ಒಂದೆಡೆ ಆರ್ಯನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ, ಮತ್ತೊಂದೆಡೆ ಶಾರುಖ್ ಖಾನ್ ಕುರಿತ ಮೆಚ್ಚುಗೆಯ ಮಾತುಗಳು. ಈ ಎರಡೂ ವಿಚಾರಗಳಿಂದ ಲಾರಿಸಾ ಬೋನೆಸಿ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಹೊಸ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿರುವ ನಟಿಯ ಮುಂದಿನ ನಡೆ ಏನಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಆರ್ಯನ್ ಖಾನ್ ಜೊತೆ ಡೇಟಿಂಗ್ ವದಂತಿ ನಡುವೆ ಶಾರುಖ್ ಖಾನ್ ಗುಣಗಾನ ಮಾಡಿದ ಲಾರಿಸಾ ಬೋನೆಸಿ; 'ಅವರೇ ಎಂದೆಂದಿಗೂ ನಂಬರ್ ಒನ್' ಎಂದ ನಟಿ!

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಅಭಿಮಾನಿಗಳ ಪಟ್ಟಿಯಲ್ಲಿ ಬ್ರೆಜಿಲಿಯನ್ ನಟಿ ಲಾರಿಸಾ ಬೋನೆಸಿ ಕೂಡ ಇದ್ದಾರೆ. ಆದರೆ ಸದ್ಯ ಲಾರಿಸಾ ಸುದ್ದಿಯಾಗುತ್ತಿರುವುದು ಕೇವಲ ಶಾರುಖ್ ಮೇಲಿನ ಅಭಿಮಾನದಿಂದಲ್ಲ. ಶಾರುಖ್ ಪುತ್ರ ಆರ್ಯನ್ ಖಾನ್ ಜೊತೆಗಿನ ಡೇಟಿಂಗ್ ವದಂತಿಗಳೂ ಅವರ ಹೆಸರನ್ನು ಮುನ್ನೆಲೆಗೆ ತಂದಿವೆ. ಈ ನಡುವೆ ಶಾರುಖ್ ಖಾನ್ ಅವರನ್ನು ಮನಸಾರೆ ಹೊಗಳಿರುವ ಲಾರಿಸಾ, ಅವರು ಎಂದೆಂದಿಗೂ ನಂಬರ್ ಒನ್ ಎಂದು ಕೊಂಡಾಡಿದ್ದಾರೆ. ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಬ್ರೆಜಿಲ್‌ನಲ್ಲಿ ಜನಿಸಿದ ಲಾರಿಸಾ, ಕಳೆದ ಹದಿನಾರು ವರ್ಷಗಳಿಂದ ಭಾರತದಲ್ಲೇ ನೆಲೆಸಿದ್ದಾರೆ. ಮಾಡೆಲಿಂಗ್ ಮೂಲಕ ವೃತ್ತಿಜೀವನ ಆರಂಭಿಸಿ, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಅವರು, ಇದೀಗ ‘1920: ಕೋಲ್ಡ್ ವಿಂಟರ್’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಹಾಗಾದರೆ ಭಾರತಕ್ಕೆ ಬಂದ ಲಾರಿಸಾ ಇಲ್ಲಿಯೇ ಉಳಿದುಕೊಂಡಿದ್ದೇಕೆ? ಆರ್ಯನ್ ಖಾನ್ ಜೊತೆಗಿನ ವದಂತಿಗಳ ಹಿಂದಿನ ವಿಚಾರವೇನು?

ಬ್ರೆಜಿಲ್‌ನಿಂದ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದ ನಟಿ!

ಸುಮಾರು ಹದಿನಾರು ವರ್ಷಗಳ ಹಿಂದೆ ವೃತ್ತಿ ಅವಕಾಶಗಳ ಹುಡುಕಾಟದಲ್ಲಿ ಭಾರತಕ್ಕೆ ಬಂದ ಲಾರಿಸಾ ಬೋನೆಸಿ, ಮುಂಬೈನಲ್ಲಿ ನೆಲೆಸಿದರು. ಆರಂಭದಲ್ಲಿ ಕೆಲಸದ ನಿಮಿತ್ತ ಬಂದಿದ್ದ ಅವರಿಗೆ ಕ್ರಮೇಣ ಭಾರತದ ವಾತಾವರಣ, ಇಲ್ಲಿನ ಜನರು ಮತ್ತು ಸಂಸ್ಕೃತಿಯ ಮೇಲೆ ಪ್ರೀತಿ ಬೆಳೆಯಿತು. ಭಾರತೀಯರು ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ, ಕುಟುಂಬದ ಸದಸ್ಯೆಯಂತೆ ನೋಡಿಕೊಂಡರು. ಇದೇ ಕಾರಣಕ್ಕೆ ಭಾರತವನ್ನೇ ತಮ್ಮ ಮನೆಯಾಗಿ ಸ್ವೀಕರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ತಾನು ಬ್ರೆಜಿಲಿಯನ್‌ಗಿಂತ ಹೆಚ್ಚು ಭಾರತೀಯಳಂತೆ ಭಾವಿಸುತ್ತೇನೆ ಎಂದು ಲಾರಿಸಾ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಹಿಂದಿ ಭಾಷೆಯನ್ನು ಕಲಿಯಲು ಆಟೋ ಚಾಲಕರ ಜೊತೆ ಮಾತನಾಡುತ್ತಿದ್ದುದಾಗಿ ನೆನಪಿಸಿಕೊಂಡಿರುವ ಅವರು, ಈಗ ಆರು ಭಾಷೆಗಳನ್ನು ಮಾತನಾಡಬಲ್ಲರು. ವಿದೇಶದಿಂದ ಬಂದಿದ್ದರೂ ಭಾರತೀಯ ಜೀವನಶೈಲಿಗೆ ಹೊಂದಿಕೊಂಡಿರುವ ಅವರ ಪಯಣ ಅನೇಕರಿಗೆ ಕುತೂಹಲ ಮೂಡಿಸಿದೆ.

ಮರಣಕ್ಕೂ ಸ್ವಲ್ಪ ಕಾಲದ ಮೊದಲು ಮಾಲಾಶ್ರೀಗೆ ನಟ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

'ದೇಸಿ ಬಾಯ್ಸ್' ಹಾಡಿನಿಂದ ಸಿನಿಮಾ ರಂಗಕ್ಕೆ ಎಂಟ್ರಿ!

ಲಾರಿಸಾ ಅವರ ಮನರಂಜನಾ ಕ್ಷೇತ್ರದ ಪಯಣವೂ ಸಾಕಷ್ಟು ಆಸಕ್ತಿದಾಯಕವಾಗಿದೆ. ‘ದೇಸಿ ಬಾಯ್ಸ್’ ಚಿತ್ರದ ಹಾಡಿನ ಮೂಲಕ ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾದ ಅವರು, ಬಳಿಕ ‘ಗೋ ಗೋವಾ ಗೋನ್’ ಚಿತ್ರದಲ್ಲೂ ಕಾಣಿಸಿಕೊಂಡರು. ತೆಲುಗಿನ ‘ನೆಕ್ಸ್ಟ್ ಏಂಟಿ’ ಸಿನಿಮಾದಲ್ಲಿಯೂ ನಟಿಸಿ ಗಮನ ಸೆಳೆದಿದ್ದಾರೆ.

ಸಿನಿಮಾಗಳ ಜೊತೆಗೆ ಹಲವು ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲೂ ಲಾರಿಸಾ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ವಿಕ್ರಮ್ ಭಟ್ ನಿರ್ದೇಶನದ ‘1920: ಕೋಲ್ಡ್ ವಿಂಟರ್’ ಚಿತ್ರದಲ್ಲಿ ನಟಿಸುತ್ತಿದ್ದು, ಅಹಾನ್ ಶೆಟ್ಟಿ ಮತ್ತು ಅನನ್ಯ ಸಿಂಗ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಹೆಜ್ಜೆ ಮುಂದಿಡುವ ನಿರೀಕ್ಷೆಯಲ್ಲಿದ್ದಾರೆ.

ಆರ್ಯನ್ ಖಾನ್ ಜೊತೆಗಿನ ಡೇಟಿಂಗ್ ವದಂತಿಗೆ ಬ್ರೇಕ್ ಹಾಕ್ತಾರಾ?

ಇತ್ತೀಚಿನ ದಿನಗಳಲ್ಲಿ ಲಾರಿಸಾ ಬೋನೆಸಿ ಹೆಸರು ಆಗಾಗ ಆರ್ಯನ್ ಖಾನ್ ಜೊತೆ ತಳುಕು ಹಾಕಿಕೊಳ್ಳುತ್ತಿದೆ. ಖಾನ್ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅದರಲ್ಲೂ 2025ರ ಸೆಪ್ಟೆಂಬರ್‌ನಲ್ಲಿ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಚಿತ್ರದ ಪ್ರೀಮಿಯರ್ ಕಾರ್ಯಕ್ರಮಕ್ಕೆ ಲಾರಿಸಾ ಆಗಮಿಸಿದ್ದು ಚರ್ಚೆಗೆ ಕಾರಣವಾಗಿತ್ತು.

ಇದಾದ ಬಳಿಕ ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಆರ್ಯನ್ ಆಗಲಿ, ಲಾರಿಸಾ ಆಗಲಿ ತಮ್ಮ ಸಂಬಂಧದ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಸದ್ಯಕ್ಕೆ ಇವೆಲ್ಲವೂ ವದಂತಿಗಳಾಗಿಯೇ ಉಳಿದಿವೆ.

ಶಾರುಖ್ ಖಾನ್ ಅವರೇ ಎಂದೆಂದಿಗೂ ನಂಬರ್ ಒನ್!

ಆರ್ಯನ್ ಖಾನ್ ಜೊತೆಗಿನ ವದಂತಿಗಳ ನಡುವೆಯೇ ಲಾರಿಸಾ ಇದೀಗ ಅವರ ತಂದೆ ಶಾರುಖ್ ಖಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶಾರುಖ್ ಅವರನ್ನು ನಿಜವಾದ ದಂತಕಥೆ ಎಂದು ಬಣ್ಣಿಸಿರುವ ಅವರು, ಅವರೇ ಎಂದೆಂದಿಗೂ ನಂಬರ್ ಒನ್ ಎಂದು ಹೇಳಿದ್ದಾರೆ.

“ಶಾರುಖ್ ಖಾನ್ ನಿಜವಾದ ಲೆಜೆಂಡ್. ಅವರು ಎಂದೆಂದಿಗೂ ನಂಬರ್ ಒನ್. ಅವರಿಂದ ಜನರು ಕಲಿಯಬಹುದಾದ ಸಾಕಷ್ಟು ವಿಚಾರಗಳಿವೆ” ಎಂಬರ್ಥದಲ್ಲಿ ಲಾರಿಸಾ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಒಂದೆಡೆ ಆರ್ಯನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ, ಮತ್ತೊಂದೆಡೆ ಶಾರುಖ್ ಖಾನ್ ಕುರಿತ ಮೆಚ್ಚುಗೆಯ ಮಾತುಗಳು. ಈ ಎರಡೂ ವಿಚಾರಗಳಿಂದ ಲಾರಿಸಾ ಬೋನೆಸಿ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಹೊಸ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿರುವ ನಟಿಯ ಮುಂದಿನ ನಡೆ ಏನಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.