'ತಿಥಿ' ಸಿನಿಮಾದ ಸೆಂಚುರಿ ಗೌಡ ಖ್ಯಾತಿಯ ಸಿಂಗ್ರಿ ಗೌಡ ಅವರು ನೂರಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದಕ್ಕೂ ಒಂದೂವರೆ ತಿಂಗಳ ಹಿಂದೆ ಅದೇ ಚಿತ್ರದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಕೂಡ ನಿಧನರಾಗಿದ್ದರು. 

ಬೆಂಗಳೂರು (ಜ.5): ತಿಥಿ ಸಿನಿಮಾದಲ್ಲಿ ಸೆಂಚರಿ ಗೌಡ ಪಾತ್ರದಲ್ಲಿ ನಟಿಸಿದ್ದ ಸಿಂಗ್ರಿ ಗೌಡ ಭಾನುವಾರ ರಾತ್ರಿ ನಿಧನರಾದರು. ಅವರಿಗೆ ನೂಕ್ಕೂ ಹೆಚ್ಚು ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ತಿಥಿ ಸಿನಿಮಾದಲ್ಲಿ ಸೆಂಚುರಿ ಗೌಡ ಅವರ ಜೊತೆಯ್ಲಿ ನಟಿಸಿದ್ದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ನಿಧನರಗಿ ಒಂದೂವರೆ ತಿಂಗಳಲ್ಲೇ ಅದೇ ಸಿನಿಮಾದ ಮತ್ತೊಬ್ಬ ಪಾತ್ರಧಾರಿ ಮೃತಪಟ್ಟಿದ್ದಾರೆ. ಗಡ್ಡಪ್ಪ ಚನ್ನೇಗೌಡ ಅವರು ಕಳೆದ ವರ್ಷದ ನವೆಂಬರ್‌ 12 ರಂದು ಸಾವು ಕಂಡಿದ್ದರು. ಇನ್ನು ಸೆಂಚುರಿ ಗೌಡ ಖ್ಯಾತಿಯ ಸಿಂಗ್ರಿ ಗೌಡ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ತಿಥಿ ಸಿನಿಮಾಕ್ಕೆ ಕೇವಲ 20 ಸಾವಿರ ಸಂಭಾವನೆ ಪಡೆದಿದ್ದ ಸಿಂಗ್ರಿ ಗೌಡ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನ ಸಿಂಗ್ರಿಗೌಡರು ಇಂದು 'ಸೆಂಚುರಿ ಗೌಡ' ಎಂದೇ ಜನರಿಗೆ ಪರಿಚಿತರಾಗಿದ್ದರು. 2015ರಲ್ಲಿ ತೆರೆಕಂಡ 'ತಿಥಿ' ಸಿನಿಮಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಕೇವಲ ಸಿನಿಮಾ ಮಾತ್ರವಲ್ಲದೆ, ಸಾಯುವ ಕೊನೆ ಸಮಯದವರೆಗೂ ಅನೇಕರು ಅವರ ಗ್ರಾಮಕ್ಕೆ ಭೇಟಿ ನೀಡಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು.

ಸಿಂಗ್ರಿಗೌಡರು ಸಿನಿಮಾಗೆ ಬಂದಿದ್ದೇ ಒಂದು ಕಾಕತಾಳೀಯ. ಅವರ ಸ್ವಂತ ಅಣ್ಣ ಮೃತಪಟ್ಟಾಗ ನಡೆದ ತಿಥಿ ಕಾರ್ಯಕ್ಕೆ ಚಿತ್ರದ ನಿರ್ದೇಶಕರು ಬಂದಿದ್ದರು. ಅಲ್ಲಿ ಸಿಂಗ್ರಿಗೌಡರ ಮ್ಯಾನರಿಸಂ ಮತ್ತು ವ್ಯಕ್ತಿತ್ವ ಇಷ್ಟವಾದ ಕಾರಣ, ಅವರಿಗೆ ಸೆಂಚುರಿ ಗೌಡನ ಪಾತ್ರ ನೀಡಲಾಯಿತು. ಈ ಪಾತ್ರ ಎಷ್ಟು ಜನಪ್ರಿಯವಾಯಿತು ಎಂದರೆ, ಮುಂದೆ ಅವರಿಗೆ ಸಾಲು ಸಾಲು ಆಫರ್ ನೀಡಲು ಸಿನಿಮಾಗಳು ಬಂದವು. ಹಿಟ್ ಸಿನಿಮಾ 'ತಿಥಿ'ಗಾಗಿ ಸಿಂಗ್ರಿಗೌಡರಿಗೆ ಸುಮಾರು 20 ಸಾವಿರ ರೂ. ಸಂಭಾವನೆ ನೀಡಲಾಗಿತ್ತು.

ಸೋಮವಾರ ಅಂತ್ಯಸಂಸ್ಕಾರ

ಜನಪ್ರಿಯತೆ ಬಂದ ನಂತರ ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಆದರೆ, ಕೆಲವು ಸಿನಿಮಾ ತಂಡದವರು ಅವರಿಗೆ ಸಲ್ಲಬೇಕಾದ ಹಣವನ್ನು ನೀಡದೆ ಮೋಸ ಮಾಡಿದ್ದಾರೆ ಎನ್ನುವ ವರದಿಗಳೂ ಬಂದಿದ್ದವು. ತಿಥಿ ಯಶಸ್ಸಿನ ನಂತರ ಇವರು 'ತರ್ಲೆ ವಿಲೇಜ್', 'ಹಾಲು ತುಪ್ಪ', 'ಹಳ್ಳಿ ಪಂಚಾಯಿತಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಇವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಮಂಡ್ಯ ಭಾಗದ ಜನರು ಸಂತಾಪ ಸೂಚಿಸಿದ್ದಾರೆ. ಸೆಂಚುರಿ ಗೌಡ ಇವರ ಅಂತ್ಯಕ್ರಿಯೆ ಸೋಮವಾರ ಸಂಜೆ ಅವರ ಸ್ವಗ್ರಾಮದಲ್ಲಿ ನಡೆದಿದೆ.