2016ರ 'ತಿಥಿ' ಚಿತ್ರದ ಗಡ್ಡಪ್ಪ ಪಾತ್ರದಿಂದ ಪ್ರಸಿದ್ಧರಾಗಿದ್ದ ಹಿರಿಯ ನಟ ಚನ್ನೇಗೌಡ (89) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮಂಡ್ಯ ಜಿಲ್ಲೆಯ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಕೊನೆಯುಸಿರೆಳೆದರು.

ಬೆಂಗಳೂರು (ನ.12): 2016ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದ ತಿಥಿ ಸಿನಿಮಾದಲ್ಲಿ ಗಡ್ಡಪ್ಪ ಪಾತ್ರದ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಚನ್ನೇಗೌಡ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾದಲ್ಲಿ ಗಡ್ಡಪ್ಪ ಪಾತ್ರದಲ್ಲಿ ಅವರ ನಟನೆಯನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಂಡ್ಯ ಜಿಲ್ಲೆಯ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ನಿಧನರಾಗಿದ್ದಾರೆ.

ನಿಧನ ಸುದ್ದಿ ಖಚಿತ ಪಡಿಸಿದ ಪುತ್ರಿ ಶೋಭಾ

ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಗ್ರಾಮದವರಾಗಿದ್ದ, 'ಗಡ್ಡಪ್ಪ' ಎಂದೇ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ನಟ ಚನ್ನೇಗೌಡ ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಚನ್ನೇಗೌಡ, ಒಂದು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಸಹ ಒಳಪಟ್ಟಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೃತರ ಪುತ್ರಿ ಶೋಭಾ ಅವರು ಈ ವಿಷಯವನ್ನು ದೃಢಪಡಿಸಿದ್ದು, ಇಂದು ಸಂಜೆ ನೊದೆಕೊಪ್ಪಲಿನಲ್ಲಿ ಗಡ್ಡಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆ್ಯಕ್ಟಿಂಗ್ ಅಂದ್ರೆ ನಮ್ಮ ತಂದೆ ಪ್ರಾಣ. ಅನಾರೋಗ್ಯದ ಕಾರಣ ಯಾವುದೇ ಸಿನಿಮಾದಲ್ಲಿ ಅಭಿನಯಿಸಲ್ಲಾಗಿಲ್ಲ. ಒಂದು ತಿಂಗಳ ಹಿಂದೆ ಬಿದ್ದು ಪೆಟ್ಟಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ಹೃದಯ ಕಾಯಿಲೆ ಕೂಡ ಇತ್ತು. 10ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಹೋಟೆಲ್ ನಡೆಸುತ್ತಿದ್ದರು ಅವಾಗಿಂದಲೂ ಗಡ್ಡಪ್ಪ ಅನ್ನೋ ಹೆಸರು ಇತ್ತು. ಆ ಹೆಸರೇ ತಿಥಿ ಸಿನಿಮಾದಲ್ಲಿ ಹೆಚ್ಚು ಪ್ರಚಾರವಾಗಿದೆ. ಮನೆ ಬಳಿಗೆ 500 ರಿಂದ 600 ಜನ ಅಭಿಮಾನಿಗಳು ಬರುತ್ತಿದ್ದರು. ಗಡ್ಡಪ್ಪ ಅವರನ್ನೆ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಸಿನಿಮಾ ಆಫರ್‌ಗಳು ಇದ್ದವು. ಆರೋಗ್ಯ ಸರಿಯಿಲ್ಲದ ಕಾರಣ ಕಳಿಸಿರಲಿಲ್ಲ. ಚೆನ್ನಾಗಿದ್ರೆ ಸಿನಿಮಾ ನಟನೆ ಮಾಡೋರು ಅವರಿಗೆ ಇಷ್ಟವಿದ್ದ ರಂಗ ಸಿನಿಮಾ ರಂಗ. ಸಿನಿಮಾ ಅಂದ್ರೆ ಹುಚ್ಚು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದರು. ಅವರಿಂದಲೇ ಮನೆ ಆರ್ಥಿಕವಾಗಿ ನಡೆಯುತ್ತಿತ್ತು. ಊಟ ಇಲ್ಲದೆ ನಮ್ಮೆಲ್ಲರನ್ನು ಸಾಕಿದ್ದಾರೆ. ಕಷ್ಟದಿಂದ ಜೀವನ ನಡೆಸುತ್ತಿದ್ದರು ಎಂದು ತಂದೆಯನ್ನು ನೆನೆದು ಪುತ್ರಿ ಶೋಭಾ ಕಣ್ಣೀರಿಟ್ಟಿದ್ದಾರೆ.

'ತಿಥಿ' ಮೂಲಕ ರಾಷ್ಟ್ರಮಟ್ಟದ ಖ್ಯಾತಿ

ನಿರ್ದೇಶಕ ರಾಮ್ ರೆಡ್ಡಿ ಅವರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಂಸೆ ಪಡೆದ 'ತಿಥಿ' ಚಿತ್ರದ ಮೂಲಕ ಗಡ್ಡಪ್ಪ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ಈ ಸಿನಿಮಾದಲ್ಲಿನ ಅವರ ಸಹಜ ಅಭಿನಯಕ್ಕಾಗಿ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. 'ತಿಥಿ' ಯಶಸ್ಸಿನ ನಂತರ, ಗಡ್ಡಪ್ಪ ಅವರು 'ತರ್ಲೆ ವಿಲೇಜ್', 'ಜಾನಿ ಮೇರಾ ನಾಮ್', 'ಹಳ್ಳಿ ಪಂಚಾಯಿತಿ' ಸೇರಿದಂತೆ ಸುಮಾರು 8 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ತಮ್ಮ ವಿಶಿಷ್ಟ ಶೈಲಿ ಮತ್ತು ಸಹಜ ನಟನೆಯ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಗಡ್ಡಪ್ಪ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅವರ ಅಪಾರ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.