೀರಿ. ಆದರೆ ಅದಕ್ಕಿಂತ ಮೊದಲು ದೂರುದಾರನ ವಿಚಾರಣೆ, ಮಂಪರು ಪರೀಕ್ಷೆ ಮಾಡಬೇಕು. ಈಗಲೂ ಸರ್ಕಾರ ಮಾಡದಿದ್ದರೆ, ತಪ್ಪು ಮಾಡಿದೆ ಎಂದೆನಿಸುತ್ತದೆ. ಅತ್ಯಾಚಾರಿಗಳನ್ನು ಸಮರ್ಥನೆ ಮಾಡುತ್ತಿಲ್ಲ ಎಂದು ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.

ಇದರ ಹಿಂದೆ ಯಾರಿದ್ದಾರೆ?

ದುಬೈನಿಂದ ಅಲ್‌ಜಜಿರಾ ಧರ್ಮಸ್ಥಳ ಪ್ರಕರಣ ಪ್ರಸಾರ ಮಾಜಿದೆ. ಈ ಪ್ರಕರಣಕ್ಕೆ ಎಸ್‌ಡಿಪಿಐ ಎಂಟ್ರಿಯಾಗಿದೆ. ಧರ್ಮಸ್ಥಳ ಪ್ರಕರಣದಲ್ಲಿ ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಮುಖ್ಯಮಂತ್ರಿಗಳಿಗೆ ನೀವು ಹೇಗೆ ಜಾತ್ಯಾತೀತರಾಗುತ್ತೀರಿ. ಡಿಸಿಎಂ ಷಡ್ಯಂತ್ರ ಆಗಿದೆ ಎಂದರು, ಯಾರು ಎಂದು ತಿಳಿದುಕೊಂಡು ಕ್ರಮಕೈಗೊಳ್ಳಿ ಎಂದಿದ್ದಾರೆ. ಕಮ್ಯೂನಿಸ್ಟ್‌ ನಲ್ಲಿ ಮೂರು ಬಿಟ್ಟಿದ್ದು ಸ್ತ್ರಿವಾದ ನಾ..? ಸನಾತನ ಧರ್ಮದವರಿಗೆ ಸ್ತ್ರಿವಾದ ಹೇಳಬೇಡಿ. ಅಪರಾಧಿ ಯಾರೇ ಇದ್ರೂ ಶಿಕ್ಷೆಯಾಗಲಿ ಎಂದು ಸಿಟಿ ರವಿ ಒತ್ತಾಯಿಸಿದ್ದಾರೆ

ಧರ್ಮಸ್ಥಳ ಪ್ರಕರಣ, ಎಸ್ಐಟಿ ತನಿಖೆ ಕುರಿತು ಇಂದು ಸದನದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಮಾತನಾಡಿದ್ದಾರೆ. ಶವ ಶೋಧನೆಯಲ್ಲಿ ದೂರುದಾರ ಹೇಳಿದಂತೆ ಅಸ್ಥಿಪಂಜರ ಸಿಕ್ಕಿಲ್ಲ. ಸಿಕ್ಕಿರುವ ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ವರದಿ ಕಳುಹಿಸಲಾಗಿದೆ. ಹೀಗಾಗಿ ಸದ್ಯ ಎಸ್ಐಟಿ ಶವ ಶೋಧನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಅಪಪ್ರಚಾರ ಮಾಡುವ ಯೂಟ್ಯೂಬರ್ಸ್ ವಿರುದ್ಧವೂ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿಗೆ ನಿಲ್ಲಿಸಿದರೆ ಉತ್ತಮ. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.